[ಲಂಚ ಪ್ರಕರಣ] ಮಂಜುನಾಥ್‌ ಜಾಮೀನು ತೀರ್ಪು ಎರಡು ದಿನದಲ್ಲಿ ಪ್ರಕಟ; ಎಸಿಬಿ, ಅರ್ಜಿದಾರರ ವಕೀಲರಿಗೆ ಹೈಕೋರ್ಟ್‌ ತರಾಟೆ

“ಮೊದಲನೇ ಆರೋಪಿಗೆ ಡಿಫಾಲ್ಟ್‌ ಜಾಮೀನು ಸಿಕ್ಕಿದ್ದು, ಮಂಜುನಾಥ್‌ ಅವರ ಜಾಮೀನು ಅರ್ಜಿಗೂ ಯಾವುದೇ ಆಕ್ಷೇಪಣೆ ಇಲ್ಲ ಎನ್ನುತ್ತೀರಾ?” ಎಂದು ಎಸಿಬಿ ವಕೀಲರನ್ನು ಮಾರ್ಮಿಕವಾಗಿ ಪ್ರಶ್ನಿಸಿದ ಪೀಠ.
Karnataka HC , J Manjunath and ACB
Karnataka HC , J Manjunath and ACB

ಲಂಚ ಪ್ರಕರಣದಲ್ಲಿ ಬಂಧಿತರಾಗಿ ಅಮಾನತುಗೊಂಡಿರುವ ಬೆಂಗಳೂರು ನಗರದ ಹಿಂದಿನ ಜಿಲ್ಲಾಧಿಕಾರಿ ಜೆ ಮಂಜುನಾಥ್‌ ಅವರ ಜಾಮೀನು ಅರ್ಜಿಯ ತೀರ್ಪನ್ನು ಕರ್ನಾಟಕ ಹೈಕೋರ್ಟ್‌ ಸೋಮವಾರ ಕಾಯ್ದಿರಿಸಿದ್ದು, ಎರಡು ದಿನಗಳಲ್ಲಿ ಪ್ರಕಟಿಸುವುದಾಗಿ ತಿಳಿಸಿದೆ.

ಪಕ್ಷಕಾರರ ವಾದವನ್ನು ವಿಸ್ತೃತವಾಗಿ ಆಲಿಸಿದ ನ್ಯಾಯಮೂರ್ತಿ ಕೆ ನಟರಾಜನ್‌ ಅವರ ನೇತೃತ್ವದ ಏಕಸದಸ್ಯ ಪೀಠವು ತೀರ್ಪು ಕಾಯ್ದಿರಿಸಿತು.

ಅರ್ಜಿದಾರ ಮಂಜುನಾಥ್‌ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಚಂದ್ರಮೌಳಿ ಅವರು “ಜಿಲ್ಲಾಧಿಕಾರಿಯಾಗಿದ್ದ ಮಂಜುನಾಥ್‌ ಅವರು ಯಾವುದೇ ತೆರನಾದ ಲಂಚಕ್ಕೆ ಬೇಡಿಕೆ ಇಟ್ಟಿಲ್ಲ ಮತ್ತು ಸ್ವೀಕರಿಸಿಲ್ಲ. ಜಿಲ್ಲಾಧಿಕಾರಿಯು ಜಿಲ್ಲಾ ದಂಡಾಧಿಕಾರಿಯೂ ಆಗಿದ್ದು, ಭೂವಿವಾದಕ್ಕೆ ಸಂಬಂಧಿಸಿದ ಸಾವಿರಾರು ಪ್ರಕರಣಗಳು ಅವರ ಮುಂದಿರುತ್ತವೆ. ಇವುಗಳ ಕುರಿತು ಕ್ರಮವಾಗಿ ಆದೇಶ ಮಾಡಲಾಗುತ್ತದೆ. ದೂರುದಾರ ಅಜಂ ಪಾಷಾ ಅವರ ಪ್ರಕರಣ ಹೀಗಾಗಿ ತಡವಾಗಿದೆ” ಎಂದರು.

