ಬಿಜೆಪಿ ಅಧಿಕಾರಕ್ಕೆ ಬಂದರೆ ಅದು ಸಂವಿಧಾನವನ್ನು ಹರಿದು ಹಾಕಿ ದೇಶವನ್ನು ಹಿಂದೂ ಪಾಕಿಸ್ತಾನ ಮಾಡುತ್ತದೆ ಎಂಬ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಕಲ್ಕತಾದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ವಿಧಿಸಿದ್ದ ಕ್ರಿಮಿನಲ್ ಪ್ರಕ್ರಿಯೆಯನ್ನು ಕಲ್ಕತ್ತಾ ಹೈಕೋರ್ಟ್ ಬುಧವಾರ ರದ್ದುಗೊಳಿಸಿದೆ [ಡಾ ಶಶಿ ತರೂರ್ ಮತ್ತು ಪ. ಬಂಗಾಳ ಸರ್ಕಾರ ನಡುವಣ ಪ್ರಕರಣ].
ಕ್ರಿಮಿನಲ್ ಪ್ರಕ್ರಿಯೆ ವಿಧಿಸುವಾಗ ಪ್ರಕ್ರಿಯೆ ಮುಂದೂಡಲು ಅವಕಾಶ ನೀಡುವ ಮತ್ತು ಪ್ರಕರಣವನ್ನು ಮುಂದುವರೆಸಲು ಸಾಕಷ್ಟು ಆಧಾರ ಇದೆಯೇ ಎಂಬುದನ್ನು ನಿರ್ಧರಿಸುವ ಸಿಆರ್‌ಪಿಸಿ ಸೆಕ್ಷನ್ 202 ಪಾಲಿಸಲು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ವಿಫಲವಾಗಿದೆ ಎಂಬ ಆಧಾರದಲ್ಲಿ ನ್ಯಾಯಮೂರ್ತಿ ಶಂಪಾ ದತ್ (ಪಾಲ್) ಅವರಿದ್ದ ಏಕಸದಸ್ಯ ಪೀಠ ಪ್ರಕ್ರಿಯೆಯನ್ನು ರದ್ದುಗೊಳಿಸಿತು.
ಬದಲಿಗೆ ದೂರುದಾರರನ್ನು ಮತ್ತು ನ್ಯಾಯಾಲಯದ ಮುಂದೆ ಹಾಜರಿರುವ ಸಾಕ್ಷಿಗಳನ್ನು ಮಾತ್ರ ಪರೀಕ್ಷಿಸಲು ಮ್ಯಾಜಿಸ್ಟ್ರೇಟ್‌ಗೆ ಅವಕಾಶ ನೀಡುವ ಸಿಆರ್‌ಪಿಸಿಯ ಸೆಕ್ಷನ್ 200ರ ಅನ್ವಯ ಕೆಳ ನ್ಯಾಯಾಲಯ ತೀರ್ಪು ನೀಡಿದೆ ಎಂದು ಅದು ಹೇಳಿತು.
ಈ ಹಿನ್ನೆಲೆಯಲ್ಲಿ ಏಪ್ರಿಲ್ 13, 2018ರಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಏಪ್ರಿಲ್ 13, 2018 ರಲ್ಲಿ ವಿಧಿಸಿದ್ದ ಪ್ರಕ್ರಿಯೆಯನ್ನು ಹೈಕೋರ್ಟ್ ರದ್ದುಗೊಳಿಸಿತು. ಇದೇ ವೇಳೆ ಸಿಆರ್‌ಪಿಸಿ ಸೆಕ್ಷನ್ 202 (2) ರ ನಿಬಂಧನೆಯನ್ನು ಸೂಕ್ತ ರೀತಿಯಲ್ಲಿ ಅನುಸರಿಸಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಪ್ರಕರಣವನ್ನು ಮತ್ತೊಮ್ಮೆ ಆಲಿಸಬೇಕು ಎಂದು ಅದು ಸೂಚಿಸಿತು.
ಹಾಗೆ ಮಾಡುವಾಗ ಮ್ಯಾಜಿಸ್ಟ್ರೇಟ್ ಅವರು (ಪೂರ್ವ ಮಂಜೂರಾತಿ ಇಲ್ಲದಿದ್ದಲ್ಲಿ ಸಾರ್ವಜನಿಕ ಸೇವಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅವಕಾಶ ನೀಡದ) ಸಿಆರ್‌ಪಿಸಿ ಸೆಕ್ಷನ್ 197ರ ನಿಬಂಧನೆಯನ್ನು ಪರಿಗಣಿಸಿ ಕಾನೂನಿನ ಪ್ರಕಾರ ಅಗತ್ಯ ಆದೇಶ ಹೊರಡಿಸಬೇಕು ಎಂದು ಅದು ಸಲಹೆ ನೀಡಿದೆ.
ದೂರುದಾರರ ಪ್ರಕಾರ ತರೂರ್ ಅವರು "ದೇಶದ ನಾಗರಿಕರು ಮುಂದಿನ ಸಾರ್ವತ್ರಿಕ ಚುನಾವಣೆ ನಡೆಯುವ 2019ರಲ್ಲಿ ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ (ಬಿಜೆಪಿ) ಮತ ಹಾಕಿದರೆ, ಆ ಪಕ್ಷ ಸಂವಿಧಾನವನ್ನು ಹರಿದು ಹೊಸದನ್ನು ಬರೆಯುತ್ತದೆ, ಅದು ಹಿಂದೂ ರಾಷ್ಟ್ರದ ತತ್ವಗಳನ್ನು ಪ್ರತಿಪಾದಿಸುತ್ತದೆ. ಅಲ್ಪಸಂಖ್ಯಾತರಿಗೆ ಒದಗಿಸಲಾದ ಸಮಾನತೆಯನ್ನು ತೊಡೆದುಹಾಕಿ ಹಿಂದೂ ಪಾಕಿಸ್ತಾನವನ್ನು ಸೃಷ್ಟಿಸಲಿದ್ದು ಇದು ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು, ಮೌಲಾನಾ ಆಜಾದ್, ಸರ್ದಾರ್ ಪಟೇಲ್ ಮತ್ತು ಸ್ವಾತಂತ್ರ್ಯ ಹೋರಾಟದ ಮಹಾನ್ ವೀರರು ಚಿಂತಿಸಿದ ರಾಷ್ಟ್ರವಾಗಿರದು” ಎಂದು ಭಾಷಣ ಮಾಡಿದ್ದರು. ಇದನ್ನು ಪ್ರಶ್ನಿಸಿ ಅರ್ಜಿದಾರರು ನ್ಯಾಯಾಲಯದ ಮೊರೆ ಹೋಗಿದ್ದರು.