ಎಸಿಬಿ ಹಾಗೂ ಅದರ ಎಡಿಜಿಪಿ ಕುರಿತು ಕರ್ನಾಟಕ ಹೈಕೋರ್ಟ್‌ ಮಾಡಿದ್ದ ಅವಲೋಕನ ಹಾಗೂ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆ

ಸದರಿ ಪ್ರಕರಣವನ್ನು ಹೈಕೋರ್ಟ್‌ನ ಮತ್ತೊಂದು ಪೀಠಕ್ಕೆ ವರ್ಗಾಯಿಸುವಂತೆ ಕೋರಿದ ಅರ್ಜಿದಾರರ ಮನವಿಯನ್ನು ಸರ್ವೋಚ್ಚ ನ್ಯಾಯಾಲಯವು ತಿರಸ್ಕರಿಸಿದೆ.
Supreme Court and Anti-Corruption Bureau ADGP Seemanth Kumar Singh
Supreme Court and Anti-Corruption Bureau ADGP Seemanth Kumar SinghTwitter
Published on

ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಎಚ್‌ ಪಿ ಸಂದೇಶ್‌ ಅವರು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಮತ್ತು ಅದರ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ಎಡಿಜಿಪಿ) ಸೀಮಂತ್‌ ಕುಮಾರ್‌ ಸಿಂಗ್‌ ಅವರ ವಿರುದ್ಧ ಜುಲೈ 7ರ ಆದೇಶದಲ್ಲಿ ಮಾಡಿದ್ದ ಅವಲೋಕನಗಳಿಗೆ ಹಾಗೂ ಆದೇಶಕ್ಕೆ ಸುಪ್ರೀಂ ಕೋರ್ಟ್‌ ಸೋಮವಾರ ತಡೆ ನೀಡಿದೆ.

ಎಸಿಬಿ ಎಡಿಜಿಪಿ ಸೀಮಂತ್‌ ಕುಮಾರ್‌ ಸಿಂಗ್‌ ಮತ್ತು ಜೆ ಮಂಜುನಾಥ್‌ ಅವರು ಪ್ರತ್ಯೇಕವಾಗಿ ಸಲ್ಲಿಸಿದ್ದ ವಿಶೇಷ ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ, ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಹಿಮಾ ಕೊಹ್ಲಿ ಅವರ ನೇತೃತ್ವದ ತ್ರಿಸದಸ್ಯ ಪೀಠವು ನಡೆಸಿತು.

ತಮ್ಮ ಮುಂದಿರುವ ಜಾಮೀನು ಮನವಿಯನ್ನು ನಿರ್ಧರಿಸುವಂತೆ ನ್ಯಾಯಮೂರ್ತಿ ಎಚ್‌ ಪಿ ಸಂದೇಶ್‌ ಅವರಿಗೆ ಸುಪ್ರೀಂ ಕೋರ್ಟ್‌ ಆದೇಶ ಮಾಡಿದ್ದು, ಹೈಕೋರ್ಟ್‌ ನಿರ್ದೇಶನ ಮತ್ತು ಅಭಿಪ್ರಾಯಗಳು ಪ್ರಕರಣಕ್ಕೆ ಸಂಬಂಧಪಟ್ಟಿಲ್ಲ ಎಂದಿದೆ.