Justice K Natarajan and Karnataka HC
Justice K Natarajan and Karnataka HC

ಆಗ ಪೀಠವು ಭ್ರಷ್ಟಾಚಾರ ನಿಗ್ರಹ ದಳ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪಿ ಎನ್‌ ಮನಮೋಹನ್‌ ಅವರನ್ನು ಕುರಿತು “ಮಂಜುನಾಥ್‌ ಅವರನ್ನು ಬಂಧಿಸುವುದಕ್ಕೆ ಇರುವ ಆಧಾರವೇನು? ಮಂಜುನಾಥ್‌ ಮತ್ತು ಮೊದಲ ಆರೋಪಿಯಾದ ಉಪ ತಹಶೀಲ್ದಾರ್‌ ಪಿ ಎಸ್‌ ಮಹೇಶ್‌ ಮತ್ತು ಎರಡನೇ ಆರೋಪಿ ಚಂದ್ರುವಿನ ಜೊತೆಗೆ ಅವರ ಸಂಬಂಧವೇನು? ಹೈಕೋರ್ಟ್‌ ನಿರ್ದೇಶನದ ಹಿನ್ನೆಲೆಯಲ್ಲಿ ಮಂಜುನಾಥ್‌ ಅವರನ್ನು ಬಂಧಿಸಲಾಗಿದೆ ಎಂದು ಚಂದ್ರಮೌಳಿ ಅವರು ವಾದಿಸಿದ್ದಾರೆ” ಎಂದರು.

ಆಗ ಮನಮೋಹನ್‌ ಅವರು “ಮೊದಲನೇ ಆರೋಪಿ ಮಹೇಶ್‌ ಅವರಿಗೆ ಡಿಫಾಲ್ಟ್‌ ಜಾಮೀನು ಸಿಕ್ಕಿದೆ. ಮಂಜುನಾಥ್‌ ಅವರ ಜಾಮೀನು ಮನವಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲಾಗಿದ್ದು, ಮಂಜುನಾಥ್‌ ಅವರು ಇತರೆ ಆರೋಪಿಗಳ ಜೊತೆ ಮೇ 18ರಂದು ಸಮಾಲೋಚನೆ ನಡೆಸಿರುವ ಆಡಿಯೊ ಕ್ಲಿಪ್‌ ಇದೆ. ತನಿಖೆ ಪ್ರಗತಿಯಲ್ಲಿದೆ” ಎಂದರು.

ಆಗ ಪೀಠವು “ಎರಡನೇ ಆರೋಪಿ ಚಂದ್ರುವನ್ನು ಏತಕ್ಕಾಗಿ ಜಿಲ್ಲಾಧಿಕಾರಿಯವರ ಆಪ್ತ ಸಹಾಯಕ ಎಂದು ನೇಮಕ ಮಾಡಲಾಗಿತ್ತು? ಹಣ ಸ್ವೀಕರಿಸಲೇ? ಮೊದಲನೇ ಆರೋಪಿ ಏತಕ್ಕಾಗಿ ಜಿಲ್ಲಾಧಿಕಾರಿ ಕೊಠಡಿಗೆ ಹೋಗಿದ್ದರು ಎಂಬುದರ ಕುರಿತು ತನಿಖೆ ನಡೆಯುತ್ತಿದೆ ಎಂದು ಹೇಳಿದ್ದೀರಿ. ಮೊದಲನೇ ಆರೋಪಿಗೆ ಡಿಫಾಲ್ಟ್‌ ಜಾಮೀನು ಸಿಕ್ಕಿದ್ದು, ಮಂಜುನಾಥ್‌ ಅವರ ಜಾಮೀನು ಅರ್ಜಿಗೂ ಯಾವುದೇ ಆಕ್ಷೇಪಣೆ ಇಲ್ಲ ಎನ್ನುತ್ತೀರಾ?” ಎಂದು ಎಸಿಬಿ ವಕೀಲರನ್ನು ಮಾರ್ಮಿಕವಾಗಿ ಪ್ರಶ್ನಿಸಿತು.

