ಕರ್ನಾಟಕ ಮೂಲದ ಜಾಗತಿಕ ಕಾಫೀ ಉದ್ಯಮ ಕೆಫೆ ಕಾಫಿ ಡೇಯ ಮೂಲ ಕಂಪನಿಯಾದ ಕಾಫಿ ಡೇ ಎಂಟರ್ಪ್ರೈಸಸ್ ಲಿಮಿಟೆಡ್ (ಸಿಡಿಇಎಲ್) ವಿರುದ್ಧ ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ದಿವಾಳಿ ಪ್ರಕ್ರಿಯೆ ಆರಂಭಿಸಿದೆ.
ಕಾಫಿ ಡೇ ₹228.45 ಕೋಟಿಯಷ್ಟು ಸುಸ್ತಿದಾರನಾಗಿದ್ದು ಇದರಿಂದಾಗಿ ಅದು ದಿವಾಳಿಯಾಗಿದೆ ಎಂದು ಘೋಷಿಸುವಂತೆ ಸಿಡಿಇಎಲ್‌ಗೆ ಸಾಲ ನೀಡಿದ್ದ ಸಂಸ್ಥೆಗಳಲ್ಲಿ ಒಂದಾದ ಐಡಿಬಿಐ ಟ್ರಸ್ಟಿಶಿಪ್ ಸರ್ವಿಸಸ್ ಲಿಮಿಟೆಡ್ (ಐಡಿಬಿಐಟಿಎಸ್ಎಲ್) ಸಲ್ಲಿಸಿದ್ದ ದಿವಾಳಿತನ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಲಾಗಿದೆ ಎಂದು ಆಗಸ್ಟ್ 8 ರಂದು ಹೊರಡಿಸಿದ ಆದೇಶದಲ್ಲಿ ಬೆಂಗಳೂರಿನ ಎನ್‌ಸಿಎಲ್‌ಟಿ ತಿಳಿಸಿದೆ.
ಸಾಲದ ಸುಳಿಗೆ ಸಿಲುಕಿರುವ ಸಿಡಿಇಎಲ್ ಕಾರ್ಯಾಚರಣೆಯನ್ನು ನಿಯಂತ್ರಿಸುವುದಕ್ಕಾಗಿ ವೃತ್ತಿಪರರನ್ನಾಗಿ (ಐಆರ್‌ಪಿ) ಆಶಿಶ್ ಚವ್ಚರಿಯಾ ಅವರನ್ನು ನ್ಯಾಯಮಂಡಳಿಯ ನ್ಯಾಯಾಂಗ ಸದಸ್ಯ ಕೆ ಬಿಸ್ವಾಲ್ ಮತ್ತು ತಾಂತ್ರಿಕ ಸದಸ್ಯ ಮನೋಜ್ ಕುಮಾರ್ ದುಬೆ ಅವರಿದ್ದ ಪೀಠ ನೇಮಿಸಿದೆ.
ಸಾರ್ವಜನಿಕ ನೋಟಿಸ್ ನೀಡಿಕೆ, ಅಹವಾಲುಗಳ ಆಹ್ವಾನ ಇತಾದಿಗಳನ್ನು ಐಆರ್‌ಪಿ ನಿಭಾಯಿಸುವುದಕ್ಕಾಗಿ ಎರಡು ಲಕ್ಷ ರೂಪಾಯಿ ಠೇವಣಿ ಇಡುವಂತೆ ಐಡಿಬಿಐಟಿಎಸ್ಎಲ್‌ಗೆ ನ್ಯಾಯಮಂಡಳಿ ನಿರ್ದೇಶಿಸಿದೆ.
ಐಡಿಬಿಐಟಿಎಸ್ಎಲ್ ಸೆಪ್ಟೆಂಬರ್ 2023ರಲ್ಲಿ ಸಿಡಿಇಎಲ್ ವಿರುದ್ಧ ದಿವಾಳಿತನ ಅರ್ಜಿ ಸಲ್ಲಿಸಿತ್ತು. ಸಿಡಿಇಎಲ್ ₹ 228 ಕೋಟಿಗೂ ಹೆಚ್ಚು ಸಾಲ ಪಾವತಿಸಲು ವಿಫಲವಾಗಿದೆ ಎಂದು ಅದು ದೂರಿತ್ತು.
