“ಕಳೆದ 75 ವರ್ಷಗಳಿಂದ ನಾವು ನಾಟಕ ಮಾಡುತ್ತಿದ್ದೇವೆ. ಜನರಿಗೆ ಮೊದಲು ಮೂಲಸೌಲಭ್ಯ ಕಲ್ಪಿಸಿ. ಅಭಿವೃದ್ಧಿ ಎನ್ನುವುದು ಇಲ್ಲಿ ಯಾರಿಗೂ ಬೇಕಿಲ್ಲವಾಗಿದೆ. ಸತ್ತವರಿಗಾದರೆ ದೊಡ್ಡ ದೊಡ್ಡ ಪುತ್ಥಳಿ ನಿರ್ಮಿಸುತ್ತೀರಿ...” ಎಂದು ರಾಜ್ಯಾದ್ಯಂತ ಪ್ರತಿಯೊಂದು ಜನವಸತಿ ಗ್ರಾಮಕ್ಕೂ ಅಗತ್ಯ ಸ್ಮಶಾನ ಭೂಮಿ ಕಲ್ಪಿಸುವಲ್ಲಿ ವಿಫಲವಾಗಿರುವ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಗುರುವಾರ ಚಾಟಿ ಬೀಸಿತು.
ರಾಜ್ಯದಲ್ಲಿ ಸ್ಮಶಾನ ಜಾಗ ಇಲ್ಲದ ಗ್ರಾಮ ಮತ್ತು ಪಟ್ಟಣ ಪ್ರದೇಶಗಳಿಗೆ ಅಗತ್ಯ ಜಮೀನು ಒದಗಿಸಲು ಸರ್ಕಾರಕ್ಕೆ ನಿರ್ದೇಶಿಸಿ ಹೈಕೋರ್ಟ್ ಹೊರಡಿಸಿದ ಆದೇಶ ಜಾರಿಯಾಗದ ಹಿನ್ನೆಲೆಯಲ್ಲಿ ಬೆಂಗಳೂರು ನಿವಾಸಿ ಮಹಮ್ಮದ್ ಇಕ್ಬಾಲ್ ಎಂಬುವರು ಸಲ್ಲಿಸಿರುವ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಬಿ ವೀರಪ್ಪ ಮತ್ತು ನ್ಯಾ. ಟಿ ವೆಂಕಟೇಶ್ ನಾಯ್ಕ್ ಅವರಿದ್ದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.
“ನ್ಯಾಯಾಲಯದ ಈ ಹಿಂದಿನ ಆದೇಶದ ಅನ್ವಯ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್ ಜಯರಾಂ ಅವರ ಅಫಿಡವಿಟ್ ಅನ್ನು ಸರ್ಕಾರದ ವಕೀಲರು ಸಲ್ಲಿಸಿದ್ದಾರೆ. ವಾದ ಮಂಡನೆಯ ಸಂದರ್ಭದಲ್ಲಿ ಸರ್ಕಾರದ ವಕೀಲರು ರಾಜ್ಯದ ಎಲ್ಲಾ ಗ್ರಾಮಗಳಲ್ಲಿಯೂ ಸ್ಮಶಾನ ಭೂಮಿ ನೀಡುವುದಕ್ಕೆ ಸಂಬಂಧಿಸಿದಂತೆ ಎಲ್ಲಾ ಪತ್ರಿಕೆಗಳಲ್ಲಿ ಜಾಹೀರಾತು ನೀಡಿ, ಜನರಿಂದ ಮಾಹಿತಿ ಪಡೆಯಲಾಗುವುದು. ಆನಂತರ ಸ್ಮಶಾನಕ್ಕೆ ಜಾಗ ಕಲ್ಪಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಈ ಹೇಳಿಕೆಯನ್ನು ದಾಖಲಿಸಲಾಗಿದೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.
ಅಲ್ಲದೇ, ಸ್ಮಶಾನ ಭೂಮಿ ಇಲ್ಲದ ಗ್ರಾಮದ ಮಾಹಿತಿಯನ್ನು ತಾಲ್ಲೂಕು ಕಾನೂನು ಸೇವಾ ಸಮಿತಿಯಿಂದ ಸಂಗ್ರಹಿಸಲು ಕೆಎಸ್‌ಎಲ್‌ಎಸ್‌ಎಗೆ ನ್ಯಾಯಾಲಯವು ನಿರ್ದೇಶಿಸಿದೆ.
ಇದಕ್ಕೂ ಮುನ್ನ ಪೀಠವು “ಕೆಲವು ತಪ್ಪು ಮಾಹಿತಿ ನೀಡಿದ್ದಾರೆ ಎಂದು ಕೆಎಸ್‌ಎಲ್‌ಎಸ್‌ಎ ವರದಿಯಲ್ಲಿ ಹೇಳಲಾಗಿದೆ. ಜಿಲ್ಲಾಧಿಕಾರಿಗಳು ಜಿಲ್ಲೆಯ ಪಾಲಕರಾಗಿದ್ದು, ಅವರು ಜನರು ಮತ್ತು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಬಾರದು. ಇಡೀ ರಾಜ್ಯದಲ್ಲಿ ಮೂರು ಸಾವಿರ ಮಾತ್ರವೇ ಸ್ಮಶಾನ ಜಾಗ ಇಲ್ಲದ ಗ್ರಾಮಗಳು ಇವೆಯೇ?” ಎಂದಿತು.
