ಪ್ರಕರಣದ ಮರು ನಿಯೋಜನೆ: ಹಂಗಾಮಿ ಸಿಜೆ ರಾಜೇಶ್‌ ಬಿಂದಾಲ್‌ ವಿರುದ್ಧ ನ್ಯಾ. ಸಬ್ಯಸಾಚಿ ಭಟ್ಟಾಚಾರ್ಯ ಅಸಮಾಧಾನ

ಮುಖ್ಯ ನ್ಯಾಯಮೂರ್ತಿ ಮಾಸ್ಟರ್‌ ಆಫ್‌ ರೋಸ್ಟರ್‌ ಆಗಿದ್ದರೂ “ನಾನು ಪರಿವೀಕ್ಷಿಸುವ ಎಲ್ಲದಕ್ಕೂ” ಅವರು ಮಾಸ್ಟರ್‌ ಅಲ್ಲ. ತಮಗೆ ದೊರೆತಿರುವ ಅಧಿಕಾರವನ್ನು ಮನಸೋ ಇಚ್ಛೆ ಬಳಸಲಾಗದು ಎಂದು ನ್ಯಾ. ಭಟ್ಟಾಚಾರ್ಯ ಕಟುವಾದ ಆದೇಶ ಹೊರಡಿಸಿದ್ದಾರೆ.
ಪ್ರಕರಣದ ಮರು ನಿಯೋಜನೆ: ಹಂಗಾಮಿ ಸಿಜೆ ರಾಜೇಶ್‌ ಬಿಂದಾಲ್‌ ವಿರುದ್ಧ ನ್ಯಾ. ಸಬ್ಯಸಾಚಿ ಭಟ್ಟಾಚಾರ್ಯ ಅಸಮಾಧಾನ
Sabyasachi Bhattacharyya and Rajesh Bindal, Calcutta HC

ಪ್ರಕರಣದ ವಿಚಾರಣೆಯೊಂದನ್ನು ತಮಗೆ ನಿಯೋಜಿಸಿ ಬಳಿಕ ಅದನ್ನು ವಿಭಾಗೀಯ ಪೀಠಕ್ಕೆ ವರ್ಗಾಯಿಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ರಾಜೇಶ್‌ ಬಿಂದಾಲ್‌ ನಡೆಗೆ ಕಲ್ಕತ್ತಾ ಹೈಕೋರ್ಟ್‌ ನ್ಯಾಯಮೂರ್ತಿ ಸಬ್ಯಸಾಚಿ ಭಟ್ಟಾಚಾರ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮುಖ್ಯ ನ್ಯಾಯಮೂರ್ತಿ ಅವರು ಮಾಸ್ಟರ್‌ ಆಫ್‌ ರೋಸ್ಟರ್‌ ಆಗಿದ್ದರೂ “ನಾನು ಪರಿವೀಕ್ಷಿಸುವ ಎಲ್ಲದಕ್ಕೂ” ಅವರು ಮಾಸ್ಟರ್‌ ಅಲ್ಲ. ತಮಗೆ ದೊರೆತಿರುವ ಅಧಿಕಾರವನ್ನು ಮನಸೋ ಇಚ್ಛೆ ಬಳಸಲಾಗದು ಎಂದು ನ್ಯಾ. ಭಟ್ಟಾಚಾರ್ಯ ಸೋಮವಾರ ಕಟುವಾದ ಆದೇಶ ಹೊರಡಿಸಿದ್ದಾರೆ.

“ಮಾಸ್ಟರ್ ಆಫ್ ರೋಸ್ಟರ್ "ಪರಿಕಲ್ಪನೆಯಿಂದ ದೊರೆಯುವ ನಿಯೋಜನಾ ಶಕ್ತಿಯು, ನಿರ್ದಿಷ್ಟ ರೀತಿಯ ವಿಷಯಗಳನ್ನು ವಿಚಾರಣೆಗೆ ಎತ್ತಿಕೊಳ್ಳಲು ನಿರ್ದಿಷ್ಟ ನ್ಯಾಯಪೀಠಗಳನ್ನು ನಿಯೋಜಿಸಲು ಮುಖ್ಯ ನ್ಯಾಯಾಧೀಶರ ಆಡಳಿತಾತ್ಮಕ ಶಕ್ತಿಯನ್ನು ಸೀಮಿತಗೊಳಿಸುತ್ತದೆ. ಇದನ್ನು ರಿಜಿಸ್ಟ್ರಾರ್‌ ಜನರಲ್‌ ಅಥವಾ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಇಚ್ಛೆಗೆ ಅನುಗುಣವಾಗಿ ಚಲಾಯಿಸುವಂತಿಲ್ಲ” ಎಂದು ನ್ಯಾ. ಭಟ್ಟಾಚಾರ್ಯ ಹೇಳಿದ್ದಾರೆ.

