ಸುವೇಂದು ಅಧಿಕಾರಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದುಗೊಳಿಸಿದ ಕಲ್ಕತ್ತಾ ಹೈಕೋರ್ಟ್

ಸೂಕ್ತ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸದ ಹಿನ್ನೆಲೆಯಲ್ಲಿ ಪ್ರಕರಣವನ್ನು ರದ್ದುಗೊಳಿಸಿದ ಪೀಠ. ಇದೇ ವೇಳೆ, ಸೂಕ್ತ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ದೂರುದಾರರಿಗೆ ಸ್ವಾತಂತ್ರ್ಯ ಕಲ್ಪಿಸಿತು.
Suvendu Adhikari, Calcutta High Court
Suvendu Adhikari, Calcutta High Court

ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಸುವೇಂದು ಅಧಿಕಾರಿ ವಿರುದ್ಧ ಹೂಡಿದ್ದ ಮಾನನಷ್ಟ ಮೊಕದ್ದಮೆಯನ್ನು ಕಲ್ಕತ್ತಾ ಹೈಕೋರ್ಟ್‌ ಇತ್ತೀಚೆಗೆ ರದ್ದುಗೊಳಿಸಿದೆ [ಸುವೇಂದು ಅಧಿಕಾರಿ ಮತ್ತು ಪ. ಬಂಗಾಳ ಸರ್ಕಾರ ನಡುವಣ ಪ್ರಕರಣ]. ಸೂಕ್ತ ನ್ಯಾಯಾಲಯದೆದುರು ಅರ್ಜಿ ಸಲ್ಲಿಸಿಲ್ಲ ಎಂದು ಅದು ಈ ವೇಳೆ ತಿಳಿಸಿದೆ.

ವಿಶೇಷ ಮ್ಯಾಜಿಸ್ಟ್ರೇಟ್‌ ಇಲ್ಲವೇ ಸಂಸದರು ಮತ್ತು ಶಾಸಕರುಗಳ ವಿರುದ್ಧದ ಪ್ರಕರಣಗಳ ವಿಚಾರಣೆಗೆ ಗೊತ್ತುಪಡಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಪ್ರಕರಣವನ್ನು ವಿಚಾರಣೆ ನಡೆಸಬೇಕು ಎಂದು ನ್ಯಾ ಬಿಬೇಕ್‌ ಚೌಧರಿ ಅವರಿದ್ದ ಪೀಠ ತಿಳಿಸಿತು.

 ಅರ್ಜಿಯ ವಿಚಾರಣಾರ್ಹತೆಗೆ ಹೋಗದ ನ್ಯಾಯಮೂರ್ತಿಗಳು, ʼ ಕಲ್ಕತ್ತಾದ ಸೆಷನ್ಸ್ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಸುವೇಂದು ಅವರ ವಿರುದ್ಧ ಸಲ್ಲಿಸಲಾದ ಮಾನನಷ್ಟ ದೂರನ್ನು ಪರಿಗಣಿಸುವಲ್ಲಿ ತಪ್ಪು ಮಾಡಿದ್ದಾರೆʼ ಎಂದು ಹೇಳಿದರು. ಸೂಕ್ತ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ದೂರುದಾರರಿಗೆ ಪೀಠ ಸ್ವಾತಂತ್ರ್ಯ ನೀಡಿತು.

Also Read
[ಸುವೇಂದು ಅಧಿಕಾರಿ- ಮೆಹ್ತಾ ಭೇಟಿ] ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಹೇಳುವುದೇನು?

ರಾಜ್ಯದಲ್ಲಿ ಸಂಸದರ ಅಥವಾ ಶಾಸಕರ ವಿಶೇಷ ನ್ಯಾಯಾಲಯಗಳ ರಚನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮತ್ತು ಕಲ್ಕತ್ತಾ ಹೈಕೋರ್ಟ್ ಎರಡೂ ವಿವರವಾದ ಮಾರ್ಗಸೂಚಿಗಳನ್ನು ಹೊರಡಿಸಿವೆ. ಮಾರ್ಚ್ 6, 2018 ಮತ್ತು ಜನವರಿ 27, 2021 ರಂದು ಹೊರಡಿಸಲಾದ ಎರಡು ಅಧಿಸೂಚನೆಗಳ ಕಾರಣದಿಂದ ರಾಜ್ಯದಲ್ಲಿ ಅಂತಹ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ ಎಂದು ಅದು ವಿವರಿಸಿತು. ಹಾಗಾಗಿ, ಸಿಟಿ ಸೆಷನ್ಸ್ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಮುಂದೆ ಬಾಕಿ ಉಳಿದಿದ್ದ ಮಾನನಷ್ಟ ದೂರನ್ನು ಪೀಠ ರದ್ದುಗೊಳಿಸಿತು.

ಬಸ್‌ ಒಂದನ್ನು ವಶಪಡಿಸಿಕೊಂಡಿದ್ದಕ್ಕೆ ಸಂಬಂಧಿಸಿದಂತೆ ತಮ್ಮ ಟ್ವಿಟರ್‌ ಖಾತೆಯಲ್ಲಿ ಸುವೇಂದು ಅವರು ಕೆಲ ಹೇಳಿಕೆಗಳನ್ನು ಹಂಚಿಕೊಂಡಿದ್ದಕ್ಕಾಗಿ ಅವರ ವಿರುದ್ಧ ಪಬ್ಲಿಕ್ ಪ್ರಾಸಿಕ್ಯೂಟರ್ ಒಬ್ಬರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಸುವೇಂದು ಅವರು ತಪ್ಪು ಹೇಳಿಕೆಗಳನ್ನು ನೀಡಿದ್ದಾರೆ ಎನ್ನುವುದು ಪ್ರಾಸಿಕ್ಯೂಟರ್‌ ಅವರ ವಾದ.

Related Stories

No stories found.
Kannada Bar & Bench
kannada.barandbench.com