ಗೋಶಾಲೆ ಆರಂಭಿಸುವುದು ಪಂಚ ವಾರ್ಷಿಕ ಯೋಜನೆಯೇ‌? ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಪ್ರಶ್ನೆ

ಗೋಶಾಲೆ ಆರಂಭಿಸುವುದಕ್ಕೆ ಸಂಬಂಧಿಸಿದ ಸ್ಥಿತಿಗತಿ ವರದಿ ಸಿದ್ಧವಾಗಿದ್ದು, ಎರಡು ದಿನಗಳಲ್ಲಿ ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಸರ್ಕಾರದ ವಕೀಲರು ತಿಳಿಸಿದ್ದಾರೆ. ಸದರಿ ವರದಿಯನ್ನು ಪ್ರತಿವಾದಿಗಳೂ ನೀಡಬೇಕು ಎಂದು ಆದೇಶಿಸಿದ ಪೀಠ.
Cow and Karnataka HC
Cow and Karnataka HC
Published on

ಗೋಶಾಲೆ ಆರಂಭಿಸುವುದು ಪಂಚ ವಾರ್ಷಿಕ ಯೋಜನೆಯೇ‌ ಎಂದು ರಾಜ್ಯ ಸರ್ಕಾರವನ್ನು ಮಂಗಳವಾರ ಕರ್ನಾಟಕ ಹೈಕೋರ್ಟ್‌ ಮಾರ್ಮಿಕವಾಗಿ ಪ್ರಶ್ನಿಸಿತು.

ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯಿದೆಯ ಸೆಕ್ಷನ್‌ 19ರ ಅನ್ವಯ ರಾಜ್ಯದ ಪ್ರತಿ ತಾಲ್ಲೂಕಿನಲ್ಲಿ ಗೋಶಾಲೆ ಆರಂಭಿಸಬೇಕು ಹಾಗೂ ಈಗಾಗಲೇ ಇರುವ ಗೋಶಾಲೆಗಳಿಗೆ ಸೂಕ್ತ ಪ್ರಮಾಣದಲ್ಲಿ ಮೇವು, ನೀರು ಮತ್ತು ಜಾಗ ಒದಗಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಹೈಕೋರ್ಟ್ ಕಾನೂನು ಸೇವೆಗಳ ಸಮಿತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌. ಕಿಣಗಿ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ವಿಚಾರಣೆ ಆರಂಭವಾಗುತ್ತಿದ್ದಂತೆ ರಾಜ್ಯ ಸರ್ಕಾರದ ಪರ ವಕೀಲರು “ಗೋಶಾಲೆಗೆ ಸಂಬಂಧಿಸಿದ ಅನುಪಾಲನಾ ವರದಿಯು ತುಂಬಾ ವಿಸ್ತೃತವಾಗಿರುವುದರಿಂದ ಇ-ಫೈಲ್‌ ಮಾಡಲಾಗಿಲ್ಲ. ಅವಕಾಶ ಮಾಡಿಕೊಟ್ಟರೆ ವಿಸ್ತೃತ ವರದಿಯನ್ನು ರಿಜಿಸ್ಟ್ರಿಗೆ ಸಲ್ಲಿಸಲಾಗುವುದು” ಎಂದರು.

ಇದಕ್ಕೆ ನ್ಯಾಯಾಲಯವು ಪ್ರತಿ ಜಿಲ್ಲೆಯಲ್ಲಿ ಒಂದು ಗೋಶಾಲಾ ಆರಂಭಿಸುತ್ತೀರಾ? ಹಾಗಾದರೆ ಎಷ್ಟು ಬಿಡಾಡಿ ದನಗಳು ಅಲ್ಲಿ ಆಶ್ರಯ ಪಡೆಯಲಿವೆ? ಪ್ರತಿ ಗ್ರಾಮ ಮಟ್ಟದಲ್ಲಿ ಗೋಶಾಲೆ ಇರಬೇಕು. ಕನಿಷ್ಠ ಪಕ್ಷ ತಾಲ್ಲೂಕು ಮಟ್ಟದಲ್ಲಿ ಇರಬೇಕು ಎಂದಿತು.