ನ್ಯಾಯಾಲಯ ರೂಪಿಸಿದ ನಿಯಮಗಳಿಗೆ ಅನುಸಾರವಾಗಿ ಮಾಸ್ಟರ್ ಆಫ್ ರೋಸ್ಟರ್ ಅಧಿಕಾರ ಚಲಾಯಿಸಬೇಕಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. “ಮುಖ್ಯ ನ್ಯಾಯಮೂರ್ತಿ (ಹಂಗಾಮಿ ಮುಖ್ಯ ನ್ಯಾಯಮೂರ್ತಿಯೂ ಸೇರಿದಂತೆ) ಮಾಸ್ಟರ್‌ ಆಫ್‌ ರೋಸ್ಟರ್‌ ಎಂಬುದನ್ನು ಸ್ಪಷ್ಟಪಡಿಸಲಾಗಿದ್ದು, ಸಮಾನರಲ್ಲಿ ಹೆಚ್ಚು ಸಮಾನರಾಗಿದ್ದಾರೆ (ಆರ್ವೆಲ್‌ ಹೇಳಿರುವುದಲ್ಲ, ನಮ್ಮದೇ ಸುಪ್ರೀಂ ಕೋರ್ಟ್‌ ಹೇಳಿದೆ). ಹೆಚ್ಚಿನ ಸಮಾನತೆಯು ಈ ನ್ಯಾಯಾಲಯದ ಆಡಳಿತಾತ್ಮಕ ವಿಭಾಗಕ್ಕೆ ಸಂಬಂಧಿಸಿದ್ದಾಗಿದ್ದು, ಈ ನ್ಯಾಯಾಲಯದ ನ್ಯಾಯಾಧೀಶರನ್ನು ಒಳಗೊಂಡ ಪೂರ್ಣ ಪೀಠವು ರೂಪಿಸಿರುವ ಮೇಲ್ಮನವಿ ವಿಭಾಗದ ನಿಯಮಗಳನ್ನು ಮೀರಲಾಗದು” ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಆಕ್ಷೇಪಾರ್ಹವಾದ ಮರು ನಿಯೋಜನೆಗೆ ಒಳಪಟ್ಟಿರುವ ಪ್ರಕರಣದ ವಿಚಾರಣೆಯ ವೇಳೆ ಹಿಂದೆ ನ್ಯಾಯಮೂರ್ತಿ ಭಟ್ಟಾಚಾರ್ಯ ಅವರು ಕಲ್ಕತ್ತಾ ಹೈಕೋರ್ಟ್‌ನಲ್ಲಿನ ವಿಡಿಯೊ ಕಾನ್ಫರೆನ್ಸ್‌ ವೇಳೆ ಸಮಸ್ಯೆಗಳ ಕುರಿತು ಗಂಭೀರ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಸಂಪೂರ್ಣವಾಗಿ ಸಂಪರ್ಕದ ಸಮಸ್ಯೆಗಳನ್ನು ಪರಿಹರಿಸುವವರೆಗೆ ಕಲಾಪ ನಡೆಸುವುದಿಲ್ಲ ಎಂದು ಹೇಳಿದ್ದರು.