ಸೀಮಂತ್‌ ಕುಮಾರ್‌ ಅವರ ಸೇವಾ ದಾಖಲೆ ಕೇಳಿರುವುದು, ಎಸಿಬಿ ಸಲ್ಲಿಸಿರುವ ಬಿ ರಿಪೋರ್ಟ್‌ಗಳ ವರದಿ, ಎಸಿಬಿ ಇತ್ಯಾದಿಯ ವಿರುದ್ಧ ಹೈಕೋರ್ಟ್‌ ವ್ಯಕ್ತಪಡಿಸಿರುವ ಅವಲೋಕನಗಳಿಗೆ ತಡೆ ನೀಡಲಾಗಿದೆ. ಜಾಮೀನು ಮನವಿಗೂ ಹೈಕೋರ್ಟ್‌ ವ್ಯಕ್ತಪಡಿಸಿರುವ ಅಭಿಪ್ರಾಯಗಳಿಗೂ ಮೇಲ್ನೋಟಕ್ಕೆ ಯಾವುದೇ ಸಂಬಂಧವಿಲ್ಲ. ಜಾಮೀನು ಮನವಿಯ ವಿಚಾರಣಾ ವ್ಯಾಪ್ತಿಗೆ ಒಳಪಟ್ಟು ಅಭಿಪ್ರಾಯ ವ್ಯಕ್ತಪಡಿಸಲಾಗಿಲ್ಲ. ಜಾಮೀನು ಮನವಿ ಹಾಗೂ ಎಸಿಬಿ ಅಧಿಕಾರಿಯ ನಡೆತೆಗೆ ಯಾವುದೇ ಸಂಬಂಧವಿಲ್ಲ. ಹೈಕೋರ್ಟ್‌ ಜಾಮೀನು ಮನವಿ ನಿರ್ಧರಿಸಬೇಕು” ಎಂದು ಸರ್ವೋಚ್ಚ ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ಎಸಿಬಿ ಮತ್ತು ಎಡಿಜಿಪಿ ವಿರುದ್ಧದ ಪ್ರಕ್ರಿಯೆಗೆ ತಡೆ ನೀಡಿರುವ ಸುಪ್ರೀಂ ಕೋರ್ಟ್, ನ್ಯಾ. ಸಂದೇಶ್‌ ಅವರು ಆಕ್ಷೇಪಾರ್ಹ ಆದೇಶದಲ್ಲಿ ಮಾಡಿರುವ ಹೇಳಿಕೆಗಳನ್ನು ಕೈಬಿಡುವುದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ರಿಜಿಸ್ಟ್ರಾರ್‌ಗೆ ನೋಟಿಸ್‌ ಜಾರಿ ಮಾಡಿದೆ.

Also Read
ನ್ಯಾ. ಸಂದೇಶ್‌ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಎಸಿಬಿ

ಈ ಮಧ್ಯೆ, ಸದರಿ ಪ್ರಕರಣವನ್ನು ಹೈಕೋರ್ಟ್‌ನ ಮತ್ತೊಂದು ಪೀಠಕ್ಕೆ ವರ್ಗಾಯಿಸುವಂತೆ ಕೋರಿದ ಅರ್ಜಿದಾರರ ಕೋರಿಕೆಯನ್ನು ಸರ್ವೋಚ್ಚ ನ್ಯಾಯಾಲಯವು ತಿರಸ್ಕರಿಸಿದೆ. ಕಳೆದ ವಿಚಾರಣೆಯಲ್ಲಿ ಜಾಮೀನು ಮನವಿಯ ವಿಚಾರಣೆಯನ್ನು ಮೂರು ದಿನ ಮುಂದೂಡುವಂತೆ ಸುಪ್ರೀಂ ಕೋರ್ಟ್‌ಗೆ ಹೈಕೋರ್ಟ್‌ ನಿರ್ದೇಶಿಸಿತ್ತು.

Also Read
ಹೈಕೋರ್ಟ್‌ ಆದೇಶದ ಯಾವ ಅಂಶಗಳನ್ನು ತೆಗೆದು ಹಾಕಲು ಬಂಧಿತ ಐಎಎಸ್‌ ಅಧಿಕಾರಿ ಮಂಜುನಾಥ್‌ ಸುಪ್ರೀಂ ಮುಂದೆ ಕೋರಿದ್ದಾರೆ?

ಇಡೀ ವಿವಾದಕ್ಕೆ ನಾಂದಿಯಾಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯ ಉಪ ತಹಶೀಲ್ದಾರ್‌ ಪಿ ಎಸ್‌ ಮಹೇಶ್‌ ಅವರ ಜಾಮೀನು ಮನವಿಯ ವಿಚಾರಣೆಯನ್ನು ನ್ಯಾ. ಸಂದೇಶ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಸೋಮವಾರ ಮಧ್ಯಾಹ್ನ ನಡೆಸಲಿದೆ.

Kannada Bar & Bench
kannada.barandbench.com