[ಲಂಚ ಪ್ರಕರಣ] ಇಬ್ಬರು ಸಬ್‌ ರಿಜಿಸ್ಟ್ರಾರ್‌ ಸೇರಿ ನಾಲ್ವರಿಗೆ ವಿಚಾರಣೆ ಎದುರಿಸಲು ಹೈಕೋರ್ಟ್‌ ನಿರ್ದೇಶನ

ಆರೋಪಿಗಳ ವಿರುದ್ಧದ ಎಫ್‌ಐಆರ್‌, ದೂರು ಮುಂತಾದವುಗಳನ್ನು ಹಾಗೂ ತಮ್ಮ ಮುಂದಿರುವ ದಾಖಲೆಗಳನ್ನು ಪರಿಗಣಿಸಿ 2010ರ ಜುಲೈ 6ರಂದು ಸರ್ಕಾರ ಪ್ರಾಸಿಕ್ಯೂಷನ್‌ಗೆ ಅನುಮತಿಸಿತ್ತು ಎಂಬ ಲೋಕಾಯುಕ್ತ ಪೊಲೀಸರ ವಾದವನ್ನು ಪೀಠವು ಪುರಸ್ಕರಿಸಿದೆ.
Justice Dr. H B Prabhakara Sastry
Justice Dr. H B Prabhakara Sastry
Published on

ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಸಬ್‌ ರಿಜಿಸ್ಟ್ರಾರ್‌ಗಳು ಸೇರಿದಂತೆ ನಾಲ್ವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ಪ್ರಕ್ರಿಯೆ ಪುನಾರಂಭಿಸಲು ಕರ್ನಾಟಕ ಹೈಕೋರ್ಟ್‌ ಈಚೆಗೆ ಆದೇಶ ಮಾಡಿದೆ.

ಪ್ರಾಸಿಕ್ಯೂಷನ್‌ ಒಪ್ಪಿಗೆ ಅಸಿಂಧು ಎಂದು ಆರೋಪಿಗಳ ವಿರುದ್ಧದ ಪ್ರಕ್ರಿಯೆ ರದ್ದುಪಡಿಸಿದ್ದ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಕ್ರಿಮಿನಲ್‌ ತೀರ್ಪು ಮರುಪರಿಶೀಲನಾ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಾ. ಎಚ್‌ ಬಿ ಪ್ರಭಾಕರ ಶಾಸ್ತ್ರಿ ಅವರ ನೇತೃತ್ವದ ಏಕಸದಸ್ಯ ಪೀಠವು ಆದೇಶ ಮಾಡಿದೆ.

ಆರೋಪಿಗಳು 2022ರ ಆಗಸ್ಟ್‌ 10ರಂದು ವಿಶೇಷ ನ್ಯಾಯಾಲಯದ ಮುಂದೆ ಹಾಜರಾಗಬೇಕು. ಲಂಚ ಪ್ರಕರಣವನ್ನು 2005ರಲ್ಲಿ ದಾಖಲಿಸಿರುವುದನ್ನು ಪ್ರರಿಗಣಿಸಿ ವಿಶೇಷ ನ್ಯಾಯಾಲಯವು ಆರು ತಿಂಗಳಲ್ಲಿ ವಿಚಾರಣೆ ಪೂರ್ಣಗೊಳಿಸಬೇಕು ಎಂದು ಹೈಕೋರ್ಟ್‌ ಮನವಿ ಮಾಡಿದೆ.

ಬೆಂಗಳೂರಿನ ಜಯನಗರದ ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ 2005ರ ಅವಧಿಯಲ್ಲಿ ಸಬ್‌ ರಿಜಿಸ್ಟ್ರಾರ್‌ಗಳಾದ ವೆಂಕಟೇಶ್‌ ಭಟ್‌, ಕೆ ಆರ್‌ ರೇಣುಕಾ ಪ್ರಸಾದ್‌, ಪ್ರಥಮ ದರ್ಜೆ ಸಹಾಯಕ ಎಲ್‌ ವಿ ಷಡಕ್ಷರಿ ಮತ್ತು ಖಾಸಗಿ ವ್ಯಕ್ತಿ ಎಸ್‌ ನಟರಾಜ್‌ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.