ಇದಕ್ಕೆ ಹೈಕೋರ್ಟ್‌ ಕಾನೂನು ಸೇವಾ ಸಮಿತಿ ಪ್ರತಿನಿಧಿಸಿದ್ದ ವಕೀಲೆ ಬಿ ವಿ ವಿದ್ಯುಲ್ಲತಾ ಅವರು ಪ್ರತಿ ಜಿಲ್ಲೆಯಲ್ಲೂ ಗೋಶಾಲಾ ಆರಂಭಿಸಲಾಗುವುದು ಎಂದು ಸರ್ಕಾರ ಹೇಳಿದೆ ಎಂದು ಪೀಠದ ಗಮಸೆಳೆದರು.

ಆಗ ಸರ್ಕಾರದ ವಕೀಲರು ಬೆಂಗಳೂರು ಹೊರತುಪಡಿಸಿ ಉಳಿದೆಲ್ಲಾ ಕಡೆ ಗೋಶಾಲೆ ಆರಂಭಿಸುತ್ತಿದ್ದೇವೆ. ಬೆಂಗಳೂರಿನಲ್ಲಿ ಭೂಮಿ ವರ್ಗಾವಣೆ ವಿಚಾರದಲ್ಲಿ ಕೆಲವು ಸಮಸ್ಯೆಗಳಿವೆ. ಉಳಿದ 29 ಕಡೆ ಜಿಲ್ಲಾ ಮಟ್ಟದ ಸಮಿತಿಗಳನ್ನು ರಚಿಸಲಾಗಿದ್ದು, ಕೆಲಸ ಆರಂಭವಾಗಿದೆ. ಹಲವು ಕಡೆ ಬೋರ್‌ವೆಲ್‌ ಕೊರೆಸಲಾಗಿದ್ದು, ಶೆಡ್‌ ನಿರ್ಮಾಣ ಮಾಡಲಾಗುತ್ತಿದೆ. ಸ್ವಲ್ಪ ಸಮಯ ನೀಡಿದರೆ ಎಲ್ಲಾ ಕಡೆ ಕಾರ್ಯ ಆರಂಭಿಸಲಿವೆ ಎಂದರು.

ಇದಕ್ಕೆ ಪೀಠವು ನೀವು ಗೋಶಾಲೆಗಳನ್ನು ಆರಂಭಿಸಿದ್ದೀರಾ? ನಾವು ಗೋಶಾಲೆಗಳನ್ನು ಆರಂಭಿಸಿ ಎಂದು ಆದೇಶ ಮಾಡಿದ್ದೇವೆಯೇ ವಿನಾ ಬೋರ್‌ವೆಲ್‌ ಕೊರೆಸುವುದು ಮತ್ತಿತರ ವಿಚಾರದ ಬಗ್ಗೆ ಹೇಳಿಲ್ಲ. ಯಾವಾಗಿನಿಂದ ಗೋಶಾಲೆಗಳು ಕಾರ್ಯಾರಂಭ ಮಾಡಲಿವೆ ಎಂದು ತಿಳಿಸಿ ಎಂದರು.

ಆಗ ಸರ್ಕಾರದ ವಕೀಲರು ಜುಲೈ 15ರ ವೇಳೆಗೆ 5 ಗೋಶಾಲೆ ಕಾರ್ಯಾರಂಭ ಮಾಡಲಿವೆ. ಆಗಸ್ಟ್‌ 1ರ ವೇಳೆಗೆ ಮತ್ತೆ 10 ಗೋಶಾಲಾ ಆರಂಭವಾಗಲಿವೆ ಎಂದು ವಿವರಿಸಲಾರಂಭಿಸಿದರು. ಈ ನಡುವೆ ಮಧ್ಯಪ್ರವೇಶಿಸಿದ ನ್ಯಾಯಾಲಯವು ಹಾಗಾದರೆ ಇದು ಐದು ವರ್ಷಗಳ ಯೋಜನೆಯೇ? ಪ್ರತಿ ಜಿಲ್ಲೆಯಲ್ಲಿ ಒಂದು ಗೋಶಾಲಾ ಆರಂಭಿಸುತ್ತೀರಾ? ಹಾಗಾದರೆ ಎಷ್ಟು ಬಿಡಾಡಿ ದನಗಳು ಅಲ್ಲಿ ಆಶ್ರಯಪಡೆಯಲಿವೆ? ಪ್ರತಿ ಗ್ರಾಮ ಮಟ್ಟದಲ್ಲಿ ಗೋಶಾಲೆ ಇರಬೇಕು. ಕನಿಷ್ಠ ಪಕ್ಷ ತಾಲ್ಲೂಕು ಮಟ್ಟದಲ್ಲಿ ಇರಬೇಕು” ಎಂದಿತು.

