ಕಲ್ಕತ್ತಾ ಹೈಕೋರ್ಟ್ ತಾನೇ ಹೊರಡಿಸಿದ್ದ ಆದೇಶವೊಂದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದು ಇದು ಹೈಕೋರ್ಟ್ ನ್ಯಾಯಮೂರ್ತಿಗಳ ನಡುವಿನ ಆಡಳಿತಾತ್ಮಕ ಭಿನ್ನಾಭಿಪ್ರಾಯಗಳ ದ್ಯೋತಕದಂತಿದೆ.
ಪ್ರಕರಣದ ವಿಚಾರಣೆಯೊಂದನ್ನು ತಮಗೆ ನಿಯೋಜಿಸಿ ಬಳಿಕ ಅದನ್ನು ವಿಭಾಗೀಯ ಪೀಠಕ್ಕೆ ವರ್ಗಾಯಿಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ನಡೆಗೆ ಆಕ್ಷೇಪ ವ್ಯಕ್ತಪಡಿಸಿ ಸಬ್ಯಸಾಚಿ ಭಟ್ಟಾಚಾರ್ಯ ಅವರು ಜುಲೈ 19 ರಂದು ಹೊರಡಿಸಿದ್ದ ಆದೇಶವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ.
ಅಡ್ವೊಕೇಟ್ ಆನ್ ರೆಕಾರ್ಡ್ ದೀಕ್ಷಾ ರೈ ಅವರ ಮೂಲಕ ಸಲ್ಲಿಸಲಾದ ಅರ್ಜಿಯಲ್ಲಿ ಹೈಕೋರ್ಟ್‌ನ ಆಡಳಿತಾತ್ಮಕ ವಿಭಾಗದ ಕಡೆಯಿಂದ ಆದೇಶವನ್ನು ಪ್ರಶ್ನೆ ಮಾಡಲಾಗಿದೆ.
ನ್ಯಾಯಮೂರ್ತಿ ಭಟ್ಟಾಚಾರ್ಯ ತಮ್ಮ ಆದೇಶದಲ್ಲಿ, ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅವರು ತೆಗೆದುಕೊಂಡ ಆಡಳಿತಾತ್ಮಕ ನಿರ್ಧಾರ ʼಉದ್ಧಟತನದ್ದುʼ ಎಂದು ಹೇಳಿದ್ದರು.
ಮುಖ್ಯ ನ್ಯಾಯಮೂರ್ತಿ ಅವರು ಮಾಸ್ಟರ್ ಆಫ್ ರೋಸ್ಟರ್ ಆಗಿದ್ದರೂ “ನಾನು ಪರಿವೀಕ್ಷಿಸುವ ಎಲ್ಲದಕ್ಕೂ” ಅವರು ಮಾಸ್ಟರ್ ಅಲ್ಲ. ತಮಗೆ ದೊರೆತಿರುವ ಅಧಿಕಾರವನ್ನು ಮನಸೋ ಇಚ್ಛೆ ಬಳಸಲಾಗದು ಎಂದು ನ್ಯಾ. ಭಟ್ಟಾಚಾರ್ಯ ಜುಲೈ 19ರಂದು ಕಟುವಾದ ಆದೇಶ ಹೊರಡಿಸಿದ್ದರು.
ಅಧಿಕಾರದ ಉನ್ನತ ಮಟ್ಟದಲ್ಲಿ ಉದ್ಧಟತನಕ್ಕೆ ಮಾನ್ಯತೆ ಇಲ್ಲ. ಅಪಾರದರ್ಶಕತೆ ಎನ್ನುವುದು ಊಹಾಪೋಹಗಳಿಗೆ ಕಾರಣವಾಗಲಿದ್ದು, ಇದು ಆರೋಗ್ಯಕರ ನ್ಯಾಯಿಕ ವ್ಯವಸ್ಥೆಯ ದೃಷ್ಟಿಯಿಂದ ಒಳ್ಳೆಯದಲ್ಲ” ಎಂದು ನ್ಯಾ. ಭಟ್ಟಾಚಾರ್ಯ ಅಭಿಪ್ರಾಯಪಟ್ಟಿದ್ದರು.