ಹಣ ಪಾವತಿಸುವುದಾಗಿ ಒಪ್ಪಂದ ಮಾಡಿಕೊಂಡಿದ್ದ ಸಿಡಿಇಎಲ್ 2019 ಮತ್ತು 2020 ರ ನಡುವೆ ನಾಲ್ಕು ಸಂದರ್ಭಗಳಲ್ಲಿ ನೀಡಬೇಕಿದ್ದ ಹಣವನ್ನು ಪಾವತಿಸದೆ ಸುಸ್ತಿದಾರನಾಗಿದೆ ಎಂದು ಐಡಿಬಿಐಟಿಎಸ್ಎಲ್ ಆರೋಪಿಸಿತ್ತು.
ಆದರೆ ಐಡಿಬಿಐಟಿಎಸ್‌ಎಲ್ ಒಂದು ಡಿಬೆಂಚರ್ ಹೋಲ್ಡರ್ ಆಗಿದ್ದು ತನ್ನ ವಿರುದ್ಧ ಕಾರ್ಪೊರೇಟ್ ದಿವಾಳಿ ಗೊತ್ತುವಳಿ ಪ್ರಕ್ರಿಯೆ ಆರಂಭಿಸುವಂತೆ ಕೋರಿ ಅರ್ಜಿ ಸಲ್ಲಿಸಲು ಅದಕ್ಕೆ ಯಾವುದೇ ಅಧಿಕಾರ ಇಲ್ಲ ಎಂದು ನ್ಯಾಯಮಂಡಳಿ ಎದುರು ಸಿಡಿಇಎಲ್ ವಾದಿಸಿತ್ತು.
ಆದರೆ ಈ ವಾದವನ್ನು ಒಪ್ಪದ ಎನ್‌ಸಿಎಲ್‌ಟಿ ಐಬಿಸಿ ಸೆಕ್ಷನ್ 5(8)(c) ಅಡಿಯಲ್ಲಿನ ವ್ಯಾಖ್ಯಾನದ ಪ್ರಕಾರ ಡಿಬೆಂಚರ್‌ಗೆ ಅನುಸಾರವಾಗಿ ಇರುವ ಸಾಲವೂ ಸಹ 'ಹಣಕಾಸಿನ ಸಾಲ' ಎಂದಿತು. ಆದ್ದರಿಂದ ಡಿಬೆಂಚರ್ ಹೊಂದಿರುವವರು ಹಣಕಾಸು ಸಾಲಗಾರರಾಗಿಲ್ಲ ಎಂಬ ಸಿಡಿಇಎಲ್ ಆರೋಪ ಸಮರ್ಥನೀಯವಲ್ಲ ಎಂದು ಅದು ನುಡಿಯಿತು.
ಮಂಗಳೂರಿನ ನೇತ್ರಾವತಿ ನದಿ ಸೇತುವೆ ಮೇಲಿನಿಂದ ಜಿಗಿದು 2019ರಲ್ಲಿ ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ ವಿ ಜಿ ಸಿದ್ಧಾರ್ಥ ಅವರು ಕೆಫೆ ಕಾಫಿ ಡೇಯ ಪ್ರವರ್ತಕರಾಗಿದ್ದರು.
ಐಡಿಬಿಐಟಿಎಸ್‌ಎಲ್ ಪರವಾಗಿ ಹಿರಿಯ ವಕೀಲ ಶ್ರೀನಿವಾಸ ರಾಘವನ್ ಮತ್ತು ವಕೀಲರಾದ ಸಂಕೀರ್ತ್ ವಿ ಮತ್ತು ಕೀಸ್ಟೋನ್ ಪಾಲುದಾರರ ಕೃಷ್ಣವರ್ಣ ವಾದ ಮಂಡಿಸಿದರು. ಸಿಡಿಇಎಲ್ ಸಂಸ್ಥೆಯನ್ನು ವಕೀಲೆ ಚಿತ್ರಾ ನಿರ್ಮಲಾ ಪ್ರತಿನಿಧಿಸಿದ್ದರು.