[ಸ್ಮಶಾನ ಭೂಮಿ] 5 ಗ್ರಾಮಗಳಲ್ಲಿ ಭೂಮಿಯ ಪಹಣಿ ನೋಂದಾಯಿಸಿ ಸ್ಥಳೀಯ ಸಂಸ್ಥೆಗೆ ಜಮೀನು ಒಪ್ಪಿಸಬೇಕಿದೆ: ಸರ್ಕಾರದ ವಿವರಣೆ

ಸ್ಮಶಾನ ಭೂಮಿ ಇಲ್ಲದ ಗ್ರಾಮದಲ್ಲಿ ಜಾಗ ಮಂಜೂರು ಮಾಡಲು ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಬೇಕು. ಭೂಮಿ ಮಂಜೂರು ಮಾಡಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು. ತಪ್ಪಿದರೆ ಆ ಜಿಲ್ಲಾಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಸಿದ ಪೀಠ.
Justices G Narendar and C M Poonacha
Justices G Narendar and C M Poonacha

ರಾಜ್ಯದಲ್ಲಿ ಜನವಸತಿ ಇರುವ ಎಲ್ಲಾ ಗ್ರಾಮಗಳಿಗೆ ಸ್ಮಶಾನ ಭೂಮಿ ಒದಗಿಸಲಾಗಿದ್ದು, ಕೇವಲ ಐದು ಗ್ರಾಮಗಳಲ್ಲಿ ಮಾತ್ರವೇ ಮಂಜೂರು ಮಾಡಿರುವ ಭೂಮಿಯ ಪಹಣಿ ನೋಂದಣಿ ಮಾಡಿ ಸ್ಥಳೀಯ ಸಂಸ್ಥೆಗಳ ಸುಪರ್ದಿಗೆ ಜಮೀನು ಒಪ್ಪಿಸಬೇಕಾಗಿದೆ ಎಂದು ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್‌ಗೆ ಗುರುವಾರ ಮಾಹಿತಿ ನೀಡಿದೆ.

ರಾಜ್ಯದಲ್ಲಿ ಸ್ಮಶಾನವಿಲ್ಲದ ಗ್ರಾಮ ಮತ್ತು ಪಟ್ಟಣಗಳಿಗೆ ಅಗತ್ಯ ಜಮೀನು ಒದಗಿಸಲು ಹೈಕೋರ್ಟ್ ಹೊರಡಿಸಿರುವ ಆದೇಶವನ್ನು ಸರ್ಕಾರ ಪಾಲಿಸಿಲ್ಲ ಎಂದು ಆಕ್ಷೇಪಿಸಿ ಬೆಂಗಳೂರು ನಿವಾಸಿ ಮಹಮ್ಮದ್ ಇಕ್ಬಾಲ್ ಸಲ್ಲಿಸಿದ್ದ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಜಿ ನರೇಂದರ್ ಮತ್ತು ಸಿ ಎಂ ಪೂಣಚ್ಚ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಸರ್ಕಾರಿ ವಕೀಲರು ಪೀಠಕ್ಕೆ ವರದಿ ಸಲ್ಲಿಸಿ, 2023ರ ಜೂನ್‌ 21ರ ವೇಳೆಗೆ (ಬುಧವಾರ) ರಾಜ್ಯದಲ್ಲಿ ಜನವಸತಿ ಇರುವ ಎಲ್ಲಾ ಗ್ರಾಮಗಳಿಗೂ ಸ್ಮಶಾನ ಭೂಮಿ ಮಂಜೂರು ಮಾಡಲಾಗಿದೆ. ಕೇವಲ ಐದು ಗ್ರಾಮಗಳಲ್ಲಿ ಸ್ಮಶಾನ ಭೂಮಿಯ ಪಹಣಿ ನೋಂದಣಿ ಮಾಡಬೇಕಿದೆ. ಇದಲ್ಲದೆ, ಒತ್ತುವರಿಯಾಗಿರುವ ಎರಡು ಸ್ಮಶಾನಗಳ ಭೂಮಿಯನ್ನು ತೆರವುಗೊಳಿಸಬೇಕಿದೆ. ಈಗಗಲೇ ತೆರವುಗೊಳಿಸಿರುವ ನಾಲ್ಕು ಸ್ಮಶಾನಗಳ ಭೂಮಿಯನ್ನು ಸ್ಥಳೀಯ ಸಂಸ್ಥೆಯ ಸುಪರ್ದಿಗೆ ನೀಡಬೇಕಿದೆ ಎಂದು ಮಾಹಿತಿ ನೀಡಿದರು.

