
ಪೋಕ್ಸೊ ಪ್ರಕರಣದಲ್ಲಿ ತಮ್ಮ ವಿರುದ್ಧ ವಿಶೇಷ ನ್ಯಾಯಾಲಯ ಸಂಜ್ಞೇಯ ಪರಿಗಣಿಸಿರುವುದನ್ನು ರದ್ದುಪಡಿಸಿ, ಮತ್ತೆ ಹೊಸದಾಗಿ ಸಂಜ್ಞೇ ಪರಿಗಣಿಸುವಂತೆ ಹೊರಡಿಸಿದ್ದ ಆದೇಶದಲ್ಲಿ ಸ್ಪಷ್ಟನೆ ಮತ್ತು ನಿರೀಕ್ಷಣಾ ಜಾಮೀನು ಷರತ್ತುಗಳಲ್ಲಿ ಸಡಿಲಿಕೆ ಕೋರಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಸೋಮವಾರ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಬಿಜೆಪಿ ನಾಯಕ ಯಡಿಯೂರಪ್ಪ ಸಲ್ಲಿಸಿರುವ ಮಧ್ಯಂತರ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಸದಸ್ಯ ಪೀಠವು ನಡೆಸಿತು.
ಇದೇ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ನೀಡುವ ಸಂದರ್ಭದಲ್ಲಿ ವಿಚಾರಣಾಧೀನ ನ್ಯಾಯಾಲಯದ ವ್ಯಾಪ್ತಿ ಬಿಟ್ಟು ಹೋಗದಂತೆ ಷರತ್ತು ವಿಧಿಸಲಾಗಿದೆ. ಇದರಿಂದ ರಾಜ್ಯದಲ್ಲಿ ಸಂಚರಿಸುವುದಕ್ಕೆ ಅವಕಾಶ ಇಲ್ಲವಾಗಿದೆ. ಆದ್ದರಿಂದ, ಷರತ್ತು ಸಡಿಸಲಿಸಬೇಕು ಎಂದು ಬಿಎಸ್‌ವೈ ಅರ್ಜಿಯಲ್ಲಿ ಕೋರಿದ್ದಾರೆ.
ಫೋಕ್ಸೋ ಪ್ರಕರಣದ ಸಂಜ್ಞೇ ಪರಿಗಣಿಸಿದ್ದ ವಿಶೇಷ ನ್ಯಾಯಾಲಯದ ಆದೇಶ ರದ್ದುಪಡಿಸಿ ಹೊಸದಾಗಿ ಪ್ರಕರಣದ ಸಂಜ್ಞೇ ಪರಿಗಣಿಸಲು ವಿಚಾರಣಾಧೀನ ನ್ಯಾಯಾಲಯಕ್ಕೆ ನಿರ್ದೇಶಿಸಿದ್ದ ಹೈಕೋರ್ಟ್, ಇದು ಸಾಕ್ಷ್ಯಗಳ ವಿಚಾರಣೆ ನಡೆಯಬೇಕಾದ ಪ್ರಕರಣ ಎಂದು ಅಭಿಪ್ರಾಯ ವ್ಯಕ್ತಪಡಿಸಿತ್ತು. ಈ ವಿಚಾರದಲ್ಲಿ ಸ್ಪಷ್ಟನೆ ಕೋರಿ ಮತ್ತೊಂದು ಮಧ್ಯಂತರ ಅರ್ಜಿ ಸಲ್ಲಿಕೆ ಮಾಡಲಾಗಿದೆ.
ರಾಜ್ಯ ಸರ್ಕಾರ ಪ್ರತಿನಿಧಿಸಿದ್ದ ವಿಶೇಷ ಅಭಿಯೋಜಕ ಅಶೋಕ್ ನಾಯ್ಕ್ ಅವರು “ಬಿಎಸ್‌ವೈ ನ್ಯಾಯಾಲಯದ ವ್ಯಾಪ್ತಿ ಬಿಟ್ಟು ಹೋಗಬಾರದು ಎಂದು ಷರತ್ತು ವಿಧಿಸಲಾಗಿದೆ. ಆದರೆ, ಈ ಷರತ್ತನ್ನು ಈಗಾಗಲೇ ಅವರು ಉಲ್ಲಂಘಿಸಿದ್ದಾರೆ” ಎಂದರು.
ವಾದ -ಪ್ರತಿವಾದ ಆಲಿಸಿದ ಪೀಠವು “ಇದು ವಿಚಾರಣೆ ನಡೆಯಬೇಕಾದ ಪ್ರಕರಣ ಎಂದು ಆದೇಶದಲ್ಲಿ ತಿಳಿಸಿದ್ದೇನೆ. ಅಲ್ಲದೇ, ವಿಚಾರಣಾ ನ್ಯಾಯಾಲಯ ಪರಿಗಣಿಸಿದ್ದ ಸಂಜ್ಞೇ ಕುರಿತಂತೆ ಮಾತ್ರ ಉತ್ತರಿಸಿದ್ದೇನೆ. ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿದಾರರು ಮೇಲ್ಮನವಿ ಸಲ್ಲಿಸಬಹುದು” ಎಂದು ಮೌಖಿಕವಾಗಿ ತಿಳಿಸಿ, ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಮಾರ್ಚ್ 24ಕ್ಕೆ ಮುಂದೂಡಿತು.