ಎನ್‌ಎಚ್‌ಆರ್‌ಸಿ ಮಧ್ಯಪ್ರವೇಶ ಆದೇಶ ಹಿಂಪಡೆಯುವ ಕೋರಿಕೆ: ಮಮತಾ ಸರ್ಕಾರದ ಮನವಿ ವಜಾ ಮಾಡಿದ ಕಲ್ಕತ್ತಾ ಹೈಕೋರ್ಟ್‌

ತನ್ನ ಆದೇಶವನ್ನು ಪ್ರಶ್ನಿಸಿರುವ ಮೇಲ್ಮನವಿಯ ವಿಚಾರಣೆ ನಡೆಸಲಾಗದು. ಎನ್‌ಎಚ್‌ಆರ್‌ಸಿಯ ಮುಂದೆ ರಾಜ್ಯ ಸರ್ಕಾರ ವಾದ ಮಂಡಿಸಬಹುದು ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ರಾಜೇಶ್‌ ಬಿಂದಾಲ್‌ ನೇತೃತ್ವದ ಪಂಚಪೀಠ ಹೇಳಿದೆ.
Case on post poll violence before the Calcutta High Court
Case on post poll violence before the Calcutta High Court
Published on

ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರವಾಗಿ ನಡೆದಿವೆ ಎನ್ನಲಾಗಿರುವ ಗಲಭೆಗಳಿಗೆ ಸಂಬಂಧಿಸಿದ ದೂರುಗಳ ಕುರಿತು ವಿಚಾರಣೆ ನಡೆಸಲು ಸಮಿತಿ ರಚಿಸುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ (ಎನ್‌ಎಚ್‌ಆರ್‌ಸಿ) ಆದೇಶಿಸಿರುವ ತನ್ನ ಜೂನ್‌ 18ರ ಆದೇಶವನ್ನು ಹಿಂಪಡೆಯುವಂತೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಕಲ್ಕತ್ತಾ ಹೈಕೋರ್ಟ್‌ ಸೋಮವಾರ ವಜಾ ಮಾಡಿದೆ.

ತನ್ನ ಆದೇಶವನ್ನು ಪ್ರಶ್ನಿಸಿರುವ ಮೇಲ್ಮನವಿಯ ವಿಚಾರಣೆ ನಡೆಸಲಾಗದು. ಎನ್‌ಎಚ್‌ಆರ್‌ಸಿಯ ಮುಂದೆ ರಾಜ್ಯ ಸರ್ಕಾರ ವಾದ ಮಂಡಿಸಬಹುದು ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ರಾಜೇಶ್‌ ಬಿಂದಾಲ್‌ ನೇತೃತ್ವದ ಪಂಚಪೀಠ ಹೇಳಿದೆ.

“ಜೂನ್‌ 18ರಂದು ಈ ನ್ಯಾಯಾಲಯ ಹೊರಡಿಸಿರುವ ಆದೇಶ ಹಿಂಪಡೆಯುವುದು, ಮಾರ್ಪಾಡು ಮಾಡುವುದು ಅಥವಾ ತಡೆ ನೀಡುವುದಕ್ಕೆ ಯಾವುದೇ ಸಕಾರಣವಿಲ್ಲ. ತಾನು ಕೈಗೊಂಡಿರುವ ಕ್ರಮ ಮತ್ತು ತನ್ನ ವಾದವನ್ನು ಎನ್‌ಎಚ್‌ಆರ್‌ಸಿಯ ಮುಂದೆ ರಾಜ್ಯ ಸರ್ಕಾರ ಮಂಡಿಸಬಹುದು. ನಾವೇ ಹೊರಡಿಸಿರುವ ಆದೇಶದ ಮೇಲ್ಮನವಿಯ ವಿಚಾರಣೆಯನ್ನು ನಾವು ನಡೆಸಲಾಗದು. ಹೀಗಾಗಿ, ಅರ್ಜಿ ವಜಾ ಮಾಡಲಾಗಿದೆ” ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿದೆ.

ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರವಾಗಿ ನಡೆದಿರುವ ಗಲಭೆಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತಾದ ಎಲ್ಲಾ ಸಂಗತಿಗಳನ್ನು ದಾಖಲೆಯಲ್ಲಿ ಸಲ್ಲಿಸಲು ಅಗತ್ಯ ಕಾಲಾವಕಾಶ ನೀಡಿಲ್ಲ. ಅಲ್ಲದೇ ತಮ್ಮ ವಾದವನ್ನು ಆಲಿಸಿಲ್ಲ. ಹೀಗಾಗಿ, ಜೂನ್‌ 18ರ ಆದೇಶ ಹಿಂಪಡೆಯಬೇಕು ಎಂದು ಮಮತಾ ಬ್ಯಾನರ್ಜಿ ಅವರ ಸರ್ಕಾರ ಕಲ್ಕತ್ತಾ ಹೈಕೋರ್ಟ್‌ಗೆ ಮನವಿ ಮಾಡಿತ್ತು.

