ಸುನಂದಾ ಪುಷ್ಕರ್‌ ಕೊಲೆ ಪ್ರಕರಣ: ಕಾಂಗ್ರೆಸ್‌ ಸಂಸದ ಶಶಿ ತರೂರ್‌ ವಿರುದ್ಧದ ಆರೋಪ ಕೈಬಿಟ್ಟ ವಿಶೇಷ ನ್ಯಾಯಾಲಯ

ಸುನಂದಾ ಪುಷ್ಕರ್‌ ಅವರನ್ನು ಕೊಲೆ ಮಾಡಲಾಗಿದೆ ಎಂದು ಆರಂಭದಲ್ಲಿ ದೆಹಲಿ ಪೊಲೀಸರು ತನಿಖೆ ಕೈಗೊಂಡರೂ ತರೂರ್‌ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 306 (ಆತ್ಮಹತ್ಯೆಗೆ ಪ್ರಚೋದನೆ) ಮತ್ತು 498ಎ (ಪತಿಯಿಂದ ಕ್ರೌರ್ಯ) ಅಡಿ ದೂರು ದಾಖಲಿಸಿದ್ದರು.
Sunanda Pushkar and Shashi Tharoor
Sunanda Pushkar and Shashi Tharoor

ಪತ್ನಿ ಸುನಂದಾ ಪುಷ್ಕರ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ವಿರುದ್ಧದ ಆರೋಪಗಳನ್ನು ಶಾಸಕ ಮತ್ತು ಸಂಸದರ ವಿರುದ್ಧದ ಪ್ರಕರಣಗಳ ವಿಚಾರಣೆಗಾಗಿ ಆರಂಭಿಸಲಾಗಿರುವ ದೆಹಲಿಯ ವಿಶೇಷ ನ್ಯಾಯಾಲಯವು ಬುಧವಾರ ಕೈಬಿಟ್ಟಿದ್ದು, ತರೂರ್‌ ನಿಟ್ಟುಸಿರು ಬಿಟ್ಟಿದ್ದಾರೆ.

ಬಾಂಡ್‌ಗಳನ್ನು ಸಲ್ಲಿಸುವಂತೆ ಆದೇಶಿಸಿರುವ ವಿಶೇಷ ನ್ಯಾಯಾಧೀಶೆ ಗೀತಾಂಜಲಿ ಗೋಯೆಲ್‌ ಅವರು ತೀರ್ಪು ಪ್ರಕಟಿಸಿದ್ದಾರೆ. ನ್ಯಾಯಾಲಯ ತೀರ್ಪು ಪ್ರಕಟಿಸುತ್ತಿದ್ದಂತೆ ತರೂರ್‌ ಅವರು “ಏಳೂವರೆ ವರ್ಷಗಳು ಚಿತ್ರ ಹಿಂಸೆಯಿಂದ ಕೂಡಿದ್ದವು” ಎಂದು ಪ್ರತಿಕ್ರಿಯಿಸಿದ್ದಾರೆ.

2014ರ ಜನವರಿಯಲ್ಲಿ ನವದೆಹಲಿಯ ಪಂಚತಾರಾ ಹೋಟೆಲ್‌ನ ಕೋಣೆಯೊಂದರಲ್ಲಿ ಸುನಂದಾ ಶವವಾಗಿ ಪತ್ತೆಯಾಗಿದ್ದರು. ಇದನ್ನು ಆಧರಿಸಿ ದೆಹಲಿ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡ ಹಿನ್ನೆಲೆಯಲ್ಲಿ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ದೆಹಲಿ ಪೊಲೀಸರು ಸೆಕ್ಷನ್ 498 ಎ (ಕ್ರೌರ್ಯ) ಮತ್ತು 306 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಅಥವಾ ಪರ್ಯಾಯವಾಗಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಆರೋಪಗಳನ್ನು ನಿಗದಿಪಡಿಸುವಂತೆ ನ್ಯಾಯಾಲಯವನ್ನು ಕೋರಿದ್ದರು. ವಿಷದಿಂದ ಹಾಗೂ ಅಲ್‌ಪ್ರಾಕ್ಸ್ ಸೇವನೆಯಿಂದಾಗಿ ಸುನಂದಾ ಪುಷ್ಕರ್‌ ಸಾವನ್ನಪ್ಪಿದ್ದಾರೆ ಎಂದು ವಿಶೇಷ ಸರ್ಕಾರಿ ಅಭಿಯೋಜಕ ಅತುಲ್ ಶ್ರೀವಾಸ್ತವ ವಾದಿಸಿದ್ದರು.

