
ತಮ್ಮ ಪರಿತ್ಯಕ್ತ ಪತ್ನಿ ಮತ್ತು ಅಪ್ರಾಪ್ತ ಮಗಳಿಗೆ ತಿಂಗಳಿಗೆ ₹4 ಲಕ್ಷ ಮಧ್ಯಂತರ ಜೀವನಾಂಶ ನೀಡುವಂತೆ ಕ್ರಿಕೆಟಿಗ ಮೊಹಮ್ಮದ್ ಶಮಿ ಅವರಿಗೆ ಕಲ್ಕತ್ತಾ ಹೈಕೋರ್ಟ್ ಮಂಗಳವಾರ ಆದೇಶಿಸಿದೆ.
ಶಮಿ ಅವರ ಪತ್ನಿ ಮತ್ತು ಮಗಳಿಗೆ ₹1,30,000 ಜೀವನಾಂಶ ನೀಡುವಂತೆ ನಿರ್ದೇಶಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ನ್ಯಾಯಮೂರ್ತಿ ಡಾ. ಅಜಯ್ ಕುಮಾರ್ ಮುಖರ್ಜಿ ಅವರು ಪರಿಷ್ಕರಿಸಿದರು.
ಶಮಿ ವಿರುದ್ಧದ ಕೌಟುಂಬಿಕ ದೌರ್ಜನ್ಯ ಪ್ರಕರಣ ಇತ್ಯರ್ಥವಾಗುವವರೆಗೆ ಪತ್ನಿಗೆ ₹1,50,000 ಮತ್ತು ಮಗಳಿಗೆ ₹2,50,000 ಪರಿಹಾರ ನೀಡಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ. ಮೊತ್ತವನ್ನು ಅರ್ಜಿ ಸಲ್ಲಿಸಿದ ದಿನಾಂಕದಿಂದ ಅನ್ವಯವಾಗುವಂತೆ ಪಾವತಿಸಬೇಕು ಎಂದು ಅದು ಹೇಳಿದೆ.
ಶಮಿ ತನ್ನ ಮಗಳ ಶಿಕ್ಷಣ ಅಥವಾ ಇನ್ನಾವುದೇ ವೆಚ್ಚಕ್ಕೆ ಹೆಚ್ಚಿನ ಕೊಡುಗೆ ನೀಡಲು ಬಯಸಿದರೆ, ಅವರು ಹಾಗೆ ಮಾಡಲು ಸ್ವತಂತ್ರರು ಎಂದು ನ್ಯಾಯಾಲಯ ಹೇಳಿದೆ.
ಒಟ್ಟು ₹1,30,000 ಮಧ್ಯಂತರ ಜೀವನಾಂಶ ಪಾವತಿಸುವಂತೆ ಸೆಷನ್ಸ್ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಶಮಿ ಅವರ ಪತ್ನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಪೀಠ ಈ ಆದೇಶ ನೀಡಿದೆ. ಗಮನಾರ್ಹ ಸಂಗತಿ ಎಂದರೆ ಇದಕ್ಕೂ ಮುನ್ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಮಗಳಿಗಷ್ಟೇ ₹80,000 ಜೀವನಾಂಶ ನೀಡುವಂತೆಯೂ ಪರಿತ್ಯಕ್ತ ಪತ್ನಿಗೆ ಏನನ್ನೂ ನೀಡದಂತೆಯೂ ಆದೇಶಿಸಿತ್ತು.