ವ್ಯಕ್ತಿ ಸ್ವಾತಂತ್ರ್ಯದಂತಹ ಗಂಭೀರ ಪ್ರಕರಣಗಳ ವಿಚಾರಣೆ ವಿಳಂಬವಾದರೆ ಗತಿ ಏನು? ಅಂತಹದ್ದೊಂದು ಘಟನೆ ಕೊಲ್ಕತ್ತಾ ಹೈಕೋರ್ಟ್‌ನಲ್ಲಿ ನಡೆದಿದೆ. ಬರೋಬ್ಬರಿ 23 ವರ್ಷಗಳ ಹಿಂದಿನ ಹೇಬಿಯಸ್ ಕಾರ್ಪಸ್ ರಿಟ್ ಅರ್ಜಿಯನ್ನು ಅದು ಈಗ ವಿಚಾರಣೆ ನಡೆಸಿದೆ. ಅಂದಹಾಗೆ ನವಜಾತ ಶಿಶುವನ್ನು ತಾಯಿಗೆ ಒಪ್ಪಿಸಲು ವಿಫಲವಾದ ಆಸ್ಪತ್ರೆಯೊಂದರ ವಿರುದ್ಧ ಹೂಡಲಾದ ಪ್ರಕರಣ ಇದು.
1997ರ ಪ್ರಕರಣವನ್ನು ಈಗ ಪಟ್ಟಿ ಮಾಡಿ ವಿಳಂಬಧೋರಣೆ ಅನುಸರಿಸಿದ ಕೊಲ್ಕತ್ತಾ ಹೈಕೋರ್ಟ್ ರೆಜಿಸ್ಟ್ರಿಯ ನಡೆಗೆ ಮುಖ್ಯ ನ್ಯಾಯಮೂರ್ತಿ ತೊಟ್ಟತಿಲ್ ಬಿ ರಾಧಾಕೃಷ್ಣನ್ ಮತ್ತು ನ್ಯಾಯಮೂರ್ತಿ ಅರಿಜಿತ್ ಬ್ಯಾನರ್ಜಿ ಅವರಿದ್ದ ನ್ಯಾಯಪೀಠ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಮೂರು ತಿಂಗಳ ನಂತರ ಪ್ರಕರಣವನ್ನು ವಿಚಾರಣೆಗೆ ಪಟ್ಟಿ ಮಾಡಬೇಕೆಂದು ಅಂದಿನ ಮುಖ್ಯ ನ್ಯಾಯಮೂರ್ತಿಗಳು 1997ರ ಡಿಸೆಂಬರ್ 22 ರಂದು ಆದೇಶ ಹೊರಡಿಸಿದ್ದರು. ಅವರ ಆದೇಶದ ಹೊರತಾಗಿಯೂ ವಿಚಾರಣೆ ನಡೆಸಲು ಇಷ್ಟು ದೀರ್ಘಕಾಲ ಹಿಡಿದಿದ್ದಕ್ಕೆ ಅದು ಅಸಮಾಧಾನ ಸೂಚಿಸಿದೆ.
“ಮೂರು ತಿಂಗಳ ನಂತರ ಪ್ರಕರಣವನ್ನು ವಿಚಾರಣೆಗೆ ಪಟ್ಟಿ ಮಾಡಲು ರೆಜಿಸ್ಟ್ರಿಗೆ ನಿರ್ದೇಶನ ನೀಡಲಾಗಿದ್ದರೂ 23 ವರ್ಷಗಳ ಕಾಲ ನೆನೆಗುದಿಗೆ ಬಿದ್ದಿದ್ದ ಪ್ರಕರಣವನ್ನು ಈಗ ಪಟ್ಟಿ ಮಾಡಿರುವುದು ದುರದೃಷ್ಟಕರ ಸಂಗತಿ.” ಎಂದು ಹೈಕೋರ್ಟ್ ಹೇಳಿದೆ. ಹೇಬಿಯಸ್ ಕಾರ್ಪಸ್ ರೀತಿಯ ಅರ್ಜಿಯನ್ನು ತಡವಾಗಿ ಪಟ್ಟಿ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅದು ಸೂಚಿಸಿದೆ.
“ನ್ಯಾಯಾಂಗದ ಆದೇಶ ನೀಡಿದ್ದರೂ ಕೆಲ ನಿರ್ದಿಷ್ಟ ಸಂದರ್ಭಗಳಲ್ಲಿಯಾದರೂ ಪ್ರಕರಣಗಳನ್ನು ಹೈಕೋರ್ಟ್ ಕಚೇರಿ ಪಟ್ಟಿ ಮಾಡದಿದ್ದರೆ ಆಗ ನ್ಯಾಯಾಂಗದ ಆದೇಶವನ್ನು ಧಿಕ್ಕರಿಸಲಾಗಿದೆ ಎಂದು ಪರಿಗಣಿಸಿ ದುರ್ನಡತೆ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ” ಎಂದು ಕೂಡ ನ್ಯಾಯಾಲಯ ಎಚ್ಚರಿಕೆ ನೀಡಿದೆ. 1997ರ ಡಿಸೆಂಬರ್‌ನ ಆದೇಶದಲ್ಲಿ ಪ್ರಕರಣವನ್ನು ನೋಂದಾಯಿಸಿಕೊಂಡು ತನಿಖೆ ನಡೆಸುವಂತೆ ಅಂದಿನ ಡಿಜಿಪಿ ಅವರಿಗೆ ನಿರ್ದೇಶನ ನೀಡಲಾಗಿತ್ತು.
1997ರ ಆದೇಶಕ್ಕೆ ಅನುಸಾರವಾಗಿ, ಅರ್ಜಿದಾರರ ಸಹೋದರಿಯನ್ನು ಬಿಡುಗಡೆ ಮಾಡಲಾಗಿತ್ತು ಮತ್ತು ಸ್ಥಳಾಂತರಗೊಳ್ಳುವ ಸ್ವಾತಂತ್ರ್ಯವನ್ನು ನೀಡಲಾಗಿತ್ತು ಮತ್ತು ನ್ಯಾಯಾಲಯವು ಕ್ರಿಮಿನಲ್ ಪ್ರೊಸೀಜರ್ ಸಂಹಿತೆಯ ಸೆಕ್ಷನ್ 161 ರ ಅಡಿಯಲ್ಲಿ ತನ್ನ ಹೇಳಿಕೆಯನ್ನು ದಾಖಲಿಸಲು ಖುದ್ದು ಲಭ್ಯವಿರುವುದನ್ನು ಶುಕ್ರವಾರ ಗಮನಿಸಿದ ನ್ಯಾಯಾಲಯ ಹೀಗಾಗಿ ಮುಂದಿನ ಆದೇಶ ಅಗತ್ಯವಿಲ್ಲ ಎಂದು ಹೇಳಿ ಪ್ರಕರಣವನ್ನು ಮುಕ್ತಾಯಗೊಳಿಸಿತು.