ಪಶ್ಚಿಮ ಬಂಗಾಳದ ಅಡ್ವೊಕೇಟ್‌ ಜನರಲ್‌ ಕಿಶೋರ್‌ ದತ್ತ ಅವರು “ಯಾವುದೇ ಗಲಭೆಯನ್ನು ಚುನಾವಣೋತ್ತರ ಗಲಭೆ ಎನ್ನಲಾಗದು. ಹೀಗಾಗಿ, ಹೆಚ್ಚಿನ ಮಾಹಿತಿ ಸಲ್ಲಿಸಲು ಅವಕಾಶ ಮಾಡಿಕೊಡಬೇಕು. ಹೀಗಾದರೆ, ಇದೇ ನ್ಯಾಯಾಲಯದಲ್ಲಿ ಎಲ್ಲವೂ ತೀರ್ಮಾನವಾಗಲಿದೆ. ರಾಜ್ಯ ಸರ್ಕಾರ ಕ್ರಮಕೈಗೊಳ್ಳುವುದಿಲ್ಲ ಎಂದು ನಾನು ಹೇಳಲಾರೆ. ನಾವು ಈಗಾಗಲೇ ಕ್ರಮವಹಿಸಿದ್ದೇವೆ” ಎಂದರು.

Also Read
ಮತದಾನ ಹಿಂಸಾಚಾರದ ಬಳಿಕ ಜನರ ಆಂತರಿಕ ಸ್ಥಳಾಂತರ: ಪಶ್ಚಿಮ ಬಂಗಾಳ ಸರ್ಕಾರದ ಪ್ರತಿಕ್ರಿಯೆ ಕೇಳಿದ ಸುಪ್ರೀಂಕೋರ್ಟ್

ಪಶ್ಚಿಮ ಬಂಗಾಳ ಸರ್ಕಾರವು ಆರಂಭದಿಂದಲೂ ಚುನಾವಣೋತ್ತರ ಗಲಭೆಗಳನ್ನು ನಿರಾಕರಿಸುತ್ತಿದೆ. ಕೆಲವರು ಸಲ್ಲಿಸಿರುವ ಮನವಿಗಳು ಮತ್ತು ರಾಜ್ಯ ಕಾನೂನು ಸೇವೆಗಳಾ ಪ್ರಾಧಿಕಾರದ ಕಾರ್ಯದರ್ಶಿ ಸಲ್ಲಿಸಿರುವ ವರದಿಯು ಬೇರೆಯದೇ ಆದ ಚಿತ್ರಣ ನೀಡುತ್ತದೆ ಎಂದು ಜೂನ್‌ 18ರ ಆದೇಶದಲ್ಲಿ ಹೈಕೋರ್ಟ್‌ ಹೇಳಿತ್ತು. “ಕಾನೂನು ಮತ್ತು ಸುವ್ಯವಸ್ಥೆ ನೋಡಿಕೊಳ್ಳುವುದರ ಜೊತೆಗೆ ಜನರಲ್ಲಿ ಭರವಸೆ ಮೂಡಿಸುವುದು ರಾಜ್ಯ ಸರ್ಕಾರದ ಕರ್ತವ್ಯ. ಆರಂಭದಿಂದಲೂ ರಾಜ್ಯ ಸರ್ಕಾರ ಇದನ್ನು ನಿರಾಕರಿಸುತ್ತಿದೆ. ಆದರೆ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವರದಿಯು ಬೇರೆಯದೇ ಚಿತ್ರಣ ನೀಡುತ್ತದೆ” ಎಂದು ನ್ಯಾಯಾಲಯ ಹೇಳಿತ್ತು.

ರಾಜ್ಯ ಸರ್ಕಾರ ಇಚ್ಛಿಸಿದ ರೀತಿಯಲ್ಲಿ ಮುಂದುವರಿಯಲು ಅನುಮತಿಸಲಾಗದು. ಲಭ್ಯವಿರುವ ದಾಖಲೆಗಳಲ್ಲಿ ರಾಜ್ಯ ಸರ್ಕಾರ ಕ್ರಮಕೈಗೊಂಡಿರುವುದರ ಬಗ್ಗೆ ಉಲ್ಲೇಖವಿಲ್ಲ. ಹೀಗಾಗಿ, ದೂರುಗಳ ಪರಿಶೀಲನೆ ನಡೆಸಲು ಸಮಿತಿ ರಚಿಸುವಂತೆ ಎನ್‌ಎಚ್‌ಆರ್‌ಸಿಗೆ ನಾವು ನಿರ್ದೇಶನ ನೀಡುತ್ತಿದ್ದೇವೆ” ಎಂದು ಪೀಠ ಹೇಳಿತ್ತು.

Kannada Bar & Bench
kannada.barandbench.com