ಮುಂದುವರಿದು, “ಭೂವಿವಾದಕ್ಕೆ ಸಂಬಂಧಿಸಿದ ಕರಡನ್ನು ಸಿದ್ಧಪಡಿಸಿ ಬಹುದಿನಗಳಿಂದ ಇಟ್ಟುಕೊಂಡು ಹಣಕ್ಕಾಗಿ ಕಾಯುತ್ತಿದ್ದರು ಎಂದು ಊಹಿಸಲು ಪ್ರಾಸಿಕ್ಯೂಷನ್ಸ್‌ಗೆ ಅವಕಾಶವಿದೆ. ಅಲ್ಲಿ ಹಣ ಬಂದಿದೆಯೇ ಎಂಬುದನ್ನು ನೋಡಿಕೊಂಡು ಆದೇಶ ಮಾಡಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿತ್ತು” ಎಂದು ಪೀಠ ಹೇಳಿತು.

“ತನಿಖೆ ನಡೆದಾಗ ಎಲ್ಲವೂ ತಿಳಿಯುತ್ತದೆ. ಇದಕ್ಕಾಗಿಯೇ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ತನಿಖಾ ವರದಿಯನ್ನು ಸಿದ್ಧಪಡಿಸಿ, ನ್ಯಾಯಾಲಯಕ್ಕೆ ಸಲ್ಲಿಸಬೇಕಾಗುತ್ತದೆ. ತಕ್ಷಣ ತನ್ನಿ ಎಂದರೆ ಅಧಿಕಾರಿಗಳು ಎಲ್ಲಿಂದ ತರಬೇಕು” ಎಂದು ಪೀಠವು ಅರ್ಜಿದಾರರ ವಕೀಲರನ್ನು ಕುರಿತು ಹೇಳಿತು.

ಈ ಸಂದರ್ಭದಲ್ಲಿ ಅರ್ಜಿದಾರರ ಪರ ವಕೀಲ ಚಂದ್ರಮೌಳಿ ಅವರು “ಪೀಠ ಸರಿಯಾಗಿ ಹೇಳಿದೆ. ಕಾನೂನು ಪ್ರಕ್ರಿಯೆ ಪಾಲಿಸಬೇಕಾಗುತ್ತದೆ” ಎಂದರು. ಇದಕ್ಕೆ ನ್ಯಾಯಾಲಯವು “ನಾನು ಯಾವಾಗಲೂ ತಪ್ಪು ಹೇಳಿಲ್ಲ. ನ್ಯಾಯಾಲಯವನ್ನು ಮೆಚ್ಚುವುದು ಬೇಡ. ಅದು ನನಗೆ ಇಷ್ಟವಾಗುವುದಿಲ್ಲ. ಹೊಗಳುವುದೇನಾದರೂ ಇದ್ದರೆ ಹೊರಗೆ ಹೋಗಿ ಮಾಡಿ. ಎದುರಿಗೆ ಹೊಗಳುವವರನ್ನು ನಾನು ನಂಬುವುದಿಲ್ಲ. ಒಳ್ಳೆಯ ಕೆಲಸ ಮಾಡಿರುವುದು ಕಂಡರೆ ಹೊರಗೆ ಹೋಗಿ ಹೊಗಳಬಹುದು” ಎಂದರು.