“ಯಾವೆಲ್ಲಾ ಗ್ರಾಮಗಳಲ್ಲಿ ಸ್ಮಶಾನಕ್ಕೆ ಜಾಗ ಇಲ್ಲ ಎಂಬುದರ ಮಾಹಿತಿಯನ್ನು ಜಿಲ್ಲಾಧಿಕಾರಿಗಳು ಸಂಗ್ರಹ ಮಾಡಿದ್ದಾರೆಯೇ? ಇಲ್ಲ. ನಾವು ಅದನ್ನು ಮಾಡುತ್ತೇವೆ. ಕೆಎಸ್‌ಎಲ್‌ಎಸ್‌ಎ ಸದಸ್ಯ ಕಾರ್ಯದರ್ಶಿ ಅವರನ್ನು ಎಲ್ಲೆಲ್ಲಿ ಸ್ಮಶಾನಕ್ಕೆ ಜಾಗವಿಲ್ಲ ಎಂಬ ಮಾಹಿತಿಯನ್ನು ಪಡೆಯಲು ಜಾಹೀರಾತು ನೀಡಲು ಸೂಚಿಸುತ್ತೇವೆ. ಮಾಡುವುದಕ್ಕಾಗಲ್ಲ ಎಂದರೆ ಹೇಳಿ ಬಿಡಿ. ಕಾಗದದ ಮೇಲಿನ ನ್ಯಾಯಾಲಯದ ಆದೇಶದ ಅನುಪಾಲನೆ ಬೇಡ, ಪ್ರಾಯೋಗಿಕವಾಗಿ ಪಾಲನೆಯಾಗಬೇಕು. ಇಲ್ಲವಾದಲ್ಲಿ ನ್ಯಾಯಾಲಯದ ಆದೇಶ, ಸರ್ಕಾರ, ನಾವು ಮತ್ತು ನೀವೆಲ್ಲರೂ ನಿಷ್ಟ್ರಯೋಜಕವಾಗುತ್ತೇವೆ” ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.
“ಕಂದಾಯ ಇಲಾಖೆ ಕಾರ್ಯದರ್ಶಿ ಉಪಸ್ಥಿತರಿರುವುದರಿಂದ ಒಂದು ಮಾತು ಕೇಳುತ್ತೇವೆ. ಯಾವೊಂದು ಗ್ರಾಮದಲ್ಲೂ ಒಂದು ಮತ ಬಿಡುವುದಿಲ್ಲ. ಎಲ್ಲರೂ ಮತ ಹಾಕಲೇಬೇಕು ಎನ್ನುತ್ತೀರಿ. ಆದರೆ, ಆ ಊರಿನಲ್ಲಿ ಸ್ಮಶಾನಕ್ಕೆ ಜಾಗ ಇದೆಯಾ ಎಂದು ಯಾರಾದರೂ ಕೇಳುತ್ತೀರಾ? ಯಾರೂ ಕೇಳುವುದಿಲ್ಲ” ಎಂದು ಪೀಠ ಮೌಖಿಕವಾಗಿ ಬೇಸರಿಸಿತು.
“ಮೂಲಭೂತ ಅಗತ್ಯಗಳಾದ ನೀರು, ರಸ್ತೆ ಮತ್ತು ಸ್ಮಶಾನ ಜನರಿಗೆ ಬೇಕು. ಬೇರೆ ಏನನ್ನೂ ಜನರು ಕೇಳಲ್ಲ. ಇದು ಸರ್ಕಾರದ ಸಾಂವಿಧಾನಿಕ ಕರ್ತವ್ಯವಾಗಿದೆ. ಆದರೂ, ನೀವೇಕೆ ಮಾಡುತ್ತಿಲ್ಲ” ಎಂದು ಪ್ರಶ್ನಿಸಿತು.
“ 75 ವರ್ಷಗಳಿಂದ ನಾವು ನಾಟಕ ಮಾಡುತ್ತಿದ್ದೇವೆ. ಜನರಿಗೆ ಮೊದಲು ಮೂಲಸೌಲಭ್ಯ ಕಲ್ಪಿಸಿ. ಅಭಿವೃದ್ಧಿ ಯಾರಿಗೂ ಬೇಕಿಲ್ಲವಾಗಿದೆ. ಸತ್ತವರಿಗಾದರೆ ದೊಡ್ಡ ದೊಡ್ಡ ಪುತ್ಥಳಿ ನಿರ್ಮಿಸುತ್ತೀರಿ...” ಎಂದು ನ್ಯಾಯಾಲಯವು ಮೌಖಿಕವಾಗಿ ಆಕ್ರೋಶ ಹೊರಹಾಕಿತು.