ಇದಕ್ಕೆ ವಕೀಲೆ ವಿದ್ಯುಲ್ಲತಾ ಅವರು ಆನೇಕಲ್‌ ಬಿಡಾಡಿ ದನಗಳು ಬೆಂಗಳೂರಿಗೆ ಬರಲಾಗದು. ಸರ್ಕಾರದ ವಕೀಲರು ವಯಸ್ಸಾದ ಪ್ರಾಣಿಗಳ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.

ಸರ್ಕಾರದ ವಕೀಲರು ಸರ್ಕಾರ ಗೋಶಾಲೆ ಆರಂಭಿಸುವುದರ ಜೊತೆಗೆ ಖಾಸಗಿಯವರು 197 ಗೋಶಾಲೆಗಳನ್ನು ಆರಂಭಿಸಿದ್ದು, ಅವುಗಳಿಗೂ ನಾವು ಬೆಂಬಲ ನೀಡುತ್ತಿದ್ದೇವೆ ಎಂದು ವಿವರಣೆ ನೀಡಿದರು.

Also Read
ಗೋಶಾಲೆ ನಿರ್ಮಿಸಲು ಕ್ರಮ ಕೈಗೊಳ್ಳಿ: ರಾಜ್ಯಕ್ಕೆ ಹೈಕೋರ್ಟ್‌ ಸೂಚನೆ; ಸ್ಥಿತಿಗತಿ ವರದಿ ಸಲ್ಲಿಕೆಗೆ ನಿರ್ದೇಶನ

ಅಂತಿಮವಾಗಿ ಪೀಠವು “ಗೋಶಾಲೆ ಆರಂಭಿಸುವುದಕ್ಕೆ ಸಂಬಂಧಿಸಿದ ವಸ್ತುಸ್ಥಿತಿ ವರದಿ ಸಿದ್ಧವಾಗಿದ್ದು, ಎರಡು ದಿನಗಳಲ್ಲಿ ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಸರ್ಕಾರದ ವಕೀಲರು ತಿಳಿಸಿದ್ದಾರೆ. ಸದರಿ ವರದಿಯನ್ನು ಪ್ರತಿವಾದಿಗಳೂ ನೀಡಬೇಕು” ಎಂದು ಆದೇಶದಲ್ಲಿ ಹೇಳಿದ್ದು, ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಿತು.

ಕಳೆದ ವಿಚಾರಣೆಯಲ್ಲಿ “ಗೋಶಾಲೆ ನಿರ್ಮಿಸಲು ಸ್ಥಳ ಪತ್ತೆ ಮಾಡಿ, ಅನುದಾನ ಹಂಚಿಕೆ ಮಾಡಿದ್ದೀರಿ ಅಷ್ಟೆ. ಆದರೆ, ವಾಸ್ತವದಲ್ಲಿ ಬಿಡಾಡಿ ದನಗಳಿಗಾಗಿ ಯಾವುದೇ ಗೋಶಾಲೆ ನಿರ್ಮಿಸಲಾಗಿಲ್ಲ ಅಥವಾ ಅದನ್ನು ನಿರ್ಮಾಣ ಮಾಡುವ ಯಾವುದೇ ಪ್ರಯತ್ನವಾಗಿಲ್ಲ. ಗೊತ್ತು ಮಾಡಲಾದ ಈ ಸ್ಥಳಗಳಲ್ಲಿ ಎಷ್ಟು ಗೋಶಾಲೆಗಳನ್ನು ನಿರ್ಮಿಸಲಾಗಿದೆ” ಎಂಬ ಮಾಹಿತಿ ಒಳಗೊಂಡ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿತ್ತು.

Kannada Bar & Bench
kannada.barandbench.com