
Bulli Bai bail verdict
ಮುಸ್ಲಿಂ ಮಹಿಳೆಯರನ್ನು ಅವಹೇಳನಕಾರಿಯಾಗಿ ಬಿಂಬಿಸಿದ್ದ ಬುಲ್ಲಿ ಬಾಯ್ ಆ್ಯಪ್ ಪ್ರಕರಣದ ಆರೋಪಿ 19 ವರ್ಷದ ಶ್ವೇತಾ ಸಿಂಗ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಮುಂಬೈ ಸೆಷನ್ಸ್ ನ್ಯಾಯಾಲಯ ಶುಕ್ರವಾರ ತಿರಸ್ಕರಿಸಿದೆ.
"ನಿರ್ದಿಷ್ಟ ಸಮುದಾಯದ ಮಹಿಳೆಗೆ ಸಂಬಂಧಿಸಿದ ಮಾಹಿತಿ/ದತ್ತಾಂಶಗಳ ಪ್ರಚಾರ ಮತ್ತು ಪ್ರಸಾರದಲ್ಲಿ (ಆರೋಪಿಯ) ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ದಾಖಲೆ ತೋರಿಸುತ್ತದೆ. ಹಾಗೆಯೇ, ಅವರು ಸಿಖ್ ಸಮುದಾಯವನ್ನು ಕುಕೃತ್ಯಗಳಿಗೆ ಗುರಿ ಮಾಡಲು ಯತ್ನಿಸಿದ್ದರು. ಸಮಾಜದ ದೊಡ್ಡ ಹಿತಾಸಕ್ತಿ ಅಪಾಯದಲ್ಲಿದೆ. ಪರಿಣಾಮವಾಗಿ ಈ ಹಂತದಲ್ಲಿ, ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎನ್ನುವ ಆರೋಪಿಯ ಕೋರಿಕೆಯನ್ನು ಮನ್ನಿಸಲಾಗದು” ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎಸ್ ಜೆ ಘರತ್ ತಿಳಿಸಿದ್ದಾರೆ.
ಸಿಖ್ ಸಮುದಾಯದವರು ಮಾಡಿದ ಕೃತ್ಯ ಎಂದು ಬಿಂಬಿಸಿ ಸಾರ್ವಜನಿಕರ ದಿಕ್ಕು ತಪ್ಪಿಸಲು ಆರೋಪಿ ಇತರ ಆರೋಪಿಗಳೊಂದಿಗೆ ಸೇರಿ ಸಿಖ್ ಹೆಸರು ಬಳಸಿ ನಕಲಿ ಟ್ವಿಟರ್ ಖಾತೆ ಸೃಷ್ಟಿಸಿದ್ದಳು ಎಂದು ಕೂಡ ನ್ಯಾಯಾಲಯ ಹೇಳಿದೆ.
ಆರೋಪಿ ಶ್ವೇತಾ ಜಾಮೀನಿಗಾಗಿ ಮಾಡಿದ ಮನವಿಯಲ್ಲಿ "ಈ ಪ್ರಕರಣದಲ್ಲಿ ನನ್ನ ವಿರುದ್ಧ ತಪ್ಪಾಗಿ ಆರೋಪ ಮಾಡಲಾಗಿದೆ. ಅಧಿಕಾರಿಗಳೊಂದಿಗೆ ಸಹಕರಿಸುತ್ತಿರುವೆ. ನನ್ನ ಸಾಧನಗಳು ಮತ್ತು ಟ್ವಿಟರ್ ಖಾತೆಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಅವರು ನನ್ನಿಂದ ವಶಕ್ಕೆ ಪಡೆಯಲು ಏನೂ ಉಳಿದಿಲ್ಲ" ಎಂದಿದ್ದಳು. ಅಲ್ಲದೆ "ಈ ಬಂಧನ ನನ್ನ ಮದುವೆಗೆ ಅಡ್ಡಿ ಉಂಟುಮಾಡುತ್ತದೆ" ಎಂದು ವಿನಂತಿಸಿದ್ದಳು.