ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮೇಲೆ ಹಲ್ಲೆ: ಪಿಐಎಲ್ ವಜಾಗೊಳಿಸಿದ ಕಲ್ಕತ್ತಾ ಹೈಕೋರ್ಟ್

ವರದಿಗಳ ಪ್ರಕಾರ, ಬಹುಕೋಟಿ ಪಡಿತರ ಹಗರಣಕ್ಕೆ ಸಂಬಂಧಿಸಿದಂತೆ ಇ ಡಿ ಅಧಿಕಾರಿಗಳು ದಾಳಿ ನಡೆಸಿದ್ದ ವೇಳೆ ಟಿಎಂಸಿ ಮುಖಂಡ ಶೇಖ್ ಶಹಜಹಾನ್ ಅವರ ನಿವಾಸದ ಬಳಿ ಸ್ಥಳೀಯ ಟಿಎಂಸಿ ಬೆಂಬಲಿಗರು ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ್ದರು.
ಜಾರಿ ನಿರ್ದೇಶನಾಲಯ, ದೆಹಲಿ
ಜಾರಿ ನಿರ್ದೇಶನಾಲಯ, ದೆಹಲಿ

ಬಹುಕೋಟಿ ಪಡಿತರ ವಿತರಣಾ ಹಗರಣಕ್ಕೆ ಸಂಬಂಧಿಸಿದಂತೆ ಈ ತಿಂಗಳ ಆರಂಭದಲ್ಲಿ ನಡೆಸಿದ ದಾಳಿಯ ಸಂದರ್ಭದಲ್ಲಿ ಜಾರಿ ನಿರ್ದೇಶನಾಲಯ (ಇ ಡಿ) ಅಧಿಕಾರಿಗಳ ಮೇಲೆ ಹಲ್ಲೆ ನಡೆದದ್ದನ್ನು ಪ್ರಶ್ನಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಕಲ್ಕತ್ತಾ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ.

ಜಾರಿ ನಿರ್ದೇಶನಾಲಯ ಕೇಂದ್ರ ಸಂಸ್ಥೆಯಾಗಿರುವುದರಿಂದ, ಪಿಐಎಲ್ ಮೂಲಕ ರಕ್ಷಣೆಯ ಪಡೆಯಬೇಕಾದಷ್ಟು ಶಕ್ತಿಹೀನ ಅಥವಾ ಅಸಹಾಯಕವಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಟಿ ಎಸ್‌ ಶಿವಜ್ಞಾನಂ ನೇತೃತ್ವದ ಪೀಠ ಹೇಳಿದೆ.

"ಇದು ಕೇಂದ್ರೀಯ ಸಂಸ್ಥೆಯಾಗಿದೆ. ಎಲ್ಲಾ ತಾಂತ್ರಿಕ ಪರಿಣತಿಯನ್ನು ಹೊಂದಿದ್ದು ಅಂತಹ ಸಂದರ್ಭಗಳಲ್ಲಿ ಏನು ಮಾಡಬೇಕೆಂದು ಅದಕ್ಕೆ ತಿಳಿದಿದೆ. ಇದು ಕೇಂದ್ರ ಸಂಸ್ಥೆಯಾಗಿರುವುದರಿಂದ ತಮ್ಮ ಅಧಿಕಾರಿಗಳನ್ನು ರಕ್ಷಿಸುವ ಎಲ್ಲಾ ಅಧಿಕಾರಗಳನ್ನು ಹೊಂದಿದೆ. ನಾವು ಈ ಪಿಐಎಲ್ ಪರಿಗಣಿಸಲು ಸಾಧ್ಯವಿಲ್ಲ. ಒಂದು ವೇಳೆ, ನಾವು ಅಸಹಾಯಕರಾಗಿದ್ದು ನಮಗೆ ರಕ್ಷಣೆ ಬೇಕು ಮತ್ತು ಈ ಅರ್ಜಿಗೆ ನಮ್ಮ ಬೆಂಬಲ ಇದೆ ಎಂದು ನಿರ್ದೇಶನಾಲಯ ತಿಳಿಸಿದರೆ ಆಗ ನಿಮ್ಮನ್ನು ಆಲಿಸುತ್ತೇವೆ." ಎಂದು ಮುಖ್ಯ ನ್ಯಾಯಮೂರ್ತಿ ಅವರು ಪಿಐಎಲ್ ವಜಾಗೊಳಿಸುವ ಹಂತದಲ್ಲಿ ಹೇಳಿದರು.

