[ಲಂಚ ಪ್ರಕರಣ] ಅಮಾನತುಗೊಂಡಿರುವ ಐಎಎಸ್‌ ಅಧಿಕಾರಿ ಮಂಜುನಾಥ್‌ ಜಾಮೀನು ಮನವಿ ವಜಾ ಮಾಡಿದ ಕರ್ನಾಟಕ ಹೈಕೋರ್ಟ್‌

ಆಗಸ್ಟ್‌ 1ರಂದು ಕಾಯ್ದಿರಿಸಿದ್ದ ತೀರ್ಪನ್ನು ನ್ಯಾ. ಕೆ ನಟರಾಜನ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಇಂದು ಪ್ರಕಟಿಸಿತು. ಜುಲೈ 4ರಂದು ಜೆ ಮಂಜುನಾಥ್‌ ಅವರನ್ನು ಎಸಿಬಿ ಬಂಧಿಸಿದ್ದು, ಅಂದಿನಿಂದಲೂ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.
[ಲಂಚ ಪ್ರಕರಣ] ಅಮಾನತುಗೊಂಡಿರುವ ಐಎಎಸ್‌ ಅಧಿಕಾರಿ ಮಂಜುನಾಥ್‌ ಜಾಮೀನು ಮನವಿ ವಜಾ ಮಾಡಿದ ಕರ್ನಾಟಕ ಹೈಕೋರ್ಟ್‌

ಲಂಚ ಪ್ರಕರಣದಲ್ಲಿ ಬಂಧಿತರಾಗಿ ಅಮಾನತುಗೊಂಡಿರುವ ಬೆಂಗಳೂರು ನಗರದ ಹಿಂದಿನ ಜಿಲ್ಲಾಧಿಕಾರಿ ಜೆ ಮಂಜುನಾಥ್‌ ಅವರ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ಬುಧವಾರ ವಜಾಗೊಳಿಸಿತು.

ಆಗಸ್ಟ್‌ 1ರಂದು ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಕೆ ನಟರಾಜನ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಇಂದು ಪ್ರಕಟಿಸಿತು. ಜುಲೈ 4ರಂದು ಜೆ ಮಂಜುನಾಥ್‌ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ ಬಂಧಿಸಿದ್ದು, ಅಂದಿನಿಂದಲೂ ಅವರು ಪರಪ್ಪನ ಅಗ್ರಹಾರದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಅರ್ಜಿದಾರ ಮಂಜುನಾಥ್‌ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಚಂದ್ರಮೌಳಿ ಅವರು “ಜಿಲ್ಲಾಧಿಕಾರಿಯಾಗಿದ್ದ ಮಂಜುನಾಥ್‌ ಅವರು ಯಾವುದೇ ತೆರನಾದ ಲಂಚಕ್ಕೆ ಬೇಡಿಕೆ ಇಟ್ಟಿಲ್ಲ ಮತ್ತು ಸ್ವೀಕರಿಸಿಲ್ಲ. ಜಿಲ್ಲಾಧಿಕಾರಿಯು ಜಿಲ್ಲಾ ದಂಡಾಧಿಕಾರಿಯೂ ಆಗಿದ್ದು, ಭೂವಿವಾದಕ್ಕೆ ಸಂಬಂಧಿಸಿದ ಸಾವಿರಾರು ಪ್ರಕರಣಗಳು ಅವರ ಮುಂದಿರುತ್ತವೆ. ಇವುಗಳ ಕುರಿತು ಕ್ರಮವಾಗಿ ಆದೇಶ ಮಾಡಲಾಗುತ್ತದೆ. ದೂರುದಾರ ಅಜಂ ಪಾಷಾ ಅವರ ಪ್ರಕರಣ ಹೀಗಾಗಿ ತಡವಾಗಿದೆ” ಎಂದು ವಾದಿಸಿದ್ದರು.

ಮುಂದುವರಿದು, ಚಂದ್ರಮೌಳಿ ಅವರು “ಉಪತಹಶೀಲ್ದಾರ್‌ ಮಹೇಶ್‌ ಮತ್ತು ಎರಡನೇ ಆರೋಪಿ ಚಂದ್ರು ಅವರಿಗೂ ಮಂಜುನಾಥ್‌ ಅವರಿಗೂ ಯಾವುದೇ ಸಂಬಂಧವಿಲ್ಲ” ಎಂದು ಪೀಠಕ್ಕೆ ವಿವರಿಸಿದ್ದರು.

