ರಾಜ್ಯದ ಪ್ರತಿ ಜಿಲ್ಲೆಯಲ್ಲಿ ವರ್ಷಾಂತ್ಯಕ್ಕೆ ಗೋಶಾಲೆ: ಹೈಕೋರ್ಟ್‌ಗೆ ಸರ್ಕಾರದಿಂದ ಅಫಿಡವಿಟ್‌ ಸಲ್ಲಿಕೆ

ಗೋಶಾಲೆಗಳಿಗೆ ಜಾಗ ಗುರುತಿಸುವುದು, ಸ್ಥಾಪನೆ ಮತ್ತು ನಿರ್ವಹಣೆ, ಅನುದಾನದ ಬಳಕೆಯ ಜವಾಬ್ದಾರಿಯನ್ನು ಜಿಲ್ಲಾಧಿಕಾರಿ ನೇತೃತ್ವದ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಜಿಲ್ಲಾ ಮಟ್ಟದ ಸಮಿತಿಗಳಿಗೆ ವಹಿಸಲಾಗಿದೆ ಎಂದು ವಿವರಿಸಿರುವ ಸರ್ಕಾರ.
Cow and Karnataka HC
Cow and Karnataka HC

ರಾಜ್ಯದ ಪ್ರತಿ ಜಿಲ್ಲೆಯಲ್ಲಿ ವರ್ಷಾಂತ್ಯಕ್ಕೆ ಗೋಶಾಲೆಗಳನ್ನು ಪ್ರಾರಂಭಿಸಲಾಗುವುದು ಎಂದು ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್‌ಗೆ ಈಚೆಗೆ ಅಫಿಡವಿಟ್‌ ಸಲ್ಲಿಸಿದೆ. ಯಾವ ತಿಂಗಳಲ್ಲಿ, ಯಾವ ಜಿಲ್ಲೆಯಲ್ಲಿ ಗೋಶಾಲೆ ಕಾರ್ಯಾರಂಭ ಮಾಡಲಿವೆ ಎಂಬ ವೇಳಾಪಟ್ಟಿಯ ಬಗ್ಗೆಯೂ ಅಫಿಡವಿಟ್‌ನಲ್ಲಿ ವಿವರಿಸಲಾಗಿದೆ.

ರಾಜ್ಯದ ಪ್ರತಿ ತಾಲ್ಲೂಕಿನಲ್ಲಿ ಗೋಶಾಲೆ ಆರಂಭಿಸಬೇಕು ಹಾಗೂ ಈಗಾಗಲೇ ಇರುವ ಗೋಶಾಲೆಗಳಿಗೆ ಮೇವು, ನೀರು ಮತ್ತು ಜಾಗ ಒದಗಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಹೈಕೋರ್ಟ್ ಕಾನೂನು ಸೇವೆಗಳ ಸಮಿತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌. ಕಿಣಗಿ ಅವರ ನೇತೃತ್ವದ ವಿಭಾಗೀಯ ನಡೆಸಿತು.

