ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಸಾವಿನ ತನಿಖೆ ಕೋರಿದ್ದ ಅರ್ಜಿ ವಜಾಗೊಳಿಸಿದ ಕಲ್ಕತ್ತಾ ಹೈಕೋರ್ಟ್

ಮುಖರ್ಜಿ ಅವರ ಮರಣದ 70 ವರ್ಷಗಳ ನಂತರ ಅರ್ಜಿ ಸಲ್ಲಿಸಲಾಗಿದ್ದು ತನಿಖೆ ನಿರರ್ಥಕ ಕಸರತ್ತು ಎಂದು ನ್ಯಾಯಾಲಯ ಹೇಳಿದೆ.
Dr. Syama Prasad Mukherjee and Calcutta
Dr. Syama Prasad Mukherjee and Calcutta

ಕಾಶ್ಮೀರದಲ್ಲಿ 1953ರಲ್ಲಿ ಪೊಲೀಸ್‌ ವಶದಲ್ಲಿದ್ದ ವೇಳೆ ಸಾವನ್ನಪ್ಪಿದ ಭಾರತೀಯ ಜನಸಂಘದ (ಬಿಜಿಎಸ್‌) ಸ್ಥಾಪಕ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಸಾವಿನ ಕುರಿತು ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳು ತನಿಖೆ ನಡೆಸಬೇಕು ಎಂದು ಕೋರಿದ್ದ ಅರ್ಜಿಯನ್ನು ಕಲ್ಕತ್ತಾ ಹೈಕೋರ್ಟ್‌ ಬುಧವಾರ ವಜಾಗೊಳಿಸಿದೆ (ಸಮರ್‌ಜಿತ್‌ ರಾಯ್‌ಚೌಧರಿ ಮತ್ತಿತರರು ಹಾಗೂ ಕೇಂದ್ರ ಸರ್ಕಾರ ಮತ್ತಿತರರ ನಡುವಣ ಪ್ರಕರಣ).

ಯಾವುದೇ ದಾಖಲೆಗಳು ಇಲ್ಲದಿರುವುದು ಅಥವಾ ಘಟನೆಯ ಬಗ್ಗೆ ಬೆಳಕು ಚೆಲ್ಲಬಹುದಾದ ಯಾವುದೇ ವ್ಯಕ್ತಿ ಇಲ್ಲದಿರುವುದರಿಂದ ಡಾ. ಮುಖರ್ಜಿಯವರ ಮರಣದ 70 ವರ್ಷಗಳ ನಂತರ ಸಲ್ಲಿಸಲಾಗಿರುವ ಅರ್ಜಿಯನ್ನು ಪರಿಗಣಿಸಲಾಗದು. ಹೀಗಾಗಿ ತನಿಖೆ ನಡೆಸುವುದು ನಿರರ್ಥಕ ಕಸರತ್ತು ಎಂದು ತಿಳಿಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಮತ್ತು ನ್ಯಾಯಮೂರ್ತಿ ರಾಜರ್ಷಿ ಭಾರದ್ವಾಜ್ ಅವರಿದ್ದ ಪೀಠ ಅರ್ಜಿಯನ್ನು ವಜಾಗೊಳಿಸಿತು.

ಮುಖರ್ಜಿಅವರ ಸಾವಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಗೌಪ್ಯ ವರ್ಗೀಕರಣದಿಂದ ಹೊರಗಿರಿಸಿ ಲಭ್ಯವಾಗಿಸಬೇಕು, ಅಲ್ಲದೆ ಅಂದಿನ ಪ್ರಧಾನಿ ಜವಾಹರ್‌ ಲಾಲ್‌ ನೆಹರೂ ಅವರ ಪಿತೂರಿಯ ಪರಿಣಾಮವಾಗಿ ಮುಖರ್ಜಿ ಅವರ ಸಾವು ಸಂಭವಿಸಿತ್ತೇ ಎನ್ನುವ ಬಗ್ಗೆ ಕೇಂದ್ರ ಹಾಗೂ ಪಶ್ಚಿಮ ಬಂಗಾಳ ಸರ್ಕಾರದಿಂದ ನಿರ್ದಿಷ್ಟ ಹೇಳಿಕೆ ನೀಡಬೇಕು ಎಂದು ಅರ್ಜಿದಾರರಾದ ಸ್ಮರಜಿತ್ ರಾಯ್ ಚೌಧರಿ ಮತ್ತು ಅಜಿತ್ ಕುಮಾರ್ ಮಿಶ್ರಾ ಅವರು ಕೋರಿದ್ದರು.

ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರು ಬಂಧನದಲ್ಲಿದ್ದಾಗ ಅವರ ಸಾವು ಹೇಗೆ ಸಂಭವಿಸಿತು ಎಂಬುದರ ಬಗ್ಗೆ ಭಾರತದ ನಾಗರಿಕರಿಗೆ ಯಾವುದೇ ಮಾಹಿತಿ ಇಲ್ಲ. ಆದ್ದರಿಂದ, ಮುಖರ್ಜಿಯವರ ನಿಗೂಢ ಸಾವಿನ ಬಗ್ಗೆ ಮಾಹಿತಿ ಪಡೆಯುವ ಹಕ್ಕು ಎಲ್ಲಾ ನಾಗರಿಕರಿಗೆ ಇದೆ" ಎಂದು ಮನವಿಯಲ್ಲಿ ತಿಳಿಸಲಾಗಿತ್ತು.

Also Read
ಬೋಸ್‌ ಕಣ್ಮರೆ ಸತ್ಯ ಶೋಧನಾ ಸಮಿತಿ ಮುಖ್ಯಸ್ಥರಾಗಿದ್ದ ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಂ ಕೆ ಮುಖರ್ಜಿ ನಿಧನ

1947 ರಲ್ಲಿ ನೆಹರು ನೇತೃತ್ವದ ಮಧ್ಯಂತರ ಸರ್ಕಾರದಲ್ಲಿ ಕೈಗಾರಿಕಾ ಮತ್ತು ಸರಬರಾಜು ಸಚಿವರಾಗಿದ್ದ ಮುಖರ್ಜಿ ತರುವಾಯ ಅಲ್ಪಸಂಖ್ಯಾತ ಹಕ್ಕುಗಳು ಮತ್ತು ಅಲ್ಪಸಂಖ್ಯಾತ ಆಯೋಗಗಳ ಸ್ಥಾಪನೆ ವಿಚಾರವಾಗಿ ರಾಜೀನಾಮೆ ನೀಡಿದ್ದರು. ಅವರು ಸ್ಥಾಪಿಸಿದ್ದ ಬಿಜಿಎಸ್‌ 1952 ರ ಸಾರ್ವತ್ರಿಕ ಚುನಾವಣೆಗಳಲ್ಲಿ 3 ಲೋಕಸಭಾ ಸ್ಥಾನಗಳನ್ನು ಗೆದ್ದಿತ್ತು. ಸಂವಿಧಾನದ 370ನೇ ವಿಧಿಯೊಂದಿಗಿನ ಭಿನ್ನಾಭಿಪ್ರಾಯಗಳಿಂದಾಗಿ ನೆಹರೂ ಸರ್ಕಾರದ ಕಾಶ್ಮೀರ ನೀತಿಯನ್ನು ಅವರು ಬಲವಾಗಿ ವಿರೋಧಿಸಿದ್ದರು. ಅನುಮತಿ ಪಡೆಯದೆ ಕಾಶ್ಮೀರ ಪ್ರವೇಶಿಸಲು ಯತ್ನಿಸಿದ್ದರಿಂದ ಅವರನ್ನು ಕಟುವಾದಲ್ಲಿ ಪೊಲೀಸರು ಬಂಧಿಸಿದ್ದರು.

ಅರ್ಜಿದಾರರ ಪ್ರಕಾರ ಅವರು ಸೆರೆಯಲ್ಲಿದ್ದ ಸಂದರ್ಭದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು. ಕಾಶ್ಮೀರದಲ್ಲಿ ಆಗ ಅಧಿಕಾರದಲ್ಲಿದ್ದ ಶೇಖ್ ಅಬ್ದುಲ್ಲಾ ಸರ್ಕಾರ ಅವರನ್ನು ಏಕೆ ನ್ಯಾಯಾಲಯಕ್ಕೆ ಹಾಜರುಪಡಿಸಿರಲಿಲ್ಲ ಎಂದು ಅರ್ಜಿದಾರರು ಪ್ರಶ್ನಿಸಿದ್ದರು. ಹೀಗಾಗಿ ಸಾವಿನ ಕುರಿತು ನ್ಯಾಯಾಲಯಕ್ಕೆ ವಿವರವಾದ ವರದಿ ಸಲ್ಲಿಸಲು ಕೇಂದ್ರ ಸರ್ಕಾರ, ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಕಾಶ್ಮೀರ ಮತ್ತು ಪಶ್ಚಿಮ ಬಂಗಾಳ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಅರ್ಜಿಯಲ್ಲಿ ಕೋರಲಾಗಿತ್ತು.

Related Stories

No stories found.
Kannada Bar & Bench
kannada.barandbench.com