ಭ್ರಷ್ಟಾಚಾರ ನಿಗ್ರಹ ದಳವನ್ನು ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪಿ ಎನ್‌ ಮನಮೋಹನ್‌ ಅವರು “ಮೊದಲನೇ ಆರೋಪಿ ಮಹೇಶ್‌ ಅವರಿಗೆ ಡಿಫಾಲ್ಟ್‌ ಜಾಮೀನು ಸಿಕ್ಕಿದೆ. ಮಂಜುನಾಥ್‌ ಅವರ ಜಾಮೀನು ಮನವಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲಾಗಿದ್ದು, ಮಂಜುನಾಥ್‌ ಅವರು ಇತರೆ ಆರೋಪಿಗಳ ಜೊತೆ ಮೇ 18ರಂದು ಸಮಾಲೋಚನೆ ನಡೆಸಿರುವ ಆಡಿಯೊ ಕ್ಲಿಪ್‌ ಇದೆ. ತನಿಖೆ ಪ್ರಗತಿಯಲ್ಲಿದೆ” ಎಂದಿದ್ದರು.

ಉಭಯ ಪಕ್ಷಕಾರರ ವಕೀಲರನ್ನು ಪೀಠವು ಜಾಮೀನು ಮನವಿಯ ವಿಚಾರಣೆಯ ಸಂದರ್ಭದಲ್ಲಿ ತೀವ್ರ ತರಾಟೆ ತೆಗೆದುಕೊಂಡಿತ್ತು.

ಇದಕ್ಕೂ ಮುನ್ನ, ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಕೆ ಲಕ್ಷ್ಮಿನಾರಾಯಣ ಭಟ್‌ ಅವರು ಜುಲೈ 11ರಂದು ಮಂಜುನಾಥ್‌ ಅವರ ಜಾಮೀನು ಮನವಿಯನ್ನು ವಜಾಗೊಳಿಸಿದ್ದರು.

Also Read
[ಲಂಚ ಪ್ರಕರಣ] ಮಂಜುನಾಥ್‌ ಜಾಮೀನು ತೀರ್ಪು ಎರಡು ದಿನದಲ್ಲಿ ಪ್ರಕಟ; ಎಸಿಬಿ, ಅರ್ಜಿದಾರರ ವಕೀಲರಿಗೆ ಹೈಕೋರ್ಟ್‌ ತರಾಟೆ

ಆನೇಕಲ್‌ ತಾಲ್ಲೂಕಿನ ಕೂಡ್ಲು ಗ್ರಾಮದ 38 ಗುಂಟೆ ಜಮೀನು ಒಡೆತನಕ್ಕೆ ಸಂಬಂಧಿಸಿದಂತೆ ಅನುಕೂಲಕರ ಆದೇಶ ಮಾಡಲು ಅಜಂ ಪಾಷಾ ಎಂಬುವರಿಂದ 5 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ ಬೆಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಪ ತಹಶೀಲ್ದಾರ್‌ ಆಗಿದ್ದ ಪಿ ಎಸ್‌ ಮಹೇಶ್‌ ಮತ್ತು ನ್ಯಾಯಾಲಯ ವಿಭಾಗದ ಸಹಾಯಕ ಚೇತನ್‌ ಕುಮಾರ್‌ ಅಲಿಯಾಸ್‌ ಚಂದ್ರ ಅವರನ್ನು ಮೇ 21ರಂದು ಎಸಿಬಿ ಬಂಧಿಸಿತ್ತು. ಈ ಪ್ರಕರಣದಲ್ಲಿ ಮಂಜುನಾಥ್‌ ಮೂರನೇ ಆರೋಪಿಯಾಗಿದ್ದಾರೆ.

ಎಸಿಬಿಯು ಮೊದಲ ಆರೋಪಿ ಮಹೇಶ್‌ರನ್ನು ಬಂಧಿಸಿ 60 ದಿನ ಕಳೆದರೂ ಆರೋಪ ಪಟ್ಟಿ ಸಲ್ಲಿಸಿದ ಹಿನ್ನೆಲೆಯಲ್ಲಿ ಅವರಿಗೆ ವಿಶೇಷ ನ್ಯಾಯಾಲಯವು ಡೀಫಾಲ್ಟ್‌ ಜಾಮೀನು ಮಂಜೂರು ಮಾಡಿತ್ತು. ಎರಡನೇ ಆರೋಪಿಯಾಗಿರುವ ಚಂದ್ರುವಿಗೆ ಈಗಾಗಲೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

Kannada Bar & Bench
kannada.barandbench.com