“ಶಶಿ ತರೂರ್‌ ಅಕ್ರಮ ಸಂಬಂಧ ಹೊಂದಿದ್ದರು ಎಂದು ಹೇಳಲು ಏನು ಸಾಕ್ಷ್ಯವಿದೆ? ಇದು ಪತ್ರವೊಂದಕ್ಕೆ ಉಲ್ಲೇಖಿಸಿ ಹೇಳುತ್ತಿರುವುದಾಗಿದೆ… ಮತ್ತೊಬ್ಬರ ಕಂಪ್ಯೂಟರ್‌ನಿಂದ ಕರಡು ಪತ್ರ ಸಂಗ್ರಹಿಸಲಾಗಿದೆ. ಕರಡು ಪತ್ರವನ್ನು ಕಳುಹಿಸಲಾಗಿದೆ ಅಥವಾ ಸ್ವೀಕರಿಸಲಾಗಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯವಿಲ್ಲ.. ತರೂರ್‌ ಅವರ ಪತ್ನಿಗೆ ಕೆಲವು ಅನುಮಾನಗಳಿದ್ದವು ಎಂದು ಅವರು ಹೇಳಬಹುದು. ಅದನ್ನು ಮೀರಿ ಮುಂದಡಿ ಇಟ್ಟಾಗ ಅವರು ಸಾಕ್ಷಿ ಒದಗಿಸಬೇಕು” ಎಂದು ಪಹ್ವಾ ವಾದಿಸಿದ್ದರು.

ಅಕ್ರಮ ಸಂಬಂಧ ಹೊಂದಿದ್ದ ಮಾತ್ರಕ್ಕೆ ಆತ್ಮಹತ್ಯೆಗೆ ಪ್ರಚೋದನೆ ಎಂದು ಹೇಳಲಾಗದು ಎಂದು ಪ್ರಕರಣದ ಕಾನೂನುಗಳನ್ನು ಆಧರಿಸಿ ವಾದಿಸಿದ ಪಹ್ವಾ, ಐಪಿಸಿಯ ಸೆಕ್ಷನ್‌ 498ಎ ಅನ್ನು ವ್ಯಾಪಕವಾಗಿ ದುರ್ಬಳಕೆ ಮಾಡಲಾಗುತ್ತಿದೆ ಎಂಬುದರ ಬಗ್ಗೆ ಗಮನಹರಿಸುವಂತೆ ನ್ಯಾಯಾಲಯವನ್ನು ಕೋರಿದ್ದರು.

“ಮಾಧ್ಯಮಗಳಲ್ಲಿ ನಡೆವ ಕೆಟ್ಟ ಪ್ರಚಾರವು ಸಂಕಷ್ಟವನ್ನು ಹೆಚ್ಚಿಸುತ್ತದೆ. ನನ್ನ (ತರೂರ್‌) ಪ್ರಕರಣದಲ್ಲಿ ಅದು ಸತ್ಯವಾಗಿದೆ. ಸೆಕ್ಷನ್‌ 498ಎ ಸಂಚಕಾರ ತರುವ ಅಸ್ತ್ರವಾಗಬಾರದು... ಮುಗ್ಧ ಜನರು ಆಧಾರರಹಿತ ಆರೋಪಗಳಿಂದ ನೋವು ಅನುಭವಿಸಬಾರದು” ಎಂದಿದ್ದರು.

ಪುಷ್ಕರ್‌ ಅವರಿಗೆ ತಮ್ಮ ಕಕ್ಷಿದಾರ (ತರೂರ್‌) ಯಾವುದೇ ತೆರನಾದ ಮಾನಸಿಕ ಅಥವಾ ದೈಹಿಕ ಹಿಂಸೆ ನೀಡಿದ್ದಾರೆ ಎಂದು ಪ್ರಾಸಿಕ್ಯೂಷನ್‌ ಆರೋಪಿಸಿಲ್ಲ ಎಂದಿದ್ದ ಪಹ್ವಾ ಅವರು ತಮ್ಮ ವಾದವನ್ನು ಸಮರ್ಥಿಸಲು ಸುಪ್ರೀಂ ಕೋರ್ಟ್‌ ನೀಡಿರುವ ಹಲವು ತೀರ್ಪುಗಳನ್ನು ಉಲ್ಲೇಖಿಸಿದ್ದರು. ವೈದ್ಯಕೀಯ ಕ್ಷೇತ್ರದ ತಜ್ಞರು ಪುಷ್ಕರ್‌ ಆತ್ಮಹತ್ಯೆ ಮಾಡಿಕೊಂಡಿಲ್ಲ. ಆಕಸ್ಮಿಕವಾಗಿ ಸಾವು ಸಂಭವಿಸಿದೆ ಎಂದು ವರದಿ ನೀಡಿದ್ದಾರೆ. ನಾಲ್ಕು ವರ್ಷಗಳಿಂದ ಸಾಕಷ್ಟು ಪ್ರಯಾಸಪಟ್ಟು ತನಿಖೆ ನಡೆಸಿರುವ ಪೊಲೀಸರು ಪುಷ್ಕರ್‌ ಸಾವಿಗೆ ಕಾರಣವನ್ನು ಪತ್ತೆ ಹಚ್ಚಲು ವಿಫಲರಾಗಿದ್ದಾರೆ ಎಂದಿದ್ದರು.

