ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಸನ್ಯಾಸಿಯೊಬ್ಬರ ವಿರುದ್ಧ ನೀಡಿದ್ದ ಆಕ್ಷೇಪಾರ್ಹ ಹೇಳಿಕೆಗಳಿಗೆ ಸಂಬಂಧಿಸಿದಂತೆ ಪ. ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಶ್ವ ಹಿಂದೂ ಪರಿಷತ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಗೆ ಕಲ್ಕತ್ತಾ ಹೈಕೋರ್ಟ್ ಗುರುವಾರ ನಿರಾಕರಿಸಿದೆ [ವಿಶ್ವ ಹಿಂದೂ ಪರಿಷತ್ ಮತ್ತು ಪ. ಬಂಗಾಳ ಸರ್ಕಾರ ನಡುವಣ ಪ್ರಕರಣ].
ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಮುಖ್ಯ ನ್ಯಾಯಮೂರ್ತಿ ಟಿ ಎಸ್ ಶಿವಜ್ಞಾನಂ ಮತ್ತು ನ್ಯಾಯಮೂರ್ತಿ ಹಿರಣ್ಮಯ್ ಭಟ್ಟಾಚಾರ್ಯ ಅವರಿದ್ದ ಪೀಠ ವಿಎಚ್‌ಪಿ ಪರ ವಕೀಲರನ್ನು ಉದ್ದೇಶಿಸಿ "ಇದು ಹಳೆಯ ಘಟನೆ. ನಮಗೆ ಮಾಡಲು ಬೇರೆ ಉತ್ತಮ ಕೆಲಸಗಳಿವೆ. ನಿಮಗೂ ಕೂಡ ನಿಮ್ಮ (ಉಳಿದ) ಕಕ್ಷಿದಾರರಿಗೆ ನ್ಯಾಯ ಕೊಡಿಸುವುದಕ್ಕಾಗಿ ಮಾಡಬೇಕಾದ ಉತ್ತಮ ಕೆಲಸಗಳಿವೆ ಎಂದು ಭಾವಿಸುತ್ತೇವೆ” ಎಂಬುದಾಗಿ ತಿಳಿಸಿತು.
ತಾನು ಅಡ್ವೊಕೇಟ್ ಜನರಲ್ ಆಗಿ ನ್ಯಾಯಾಲಯಕ್ಕೆ ಹಾಜರಾಗದೆ ಪಿಐಎಲ್‌ಗೆ ಸಂಬಂಧಿಸಿದ ಖಾಸಗಿ ಪ್ರತಿವಾದಿಯನ್ನು ಪ್ರತಿನಿಧಿಸುತ್ತಿರುವುದಾಗಿ ಪಶ್ಚಿಮ ಬಂಗಾಳದ ಎಜಿಯೂ ಆಗಿರುವ ಹಿರಿಯ ವಕೀಲ ಕಿಶೋರ್ ದತ್ತಾ ಅವರು ಪೀಠಕ್ಕೆ ತಿಳಿಸಿದರು. ದತ್ತ ಅವರ ವಾದ ಆಲಿಸಿದ ಮುಖ್ಯ ನ್ಯಾಯಮೂರ್ತಿ ಶಿವಜ್ಞಾನಂ ಅವರು, ಇಂತಹ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ಒಳಪಡಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದರು.
“ಈ ಪಿಐಎಲ್ ಸಮಾಜದ ಪಾವಿತ್ರ್ಯ ಉಳಿಸಿಕೊಳ್ಳುವುದಕ್ಕಾಗಿ ದಾಖಲಿಸಿದ್ದು, ನಿರ್ದಿಷ್ಟ ಧಾರ್ಮಿಕ ಸಂಸ್ಥೆಗಳೊಂದಿಗೆ ಗುರತಿಸಿಕೊಂಡಿರುವ ಕಾರಣಕ್ಕಾಗಿ ಯಾವುದೇ ಸಮುದಾಯವನ್ನು ಹೀಗಳೆಯದಂತೆ ನೋಡಿಕೊಳ್ಳುವ ಸಲುವಾಗಿ ಸಲ್ಲಿಕೆಯಾಗಿದೆ ಎಂದು ಹೇಳುತ್ತದೆ. ಆದರೆ ಇಂತಹ ಪ್ರಕರಣಗಳನ್ನು ಪಿಐಎಲ್ ವ್ಯಾಪ್ತಿಯಲ್ಲಿ ವಿಚಾರಣೆ ನಡೆಸಲಾಗದು. ಅರ್ಜಿದಾರರು ಸೂಕ್ತ ರೀತಿಯಲ್ಲಿ ಧ್ವನಿ ಎತ್ತಬಹುದು" ಎಂದು ಪೀಠ ನುಡಿಯಿತು.