ಇದಕ್ಕೆ ಆಕ್ಷೇಪಿಸಿದ ಅರ್ಜಿದಾರ ಪರ ವಕೀಲರು, ಸ್ಮಶಾನಕ್ಕೆ ಜಾಗವಿಲ್ಲದ ಗ್ರಾಮಗಳಲ್ಲಿ ಅಗತ್ಯ ಭೂಮಿ ಮಂಜೂರಾತಿಗೆ ಕೋರಿ ಸ್ಥಳೀಯ ನಿವಾಸಿಗಳು ಅರ್ಜಿ ಸಲ್ಲಿಸಬಹುದು ಎಂಬುದಾಗಿ ತಿಳಿಸಿ ಸರ್ಕಾರ ಸಾರ್ವಜನಿಕ ಪ್ರಕಟಣೆ ನೀಡಿತ್ತು. ಅದರಂತೆ ಸ್ಮಶಾನಕ್ಕೆ ಹೆಚ್ಚುವರಿ ಜಾಗ ಮಂಜೂರು ಮಾಡುವಂತೆ ಅನೇಕ ಗ್ರಾಮಗಳ ನಿವಾಸಿಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ನನಗೆ ಲಭ್ಯವಾಗಿರುವ ಮಾಹಿತಿ ಪ್ರಕಾರವೇ 16 ಗ್ರಾಮಗಳ ನಿವಾಸಿಗಳು ತಮ್ಮ ಸಮುದಾಯಕ್ಕೆ ಪ್ರತ್ಯೇಕ ಸ್ಮಶಾನ ಭೂಮಿ ಮಂಜೂರಾತಿಗೆ ಕೋರಿದ್ದಾರೆ. ಮನವಿ ಸಲ್ಲಿಸಿದವರಲ್ಲಿ ಮುಸ್ಲಿಂ, ಬೌದ್ಧ ಹಾಗೂ ಜೈನ ಸಮುದಾಯದವರು ಇದ್ದಾರೆ. ಇನ್ನೂ ಸ್ಮಶಾನಕ್ಕಾಗಿ ಹೆಚ್ಚುವರಿ ಭೂಮಿ ಮಂಜೂರಾತಿಗೆ ಕೋರಲಾಗಿದ್ದು, ಅವುಗಳನ್ನು ಸರ್ಕಾರ ಪರಿಗಣಿಸಬೇಕಿದೆ ಎಂದು ಪೀಠದ ಗಮನಕ್ಕೆ ತಂದರು.

Also Read
ಸ್ಮಶಾನ ಜಾಗ ಕಲ್ಪಿಸುವಲ್ಲಿ ಸರ್ಕಾರದ ವೈಫಲ್ಯ: 75 ವರ್ಷಗಳಿಂದ ಕೇವಲ ನಾಟಕ ಮಾಡುತ್ತಿದ್ದೀರಿ ಎಂದು ಹೈಕೋರ್ಟ್‌ ಕಿಡಿ

ವಾದ-ಪ್ರತಿವಾದ ಆಲಿಸಿದ ಪೀಠವು ಸ್ಮಶಾನ ಭೂಮಿ ಇಲ್ಲದ ಗ್ರಾಮದಲ್ಲಿ ಅಗತ್ಯ ಜಾಗ ಮಂಜೂರು ಮಾಡಲು ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಭೂಮಿ ಮಂಜೂರು ಮಾಡಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು. ತಪ್ಪಿದರೆ ಆ ಜಿಲ್ಲಾಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ ವಿಚಾರಣೆಯನ್ನು ಜುಲೈ 15ಕ್ಕೆ ಮುಂದೂಡಿತು.

ಬೆಂಗಳೂರು ನಗರ, ಮಂಡ್ಯ ಜಿಲ್ಲಾಧಿಕಾರಿ, ಹಾಸನ ಮತ್ತು ಚಿತ್ರದುರ್ಗ ಜಿಲ್ಲೆಗಳ ಹೆಚ್ಚುವರಿ ಜಿಲ್ಲಾಧಿಕಾರಿಗಳು ವಿಚಾರಣೆ ವೇಳೆ ಖುದ್ದು ಹಾಜರಿದ್ದರು.

Kannada Bar & Bench
kannada.barandbench.com