ಪಶುಸಂಗೋಪನಾ ಇಲಾಖೆ 2019ರಲ್ಲಿ ನಡೆಸಿದ ಜಾನುವಾರು ಗಣತಿ ಪ್ರಕಾರ ರಾಜ್ಯದಲ್ಲಿ 77,075 ಬಿಡಾಡಿ ದನ ಇವೆ. ಅವುಗಳ ನಿರ್ವಹಣೆಗೆ ರಾಜ್ಯದ ಪ್ರತಿ ಜಿಲ್ಲೆಗೊಂದು ಗೋಶಾಲೆಯನ್ನು ತೆರೆಯಲು ಹಂತ-ಹಂತವಾಗಿ ಕ್ರಮ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ. 2021-22ನೇ ಸಾಲಿನ ಬಜೆಟ್‌ನಲ್ಲಿ ಪ್ರತಿ ಜಿಲ್ಲೆಗೊಂದು ಗೋಶಾಲೆ ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದರು. ಅದಕ್ಕಾಗಿ 15 ಕೋಟಿ ರೂಪಾಯಿ ಅನುದಾನ ಸಹ ಮೀಸಲಿಡಲಾಗಿದೆ. ಗೋಶಾಲೆಗಳಿಗೆ ಜಾಗ ಗುರುತಿಸುವುದು, ಅದರ ಸ್ಥಾಪನೆ ಮತ್ತು ನಿರ್ವಹಣೆ, ಅನುದಾನದ ಬಳಕೆಯ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳ ನೇತೃತ್ವದ ‘ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಜಿಲ್ಲಾ ಮಟ್ಟದ ಸಮಿತಿ’ (ಡಿಎಸ್‌ಪಿಸಿಎ)ಗಳಿಗೆ ವಹಿಸಲಾಗಿದೆ ಎಂದು ಸರ್ಕಾರ ವಿವರಿಸಿದೆ.

ರಾಜ್ಯದ 30 ಜಿಲ್ಲೆಗಳ ಪೈಕಿ ಬೆಂಗಳೂರು ನಗರ, ಶಿವಮೊಗ್ಗ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಭೂವಾಜ್ಯದಿಂದಾಗಿ ಸ್ಥಳ ಗುರುತಿಸಲು ವಿಳಂಬವಾಗಿತ್ತು. ಶಿವಮೊಗ್ಗ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಬೇರೆ ಜಾಗ ಗುರುತಿಸಲಾಗಿದೆ. ಬೆಂಗಳೂರಿನ ಜಾಗ ಗುರುತಿಸುವ ಪ್ರಕ್ರಿಯೆಗೆ ಸ್ವಲ್ಪ ಕಾಲಾವಕಾಶ ಬೇಕಾಗಬಹುದು. ಉಳಿದಂತೆ 29 ಜಿಲ್ಲೆಗಳಲ್ಲಿ ಗುರುತಿಸಲಾದ ಜಾಗವನ್ನು ಡಿಎಸ್‌ಪಿಸಿಎಗೆ ಹಸ್ತಾಂತರಿಸಲಾಗಿದೆ. ಈ ಜಿಲ್ಲೆಗಳಲ್ಲಿ ಡಿಎಸ್‌ಪಿಸಿಎ ಗೋಶಾಲೆ ನಿರ್ಮಾಣ ಕಾರ್ಯ ಆರಂಭಿಸಲಿದೆ ಎಂದು ಸರ್ಕಾರದ ಹೇಳಲಾಗಿದೆ.

ಸರ್ಕಾರ ಹಾಕಿಕೊಂಡಿರುವ ವೇಳಾಪಟ್ಟಿಯಂತೆ ಚಿಕ್ಕಮಗಳೂರು, ವಿಜಯಪುರ, ಮೈಸೂರು, ಹಾಸನ ಹಾಗೂ ತುಮಕೂರು ಜಿಲ್ಲೆಗಳಲ್ಲಿ 2022ರ ಜುಲೈ 15ರೊಳಗೆ ಗೋಶಾಲೆಗಳು ಕಾರ್ಯಾರಂಭ ಮಾಡಲಿವೆ. ಬೀದರ್, ಕೊಪ್ಪಳ, ಚಿತ್ರದುರ್ಗ, ಹಾವೇರಿ, ಉತ್ತರ ಕನ್ನಡ, ದಾವಣಗೆರೆ, ಕೊಡಗು, ಚಾಮರಾಜನಗರ, ಕೋಲಾರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಆಗಸ್ಟ್ 1ರೊಳಗೆ ಗೋಶಾಲೆಗಳು ಕಾರ್ಯಾರಂಭ ಮಾಡಲಿವೆ. ರಾಯಚೂರು, ಧಾರವಾಡ, ಮಂಡ್ಯ, ಯಾದಗಿರಿ, ರಾಮನಗರ ಜಿಲ್ಲೆಗಳಲ್ಲಿ ಸೆಪ್ಟಂಬರ್ 1ರೊಳಗೆ, ಗದಗ, ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಅಕ್ಟೋಬರ್ 1ರೊಳಗೆ, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಕಲಬುರಗಿ, ಬೆಳಗಾವಿ ಜಿಲ್ಲೆಗಳಲ್ಲಿ ಡಿಸೆಂಬರ್ ಅಂತ್ಯದೊಳಗೆ ಗೋಶಾಲೆಗಳು ಕಾರ್ಯಾರಂಭ ಮಾಡಲಿವೆ. ಈ ರೀತಿ ವರ್ಷದ ಅಂತ್ಯದೊಳಗೆ ಎಲ್ಲಾ 30 ಗೋಶಾಲೆಗಳ ಸ್ಥಾಪನೆ ಪ್ರಕ್ರಿಯೆ ಮುಗಿಯಲಿದೆ ಎಂದು ಸರ್ಕಾರ ಹೇಳಿದೆ.