Also Read
ಇಡಿ ಅಧಿಕಾರಿಗಳ ಮೇಲೆ ಹಲ್ಲೆ ಪ್ರಕರಣ: ತುರ್ತು ವಿಚಾರಣೆಗೆ ಕಲ್ಕತ್ತಾ ಹೈಕೋರ್ಟ್ ನಕಾರ

ವರದಿಗಳ ಪ್ರಕಾರ, ಬಹುಕೋಟಿ ಪಡಿತರ ಹಗರಣಕ್ಕೆ ಸಂಬಂಧಿಸಿದಂತೆ ಇ ಡಿ ಅಧಿಕಾರಿಗಳು ಪ. ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಸಂದೇಶ್‌ಖಲಿ ಪ್ರದೇಶದಲ್ಲಿ ದಾಳಿ ನಡೆಸಿದ್ದ ವೇಳೆ ಟಿಎಂಸಿ ಮುಖಂಡ ಶೇಖ್ ಶಹಜಹಾನ್ ಅವರ ನಿವಾಸದ ಬಳಿ ಸ್ಥಳೀಯ ಟಿಎಂಸಿ ಬೆಂಬಲಿಗರು ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ್ದರು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪಡಿತರ ವಿತರಣಾ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಜ್ಯೋತಿಪ್ರಿಯೋ ಮಲ್ಲಿಕ್ (ಪ್ರಸ್ತುತ ರಾಜ್ಯ ಅರಣ್ಯ ಸಚಿವ) ಅವರೊಂದಿಗೆ ಶಹಜಹಾನ್ ನಿಕಟ ಸಂಪರ್ಕ ಹೊಂದಿದ್ದಾರೆ ಎಂದು ಹೇಳಲಾಗಿದೆ.

ಜನವರಿ 5 ರಂದು, ಅಕುಂಜಿಪಾರಾದಲ್ಲಿರುವ ಶಹಜಹಾನ್ ನಿವಾಸದ ಮೇಲೆ ದಾಳಿ ನಡೆಸಲು ಆಗಮಿಸಿದ ಇಡಿ ಅಧಿಕಾರಿಗಳನ್ನು ಸುಮಾರು 200 ಸ್ಥಳೀಯ ಜನರು ಸುತ್ತುವರಿದು ಘೇರಾವ್ ಹಾಕಿದ್ದರು. ಇಡಿ ಅಧಿಕಾರಿಗಳು ಮತ್ತು ಅವರೊಂದಿಗೆ ಬಂದ ಅರೆಸೈನಿಕ ಪಡೆಗಳ ಮೇಲೆ ದಾಳಿ ನಡೆದಿದ್ದು ಇ ಡಿ ಆ ಪ್ರದೇಶ ತೊರೆಯುವಂತಾಗಿತ್ತು. ಘಟನೆಯಲ್ಲಿ ಮೂವರು ಅಧಿಕಾರಿಗಳು ಗಾಯಗೊಂಡಿದ್ದರು.

ಈ ಘಟನೆಯ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್ ಅವರು ಶಹಜಹಾನ್ ಅವರನ್ನು ಬಂಧಿಸುವಂತೆ ಸೂಚಿಸಿದ್ದರು. ಶಹಜಹಾನ್ ಭಯೋತ್ಪಾದಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ ಎಂದು ಸಹ ಬೋಸ್ ಪ್ರತಿಕ್ರಿಯಿಸಿದ್ದರು. ಇದನ್ನು ಆಡಳಿತಾರೂಢ ಟಿಎಂಸಿ ತೀವ್ರವಾಗಿ ಟೀಕಿಸಿತ್ತು.

Related Stories

No stories found.
Kannada Bar & Bench
kannada.barandbench.com