ಬೋಸ್‌ ಕಣ್ಮರೆ ಸತ್ಯ ಶೋಧನಾ ಸಮಿತಿ ಮುಖ್ಯಸ್ಥರಾಗಿದ್ದ ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಂ ಕೆ ಮುಖರ್ಜಿ ನಿಧನ

ಮುಖರ್ಜಿ ನಿವೃತ್ತರಾದ ಬಳಿಕ ಅವರನ್ನು 1999ರಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸುಭಾಷ್‌ ಚಂದ್ರ ಬೋಸ್‌ ಅವರ ಕಣ್ಮರೆ ಸತ್ಯ ಶೋಧನಾ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿತ್ತು.
Justice MK Mukherjee
Justice MK Mukherjee

ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಂ ಕೆ ಮುಖರ್ಜಿ ಅವರು ಶನಿವಾರ ಕೋಲ್ಕತ್ತಾದಲ್ಲಿ ನಿಧನರಾಗಿದ್ದಾರೆ ಎಂದು ಟೆಲಿಗ್ರಾಫ್‌ ಪತ್ರಿಕೆ ವರದಿ ಮಾಡಿದೆ. ಅವರಿಗೆ 87 ವರ್ಷ ವಯಸ್ಸಾಗಿತ್ತು.

1933ರಲ್ಲಿ ಜನಿಸಿದ್ದ ಮನೋಜ್‌ ಕುಮಾರ್‌ ಮುಖರ್ಜಿ ಅವರು 1962ರಲ್ಲಿ ವಕೀಲರಾಗಿ ನೋಂದಾಯಿಸಿದ್ದು, 1956ರಲ್ಲಿ ಅನ್ಸೋಲ್‌ ವಕೀಲರ ಸಂಘದ ಸದಸ್ಯರಾದರು. 1971ರವರೆಗೆ ಸಬ್‌ ಡಿವಿಷನಲ್‌ ಮತ್ತು ಜಿಲ್ಲಾ ನ್ಯಾಯಾಲಯ ಮತ್ತು ಕಾರ್ಮಿಕ ನ್ಯಾಯಮಂಡಳಿಯಲ್ಲಿ ಪ್ರಾಕ್ಟೀಸ್‌ ಮಾಡಿದ್ದರು. ಕ್ರಿಮಿನಲ್‌ ಕಾನೂನು ಮತ್ತು ಕೈಗಾರಿಕಾ ಕಾರ್ಮಿಕ ವಿಚಾರಗಳಲ್ಲಿ ಅವರು ನೈಪುಣ್ಯತೆ ಸಾಧಿಸಿದ್ದರು.

Also Read
ನಿವೃತ್ತ ಮುಖ್ಯ ನ್ಯಾಯಮೂರ್ತಿ, ಮಾಜಿ ರಾಜ್ಯಪಾಲ ರಾಮಾ ಜೋಯಿಸ್ ನಿಧನ

1977ರ ಜೂನ್‌ 17ರಲ್ಲಿ ಕಲ್ಕತ್ತಾ ಹೈಕೋರ್ಟ್‌ನಲ್ಲಿ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕವಾಗಿದ್ದ ಮುಖರ್ಜಿ ಅವರು 1977ರ ಡಿಸೆಂಬರ್ 8ರಂದು ಖಾಯಂ ನ್ಯಾಯಮೂರ್ತಿಯಾಗಿ ಪದಗ್ರಹಣ ಮಾಡಿದರು. 1993ರ ಡಿಸೆಂಬರ್‌ 14ರಂದು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಯಾಗಿ ಪದನ್ನೋತಿ ಹೊಂದಿದ ಅವರು 1998ರ ನವೆಂಬರ್‌ 11ರಂದು ನಿವೃತ್ತರಾದರು.

ನಿವೃತ್ತರಾದ ಬಳಿಕ ಅವರನ್ನು 1999ರಲ್ಲಿ ʼಸ್ವಾತಂತ್ರ್ಯ ಹೋರಾಟಗಾರ ಸುಭಾಷ್‌ ಚಂದ್ರ ಬೋಸ್‌ ಅವರ ಕಣ್ಮರೆ ಸತ್ಯ ಶೋಧನಾ ಸಮಿತಿʼಯ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಯಿತು. ಬೋಸ್‌ ಅವರು ವಿಮಾನ ದುರಂತದಲ್ಲಿ ಸಾವನ್ನಪ್ಪಿರಲಿಲ್ಲ, ಜಪಾನ್‌ನ ರೆಂಕೋಜಿ ದೇವಾಲಯದಲ್ಲಿನ ಚಿತಾಭಸ್ಮವು ಬೋಸ್‌ ಅವರದ್ದಲ್ಲ ಎಂದು ಸಮಿತಿ ವರದಿ ಸಲ್ಲಿಸಿತ್ತು. 2005ರಲ್ಲಿ ಮುಖರ್ಜಿ ಅವರ ವರದಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿತ್ತು.

Related Stories

No stories found.
Kannada Bar & Bench
kannada.barandbench.com