ವರ್ಚುವಲ್‌ ವಿಚಾರಣೆಯಲ್ಲಿ ನಿರಂತರವಾಗಿ ಸಮಸ್ಯೆಗಳಾಗುತ್ತಿರುವ ಹಿನ್ನೆಲೆಯಲ್ಲಿ ರಿಜಿಸ್ಟ್ರಾರ್‌ ಜನರಲ್‌ ಮತ್ತು ಕೇಂದ್ರ ಯೋಜನಾ ಸಮನ್ವಯಕಾರರು ಸೇರಿದಂತೆ ಹೈಕೋರ್ಟ್‌ ಆಡಳಿತದ ವಿರುದ್ಧ ಏಕೆ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಬಾರದು ಎಂದು ಹೇಳಿ ಜುಲೈ 16ರಂದು ನ್ಯಾ. ಭಟ್ಟಾಚಾರ್ಯ ಆದೇಶ ಹೊರಡಿಸಿದ್ದರು.

ವರ್ಚುವಲ್‌ ಸೇವೆಯಲ್ಲಿ ಭಾರಿ ಸಮಸ್ಯೆಯಾಗುತ್ತಿರುವುದರಿಂದ ವರ್ಚುವಲ್‌ ವಿಚಾರಣೆಯ ವೇಳೆ ವಕೀಲರ ಜೊತೆ ಸಂಜ್ಞೆಗಳನ್ನು ಮಾಡುವುದು ಅನಿವಾರ್ಯವಾಗಿದೆ. ವರ್ಚುವಲ್‌ ವಿಚಾರಣೆಯು ಹಾಸ್ಯಾಸ್ಪದವಾಗಿ ಮಾರ್ಪಟ್ಟಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಆನಂತರ ತಿಳಿದು ಬಂದಿರುವುದೇನೆಂದರೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸೂಚನೆಯ ಮೇರೆಗೆ ಪ್ರಕರಣವನ್ನು ವಿಭಾಗೀಯ ಪೀಠಕ್ಕೆ ವರ್ಗಾಯಿಸಲಾಗಿದೆ. ಇದರಿಂದ ಅಸಂತುಷ್ಟಗೊಂಡ ನ್ಯಾ. ಭಟ್ಟಾಚಾರ್ಯ ಅವರು ನ್ಯಾಯಿಕ ಆದೇಶದ ಮೂಲಕ ಸೋಮವಾರ ಪ್ರಕರಣದ ವಿಚಾರಣೆಯನ್ನು ತಮ್ಮ ಮುಂದೆಯೇ ಪಟ್ಟಿ ಮಾಡಿಕೊಂಡಿದ್ದರು.

“ಮಾರನೇಯ ಕೆಲಸದ ದಿನದಂದು ಪಟ್ಟಿಯ ಮೇಲ್ಭಾಗದಲ್ಲಿ ನನ್ನ ನಿರ್ದಿಷ್ಟ ನಿರ್ದೇಶನದ ಅನ್ವಯ ಪಟ್ಟಿಯಲ್ಲಿ ಪ್ರಕರಣ ಕಾಣಿಸದಿದ್ದರೂ, ಈ ಆದೇಶವನ್ನು ಹೊರಡಿಸುವ ಸೀಮಿತ ಉದ್ದೇಶಕ್ಕಾಗಿ ಈ ವಿಷಯವನ್ನು ದಿನದ ಪಟ್ಟಿಯಲ್ಲಿ ಪರಿಗಣಿಸಲಾಗಿದೆ. ಇದು ಪ್ರಕರಣದ ಅರ್ಹತೆಗೆ ಸಂಬಂಧಿಸಿಲ್ಲ” ಎಂದು ಆದೇಶದ ಆರಂಭದಲ್ಲಿ ಹೇಳಿದ್ದರು.