Also Read
ಗೋಶಾಲೆ ಆರಂಭಿಸುವುದು ಪಂಚ ವಾರ್ಷಿಕ ಯೋಜನೆಯೇ‌? ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಪ್ರಶ್ನೆ

70 ಹೆಚ್ಚುವರಿ ಗೋಶಾಲೆ

ಜಿಲ್ಲೆಗೊಂದರಂತೆ 30 ಗೋಶಾಲೆಯ ಜೊತೆಗೆ ಹೆಚ್ಚುವರಿಯಾಗಿ 70 ಗೋಶಾಲೆಗಳನ್ನು ತೆರೆಯಲು ಸರ್ಕಾರ ತೀರ್ಮಾನಿಸಿದೆ. ಕಾಮಗಾರಿ ಚಾಲ್ತಿಯಲ್ಲಿರುವ ಗೋಶಾಲೆಗಳಿಗೆ 15 ಕೋಟಿ ರೂಪಾಯಿ, ಹೊಸ 70 ಗೋಶಾಲೆಗಳ ನಿರ್ಮಾಣಕ್ಕೆ 20 ಕೋಟಿ ರೂಪಾಯಿ ಸೇರಿದಂತೆ ಗೋಶಾಲೆಗಳ ಸ್ಥಾಪನೆಗೆ 50 ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ. ಇದಲ್ಲದೆ ಖಾಸಗಿ ಸಂಘ-ಸಂಸ್ಥೆಗಳು 197 ಗೋಶಾಲೆಗಳು ನಡೆಸುತ್ತಿದ್ದು, ಇವುಗಳಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ. ಖಾಸಗಿ ಗೋಶಾಲೆಗಳಿಗೆ 2021-22ನೇ ಸಾಲಿಗೆ 3.77 ಕೋಟಿ ರೂಪಾಯಿ ಹಾಗೂ 2022-23ನೇ ಸಾಲಿನಲ್ಲಿ 3.77 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಲಾಗಿದೆ ಎಂದು ಸರ್ಕಾರ ಅಫಿಡವಿಟ್‌ನಲ್ಲಿ ವಿವರಿಸಿದೆ.

ಕಳೆದ ವಿಚಾರಣೆಯ ವೇಳೆ ಗೋಶಾಲೆ ಆರಂಭಿಸುವುದು ಪಂಚ ವಾರ್ಷಿಕ ಯೋಜನೆಯೇ‌ ಎಂದು ರಾಜ್ಯ ಸರ್ಕಾರವನ್ನು ಹೈಕೋರ್ಟ್‌ ಮಾರ್ಮಿಕವಾಗಿ ಪ್ರಶ್ನಿಸಿತ್ತು.

Kannada Bar & Bench
kannada.barandbench.com