ಅಂತಿಮವಾಗಿ ಚಂದ್ರಮೌಳಿ ಅವರು “ಉಪತಹಶೀಲ್ದಾರ್‌ ಮಹೇಶ್‌ ಮತ್ತು ಎರಡನೇ ಆರೋಪಿ ಚಂದ್ರು ಅವರಿಗೂ ಮಂಜುನಾಥ್‌ ಅವರಿಗೂ ಯಾವುದೇ ಸಂಬಂಧವಿಲ್ಲ” ಎಂದರು. ಆಗ ಪೀಠವು “ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಪ್ತ ಸಹಾಯಕ ಎಂಬ ಹುದ್ದೆ ಇರುವುದಿಲ್ಲ. ಆದರೆ, ಅವರನ್ನು ನಿಯೋಜನೆ ಮಾಡಲಾಗಿರುತ್ತದೆ” ಎಂದು ಹೇಳಿ ತೀರ್ಪು ಕಾಯ್ದಿರಿಸಲಾಗಿದೆ ಎಂದಿತು.

Also Read
ಲಂಚ ಪ್ರಕರಣ: ಆಕ್ಷೇಪಣೆ ಸಲ್ಲಿಸಿಲು ಎಸಿಬಿಗೆ ನಿರ್ದೇಶನ; ಮಂಜುನಾಥ್‌ ಜಾಮೀನು ಮನವಿ ವಿಚಾರಣೆ ಮುಂದೂಡಿಕೆ

ಹೆಚ್ಚುವರಿ ಎಫ್‌ಐಆರ್‌ ಎಂದಿದ್ದಕ್ಕೆ ಆಕ್ಷೇಪಿಸಿದ ಪೀಠ

ಎಸಿಬಿಯನ್ನು ನ್ಯಾ. ಎಚ್‌ ಪಿ ಸಂದೇಶ್‌ ಅವರ ನೇತೃತ್ವದ ಪೀಠ ಪ್ರಶ್ನಿಸಿದ ಬಳಿಕ ಮಂಜುನಾಥ್‌ ಅವರ ವಿರುದ್ಧ ಹೆಚ್ಚುವರಿ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಹಿರಿಯ ವಕೀಲ ಚಂದ್ರಮೌಳಿ ಹೇಳಿದರು. ಇದಕ್ಕೆ ಆಕ್ಷೇಪಿಸಿದ ಪೀಠವು “ಮಂಜುನಾಥ್‌ ಅವರ ವಿರುದ್ಧ ತನಿಖೆ ನಡೆಸಲು ಎಸಿಬಿಯು ವಿಶೇಷ ನ್ಯಾಯಾಲಯದಲ್ಲಿ ಅನುಮತಿ ಕೋರಿತ್ತು. ಇದು ಹೆಚ್ಚುವರಿ ಎಫ್‌ಐಆರ್‌ ಅಲ್ಲ, ಎರಡನೇ ಎಫ್‌ಐಆರ್‌ ಸಹ ಅಲ್ಲ. ನೀವು (ವಕೀಲ ಚಂದ್ರಮೌಳಿ) ವಿಶೇಷ ಸರ್ಕಾರಿ ಅಭಿಯೋಜಕರಾಗಿದ್ದವರು. ಯಾವುದು ಹೆಚ್ಚುವರಿ ಎಫ್‌ಐಆರ್‌ ಎಂಬುದು ನಿಮಗೆ ಗೊತ್ತಿದೆ. ನೀವು ನಮಗೆ ಕತೆ ಹೇಳುತ್ತೀರಾ? ನ್ಯಾಯಾಲಯವನ್ನು ದಾರಿ ತಪ್ಪಿಸಬೇಡಿ. ಹೆಚ್ಚುವರಿ ಮಾಹಿತಿ ಸಿಕ್ಕಿದ್ದರಿಂದ ಮಂಜುನಾಥ್‌ ಅವರ ತನಿಖೆಗೆ ತನಿಖಾಧಿಕಾರಿಯು ಅನುಮತಿ ಕೋರಿದ್ದಾರೆ. ಎರಡನೇ ಎಫ್‌ಐಆರ್‌ ಎಲ್ಲಿಂದ ಬಂತು?” ಎಂದು ತರಾಟೆಗೆ ತೆಗೆದುಕೊಂಡರು.

Related Stories

No stories found.
Kannada Bar & Bench
kannada.barandbench.com