“ಜುಲೈ 16ರ ನನ್ನ ಆದೇಶದ ಹೊರತಾಗಿಯೂ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅವರ ಸೂಚನೆಯಂತೆ ದಾಖಲೆಗಳನ್ನು ಪಡೆದು ಪ್ರಕರಣವನ್ನು ವಿಭಾಗೀಯ ಪೀಠದ ಮುಂದೆ ಹಂಚಿಕೆ ಮಾಡುವ ಸಂಬಂಧ ರಿಜಿಸ್ಟ್ರಾರ್‌ ಜನರಲ್‌ಗೆ ನಿರ್ದೇಶಿಸಲಾಗಿದೆ ಎಂದು ನನ್ನ ಅಧಿಕಾರಿಯು ತಿಳಿಸಿದಾಗ ನನಗೆ ಆಶ್ಚರ್ಯವಾಯಿತು” ಎಂದು ನ್ಯಾ. ಭಟ್ಟಾಚಾರ್ಯ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ವೈಯಕ್ತಿಕ ಕಾರಣದಿಂದ ಕೋಲ್ಕತ್ತಾದಿಂದ ಹೊರಗಿದ್ದಾಗಲೂ ಹಂಗಾಮಿ ನ್ಯಾಯಮೂರ್ತಿ ಬರೆದು ಸಹಿ, ಹಾಕಿದ್ದಾರೆ ಎನ್ನಲಾದ ಪತ್ರದ ನಕಲನ್ನು ವಾಟ್ಸಾಪ್‌ ಮೂಲಕ ಕಳುಹಿಸಲಾಗಿದ್ದು, ಅದನ್ನು ತಮಗೆ ಹಂಚಿಕೆ ಮಾಡಲಾಗಿದೆ ಎಂದೂ ವಿವರಿಸಿದ್ದಾರೆ.

Also Read
ಕಲ್ಕತ್ತಾ ಹೈಕೋರ್ಟ್‌ ಹಂಗಾಮಿ ಸಿಜೆ ಬಿಂದಾಲ್‌ ವಜಾ ಕೋರಿ ಸಿಜೆಐ ರಮಣಗೆ ಪತ್ರ ಬರೆದ ಪಶ್ಚಿಮ ಬಂಗಾಳ ವಕೀಲರ ಪರಿಷತ್‌

“ಜುಲೈ 16ರಂದು ಸಂಬಂಧಪಟ್ಟ ಈ ಪೀಠವು ನಿರ್ಧಾರ ಪ್ರಕಟಿಸಿದ್ದರೂ ನೇರವಾಗಿ ನನ್ನನ್ನು ಸಂಪರ್ಕಿಸುವ ಕನಿಷ್ಠ ವಿನಯತೆ ತೋರದೆ, ಪ್ರಕರಣವನ್ನು ಮತ್ತೊಂದು ಪೀಠಕ್ಕೆ ನಿಯೋಜಿಸುವ ವಿಚಾರವು ಅನುಚಿತ ಎಂದು ತಮಗೆ ಅನಿಸಿದೆ” ಎಂದು ಹೇಳಿದ್ದಾರೆ.

ನ್ಯಾಯಿಕ ಶಿಷ್ಟಾಚಾರ ಮತ್ತು ಔಚಿತ್ಯವನ್ನು ಉಲ್ಲಂಘಿಸುವ ಉದ್ದೇಶ ಹೊಂದಿಲ್ಲ. ಅಲ್ಲದೇ, ಆಕ್ಷೇಪಾರ್ಹವಾದ ಪ್ರಕರಣದ ವಿಚಾರಣೆ ನಡೆಸುವ ಯಾವುದೇ ವಿಶೇಷ ಆಸಕ್ತಿ ಹೊಂದಿಲ್ಲ ಎಂದೂ ನ್ಯಾ. ಭಟ್ಟಾಚಾರ್ಯ ಹೇಳಿದ್ದಾರೆ.

“ಅಧಿಕಾರದ ಉನ್ನತ ಮಟ್ಟದಲ್ಲಿ ದಿಟ್ಟತನಕ್ಕೆ ಮಾನ್ಯತೆ ಇಲ್ಲ ಎಂದೆನಿಸುತ್ತದೆ. ಅದಾಗ್ಯೂ, ಅಪಾರದರ್ಶಕತೆಯು ಕಾರಿಡಾರ್‌ನಲ್ಲಿ ಗುಸುಗುಸುವಿಗೆ ಕಾರಣವಾಗಲಿದ್ದು, ಇದು ಆರೋಗ್ಯಕರ ನ್ಯಾಯಿಕ ವ್ಯವಸ್ಥೆಯ ದೃಷ್ಟಿಯಿಂದ ಒಳ್ಳೆಯದಲ್ಲ” ಎಂದು ನ್ಯಾ. ಭಟ್ಟಾಚಾರ್ಯ ಅಭಿಪ್ರಾಯಪಟ್ಟಿದ್ದಾರೆ.

Related Stories

No stories found.