ಮುಂಬೈ- ಅಹಮದಾಬಾದ್ ಹೈಸ್ಪೀಡ್ ರೈಲು ಯೋಜನೆಗಾಗಿ ತಮ್ಮ ಭೂಮಿ ಸ್ವಾಧೀನಪಡಿಸಿಕೊಳ್ಳುವುದನ್ನು ಪ್ರಶ್ನಿಸಿ ಗೊದ್ರೇಜ್ ಅಂಡ್ ಬಾಯ್ಸ್ ಸಲ್ಲಿಸಿದ್ದ ಅರ್ಜಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿರುವ ಬಾಂಬೆ ಹೈಕೋರ್ಟ್, ಪ್ರಕರಣಕ್ಕೆ ಸಂಬಂಧಿಸಿದ ತೀರ್ಪನ್ನು ಮಂಗಳವಾರ ಕಾಯ್ದಿರಿಸಿತು.
ಇನ್ನೂ ಗೊದ್ರೇಜ್ ಅಂಡ್ ಬಾಯ್ಸ್ ಸ್ವಾಧೀನದಲ್ಲೇ ಇರುವ ಭೂಮಿಯನ್ನು ಅಳತೆಗಾಗಿ ಹಸ್ತಾಂತರಿಸಬೇಕು ಎಂದು ರಾಷ್ಟ್ರೀಯ ಹೈ- ಸ್ಪೀಡ್ ರೈಲು ನಿಗಮ ನಿಯಮಿತದ (ಎನ್‌ಎಚ್‌ಎಸ್‌ಆರ್‌ಸಿಎಲ್) ಪರವಾಗಿ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಅನಿಲ್ ಸಿಂಗ್ ಅವರು ನ್ಯಾಯಾಲಯವನ್ನು ಕೇಳಿದರು.
ಆಗ ನ್ಯಾಯಮೂರ್ತಿಗಳಾದ ಆರ್ ಡಿ ಧನುಕಾ ಮತ್ತು ಎಂ ಎಂ ಸಥಾಯೆ ಅವರಿದ್ದ ವಿಭಾಗೀಯ ಪೀಠ ಇಷ್ಟು ದಿನ ಕಾದಿರುವ ನಿಗಮ ಇನ್ನು ಸ್ವಲ್ಪ ದಿನ ಕಾಯುವಂತೆ ಸೂಚಿಸಿತು. ಮಹಾರಾಷ್ಟ್ರ ಭೂ ಸ್ವಾಧೀನ ಪ್ರಾಧಿಕಾರದ ಪರ ವಾದ ಮಂಡಿಸಿದ ಮಾಜಿ ಅಡ್ವೊಕೇಟ್ ಜನರಲ್ ಅಶುತೋಷ್ ಕುಂಭಕೋಣಿ ಅವರು, ಭೂಸ್ವಾಧೀನ ಕಾಯಿದೆಯ ಸೆಕ್ಷನ್ 38ರ ಪ್ರಕಾರ ಸ್ವಾಧೀನ ಪಡಿಸಿಕೊಂಡ ಮೂರು ತಿಂಗಳೊಳಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಭೂಮಿ ಹಸ್ತಾಂತರಿಸಬೇಕೆಂದು ಇದೆ. ಪ್ರಸ್ತುತ ಪ್ರಕರಣದಲ್ಲಿ ಈಗಾಗಲೇ ಮೂರು ತಿಂಗಳ ಗಡುವು ಮುಗಿದಿದೆ. ಆದರೆ ಅರ್ಜಿ ನ್ಯಾಯಾಲಯದಲ್ಲಿ ಬಾಕಿ ಇರುವುದರಿಂದ ಕ್ರಮ ಕೈಗೊಳ್ಳಲು ಅಧಿಕಾರಿಗಳು ಹಿಂದೇಟು ಹಾಕಿದರು. ಇದನ್ನು ಗೊದ್ರೇಜ್ ವಾದಕ್ಕೆ ಬಳಸಿಕೊಳ್ಳಬಾರದು” ಎಂದರು.
ಅಂತಹ ವಾದ ಮಂಡಿಸುವುದಿಲ್ಲ ಎಂದು ಗೊದ್ರೇಜ್-ಬಾಯ್ಸ್ ಪರ ವಾದ ಮಂಡಿಸಿದ ಹಿರಿಯ ವಕೀಲ ನವರೋಜ್ ಸೀರ್ವಾಯ್ ಅವರು ಭರವಸೆ ನೀಡಿದರು. ಬಳಿಕ ನ್ಯಾಯಾಲಯ ಅರ್ಜಿಯ ತೀರ್ಪನ್ನು ಕಾಯ್ದಿರಿಸಿತು.