ವಿವಾಹಿತ ಮುಸ್ಲಿಂ ದಂಪತಿಗೆ ವಿವಾಹ ಪ್ರಮಾಣಪತ್ರ ನೀಡಲು ರಾಜ್ಯ ವಕ್ಫ್ ಮಂಡಳಿಗೆ ಅನುಮತಿಸಿ ರಾಜ್ಯ ಸರ್ಕಾರವು ಮಾಡಿದ್ದ ಆದೇಶವನ್ನು ಜನವರಿ 7ರವರೆಗೆ ಅಮಾನತಿನಲ್ಲಿಡುವ ಮೂಲಕ ಕರ್ನಾಟಕ ಹೈಕೋರ್ಟ್ ಗುರುವಾರ ಮಧ್ಯಂತರ ಆದೇಶ ಮಾಡಿದೆ. ಅಲ್ಲದೇ, ರಾಜ್ಯ ಸರ್ಕಾರ ಮತ್ತು ವಕ್ಪ್ ಮಂಡಳಿಗೆ ನೋಟಿಸ್ ಜಾರಿ ಮಾಡಿದೆ.
ಬೆಂಗಳೂರಿನ ಎ ಆಲಂ ಪಾಷಾ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
“ಮೇಲ್ನೋಟಕ್ಕೆ ಪ್ರಬಲವಾದ ಪ್ರಕರಣ ಕಂಡುಬಂದಿರುವುದರಿಂದ 30-8-2023ರಂದು ವಕ್ಫ್ ಮಂಡಳಿ ಮತ್ತು ಅದರ ಅಧಿಕಾರಿಗಳಿಗೆ ವಿವಾಹ ಪ್ರಮಾಣಪತ್ರಗಳನ್ನು ನೀಡಲು ಅನುಮತಿಸಿದ್ದ ಆಕ್ಷೇಪಾರ್ಹ ಆದೇಶವನ್ನು ಮುಂದಿನ ವಿಚಾರಣೆವರೆಗೆ ಅಮಾನತಿನಲ್ಲಿಡಲಾಗಿದೆ. ಸರ್ಕಾರದ ಆದೇಶದ ನೆಪದಲ್ಲಿ ವಕ್ಫ್ ಮಂಡಳಿ ಅಥವಾ ಅಧಿಕಾರಿಗಳು ವಿವಾಹ ಪ್ರಮಾಣಪತ್ರಗಳನ್ನು ಮುಂದಿನ ಆದೇಶದವರೆಗೆ ನೀಡುವಂತಿಲ್ಲ. ಯಾವುದೇ ಅರ್ಹತೆ ಇಲ್ಲದ ವಕ್ಫ್ ಮಂಡಳಿ ಅಥವಾ ಅಧಿಕಾರಿಗಳು ನೀಡುವ ವಿವಾಹ ಪ್ರಮಾಣಪತ್ರವನ್ನು ಯಾವುದೇ ಅಧಿಕೃತ ಉದ್ದೇಶಕ್ಕೆ ಸಿಂಧುವಾದ ಪ್ರಮಾಣಪತ್ರ ಎಂದು ಬಳಕೆ ಮಾಡುವುದನ್ನು ನಂಬಲು ಕಷ್ಟ” ಎಂದು ನ್ಯಾಯಾಲಯ ಹೇಳಿದೆ.
ರಾಜ್ಯ ಸರ್ಕಾರದ ಅಲ್ಪಸಂಖ್ಯಾತ, ವಕ್ಫ್ ಮತ್ತು ಹಜ್ ಇಲಾಖೆಯ ಅಧೀನ ಕಾರ್ಯದರ್ಶಿ 2023ರ ಆಗಸ್ಟ್ 30ರಂದು ಹೊರಡಿಸಿರುವ ಆದೇಶವು ವಕ್ಪ್ ಕಾಯಿದೆ 1995ಕ್ಕೆ ವಿರುದ್ಧವಾಗಿದೆ ಎಂದು ಆಕ್ಷೇಪಿಸಿ ಆಲಂ ಪಾಷಾ ಅವರು ಪಿಐಎಲ್ ಸಲ್ಲಿಸಿದ್ದಾರೆ.
ಅರ್ಜಿದಾರರ ಪರ ವಕೀಲೆ ಸರಸ್ವತಿ ಅವರು “ವಕ್ಪ್ ಮಂಡಳಿ ಅಥವಾ ವಕ್ಪ್ ಅಧಿಕಾರಿಗಳು ಮುಸ್ಲಿಂ ಸಮುದಾಯವರಿಗೆ ವಿವಾಹ ಪ್ರಮಾಣಪತ್ರ ನೀಡುವ ಅಧಿಕಾರ ಹೊಂದಿಲ್ಲ. ವಿವಾಹ ನೋಂದಣಿ ಕಾಯಿದೆ ಮತ್ತು ವಿಶೇಷ ವಿವಾಹ ನೋಂದಣಿ ಕಾಯಿದೆಯ ನಿಬಂಧನೆಗಳ ಅಡಿ ಯಾವುದೇ ಸಮುದಾಯದವರು ವಿವಾಹ ನೋಂದಣಿ ಮಾಡಿಸಬಹುದಾಗಿದೆ. ವಕ್ಪ್ ಕಾಯಿದೆಯು ತನ್ನದೇ ಆದ ವಿಶೇಷ ಉದ್ದೇಶಗಳನ್ನು ಹೊಂದಿದೆ. ವಕ್ಪ್ ಆಸ್ತಿ ಮತ್ತು ಸಂಬಂಧಿತ ವಿಚಾರಗಳಿಗೆ ಉತ್ತಮ ಆಡಳಿತ ನೀಡುವುದು ಕಾಯಿದೆಯ ಉದ್ದೇಶವಾಗಿದೆ” ಎಂದರು.
ವಾದ-ಪ್ರತಿವಾದ ಆಲಿಸಿ, ತಡೆ ವಿಧಿಸಿರುವ ನ್ಯಾಯಾಲಯವು ವಿಚಾರಣೆಯನ್ನು 2025ರ ಜನವರಿ 7ಕ್ಕೆ ಮುಂದೂಡಿದೆ.