ದಾಖಲೆಯೊಂದರ ನೋಂದಣಿಗೆ ಆರೋಪಿಗಳು 20 ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದು, ಅಂತಿಮವಾಗಿ 18 ಸಾವಿರ ರೂಪಾಯಿ ಪಡೆದುಕೊಂಡಿದ್ದರು. ಆರೋಪಿಗಳ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಲೋಕಾಯುಕ್ತ ಪೊಲೀಸರು ಕಂದಾಯ ಇಲಾಖೆಗೆ ಕೋರಿಕೆ ಸಲ್ಲಿಸಿದ್ದರು. ಇದಕ್ಕೆ ಪ್ರತಿಯಾಗಿ ಆರೋಪಿಗಳ ವಿರುದ್ಧ ಇಲಾಖಾ ತನಿಖೆ ನಡೆಸಲು 2006ರ ಫೆಬ್ರವರಿ 13ರಂದು ಸರ್ಕಾರ ಆದೇಶ ಮಾಡಿತ್ತು. ಆನಂತರ 2010ರ ಜುಲೈ 6ರಂದು ಹೊಸದಾಗಿ ಪ್ರಾಸಿಕ್ಯೂಷನ್‌ಗೆ ಅನುಮತಿ ದೊರೆತಿದ್ದು, ವಿಶೇಷ ನ್ಯಾಯಾಲಯವು ಸಮನ್ಸ್‌ ಜಾರಿ ಮಾಡಿತ್ತು.

ಆನಂತರ ಆರೋಪಿಗಳು ಪ್ರಕರಣದಿಂದ ಆರೋಪ ಮುಕ್ತಿ ಕೋರಿ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದನ್ನು ಪರಿಗಣಿಸಿದ್ದ ವಿಶೇಷ ನ್ಯಾಯಾಲಯವು 2006ರಲ್ಲಿ ರಾಜ್ಯ ಸರ್ಕಾರವು ಪ್ರಾಸಿಕ್ಯೂಷನ್‌ಗೆ ಅನುಮತಿ ನಿರಾಕರಿಸಿತ್ತು ಎಂದು 2017ರ ಡಿಸೆಂಬರ್‌ 15ರಲ್ಲಿ ಆದೇಶ ಹೇಳಿತ್ತು. ಅಲ್ಲದೇ, ಬದಲಾದ ಕಾಲಮಾನದಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಕಾನೂನಿನ ಅಡಿ ಅಸಿಂಧುವಾಗುತ್ತದೆ ಎಂದು ಹೇಳಿತ್ತು.

ಲೋಕಾಯುಕ್ತ ಪೊಲೀಸರನ್ನು ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎಸ್‌ ಪ್ರಸಾದ್‌ ಅವರು 2006ರಲ್ಲಿ ಪ್ರಾಸಿಕ್ಯೂಷನ್‌ ಅನುಮತಿ ನಿರಾಕರಿಸಿರಲಿಲ್ಲ. ಇಲಾಖಾ ತನಿಖೆಯು ಕ್ರಿಮಿನಲ್‌ ಪ್ರಾಸಿಕ್ಯೂಷನ್‌ ಅಗತ್ಯತೆ ಪೂರೈಸುತ್ತದೆ ಎಂದು ಹೇಳಿಲ್ಲ. ಆರೋಪಿಗಳ ವಿರುದ್ಧದ ಎಫ್‌ಐಆರ್‌, ದೂರು ಇತ್ಯಾದಿ ಹಾಗೂ ಮುಂದಿರುವ ದಾಖಲೆಗಳನ್ನು ಪರಿಗಣಿಸಿ 2010ರ ಜುಲೈ 6ರಂದು ಸರ್ಕಾರ ಪ್ರಾಸಿಕ್ಯೂಷನ್‌ಗೆ ಅನುಮತಿಸಿತ್ತು ಎಂಬ ವಾದವನ್ನು ಪೀಠವು ಪುರಸ್ಕರಿಸಿದೆ. ಆರೋಪಿಗಳ ಪರವಾಗಿ ವಕೀಲ ಸಿ ಜಿ ಸುಂದರ್‌ ವಾದ ಮಂಡಿಸಿದ್ದರು.

Kannada Bar & Bench
kannada.barandbench.com