ಮತ್ತೊಂದು ಕಡೆ ವಿಶೇಷ ಸರ್ಕಾರಿ ಅಭಿಯೋಜಕ ಅತುಲ್‌ ಶ್ರೀವಾಸ್ತವ ಅವರು “ಸಾವಿಗೂ ಮುನ್ನ ಪುಷ್ಕರ್‌ ದೇಹದಲ್ಲಿ ಗಾಯವಾಗಿದ್ದ ಗುರುತುಗಳು ಪತ್ತೆಯಾಗಿವೆ. ಇದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಉಲ್ಲೇಖವಾಗಿದೆ. ಪುಷ್ಕರ್‌ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾಗ ಅವರಿಗೆ ತೀವ್ರ ಜ್ವರ ಇತ್ತು. ತೂರು ನಳಿಗೆ (ಕ್ಯಾನುಲಾ) ಅಳವಡಿಸಲಾಗಿತ್ತು. ಸುನಂದಾ ವಿಷ ಸೇವಿಸಿ ಸಾವನ್ನಪ್ಪಿದ್ದು, ಆಕೆಯ ಕೊಠಡಿಯಲ್ಲಿ 27 ಅಲ್ಪ್ರಾಕ್ಸ್‌ ಮಾತ್ರೆಗಳು ದೊರೆತಿವೆ. ಆದರೆ, ಅವರು ಎಷ್ಟು ಮಾತ್ರ ಸೇವಿಸಿದ್ದರು ಎಂಬುದು ಸ್ಪಷ್ಟವಾಗಿಲ್ಲ” ಎಂದು ವಾದಿಸಿದ್ದರು.

Also Read
[ಸುನಂದಾ ಪುಷ್ಕರ್‌ ಪ್ರಕರಣ] ಶಶಿ ತರೂರ್‌ ಅಕ್ರಮ ಸಂಬಂಧ ಹೊಂದಿದ್ದರು ಎಂಬುದು ಕಲ್ಪಿತ ಮನೋಭ್ರಾಂತಿ: ವಿಕಾಸ್‌ ಪಹ್ವಾ

“ಪುಷ್ಕರ್‌ ಆರೋಗ್ಯವಂತ ಮಹಿಳೆಯಾಗಿದ್ದು, ಮಾತ್ರೆಗಳ ಸೇವನೆಯು ವಿಷವಾಗಿ ಪರಿಣಮಿಸಿದ್ದರಿಂದ ಆಕೆ ಸಾವನ್ನಪ್ಪಿದ್ದರು. ಪತಿ ಶಶಿ ತರೂರ್‌ ವಿರುದ್ಧ ಹಲವು ಅಕ್ರಮ ಸಂಬಂಧದ ವಿಚಾರಗಳು ಕೇಳಿಬಂದಿದ್ದವು. ತರೂರ್‌ ಅವರು ಪುಷ್ಕರ್‌ ಮೇಲೆ ಮಾನಸಿಕ ಕ್ರೌರ್ಯ ಎಸಗಿದ್ದರು ಎನ್ನಲಾಗಿದೆ” ಎಂದು ಶ್ರೀವಾಸ್ತವ ದೂರಿದ್ದರು.

ಸುನಂದಾ ಅವರಿಗೆ ಡ್ರಗ್ಸ್‌ ನೀಡಿರುವ ಸಾಧ್ಯತೆಯನ್ನು ವೈದ್ಯಕೀಯ ಕ್ಷೇತ್ರದ ತಜ್ಞರು ಅಲ್ಲಗಳೆದಿಲ್ಲ. ಹೀಗಾಗಿ ಶಶಿ ತರೂರ್‌ ಅವರ ವಿರುದ್ಧ ಐಪಿಸಿ ಸೆಕ್ಷನ್‌ 302ರ ಅಡಿ ಪರ್ಯಾಯ ಆರೋಪ ನಿಗದಿ ಮಾಡಲಾಗಿದೆ ಎಂದು ವಾದಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ತರೂರ್‌ ವಿರುದ್ಧದ ಆರೋಪಗಳನ್ನು ಮುಂದುವರಿಸಲು ಸಾಕಷ್ಟು ಆಧಾರಗಳಿವೆ ಎಂದು 2018ರ ಜೂನ್‌ 5ರಂದು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಹೇಳಿತ್ತು.

Related Stories

No stories found.
Kannada Bar & Bench
kannada.barandbench.com