ಕೋಲ್ಕತ್ತಾದ ರಾಜಾಬಜಾರ್‌ನಲ್ಲಿ ಹಿಂದೂಗಳು ಮತ್ತು ಸಿಖ್ಖರ ವಿರುದ್ಧ ನಡೆದಿದೆ ಎನ್ನಲಾದ ಕೋಮು ಹಿಂಸಾಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿ ವಿರೋಧ ಪಕ್ಷದ ನಾಯಕ ಮತ್ತು ಬಿಜೆಪಿಯ ಸುವೇಂದು ಅಧಿಕಾರಿ ಅವರು ಸಲ್ಲಿಸಿದ ಮನವಿ ಆಲಿಸಲು ಕಲ್ಕತ್ತಾ ಹೈಕೋರ್ಟ್ ಬುಧವಾರ ಸಮ್ಮತಿಸಿದೆ.
ಪ್ರಾಥಮಿಕ ವಾದ ಆಲಿಸಿದ ಮುಖ್ಯ ನ್ಯಾಯಮೂರ್ತಿ ಟಿ ಎಸ್ ಶಿವಜ್ಞಾನಂ ಮತ್ತು ನ್ಯಾಯಮೂರ್ತಿ ಎಚ್ ಭಟ್ಟಾಚಾರ್ಯ ಅವರಿದ್ದ ಪೀಠ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿ ನವೆಂಬರ್ 21ಕ್ಕೆ ವಿಚಾರಣೆ ಮುಂದೂಡಿತು.
ಮುಂಬರುವ ಛತ್ ಪೂಜೆ ಆಚರಣೆ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಶಾಂತಿ ಕಾಪಾಡಿಕೊಳ್ಳಲು ಎಲ್ಲಾ ಕ್ರಮ ತೆಗೆದುಕೊಳ್ಳುವಂತೆ ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ತಿಳಿಸಿತು.
ನಿರ್ದಿಷ್ಟ ಸಮುದಾಯದ ಸಾವಿರಾರು ಜನರಿದ್ದ ಗುಂಪು ಹಿಂದೂ ಮತ್ತು ಸಿಖ್ಖರ ಮೇಲೆ ದಾಳಿ ನಡೆಸಿದೆ. ಹಿಂದೂ ಮತ್ತು ಸಿಖ್ ಸಮುದಾಯಕ್ಕೆ ಸೇರಿದವರ ಮನೆಗಳು, ದೇಗುಲಗಳು ಮತ್ತು ಗುರುದ್ವಾರಗಳ ಮೇಲೆ ದಾಳಿ ನಡೆದಿದೆ. ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆಗಳನ್ನು ಸಂಪೂರ್ಣವಾಗಿ ಧ್ವಂಸಗೊಳಿಸಲಾಗಿದೆ. ಆದರೆ ಆದರೆ ರಾಜ್ಯ ಸರ್ಕಾರ ಘಟನೆಯ ಮುಚ್ಚಿಹಾಕಲು ಯತ್ನಿಸುತ್ತಿದೆ ಎಂದು ಸುವೇಂದು ಪರ ವಕೀಲರು ವಾದಿಸಿದರು.
ಆದರೆ ಕೋಮು ಘರ್ಷಣೆಯ ಆರೋಪವನ್ನು ಅಡ್ವೊಕೇಟ್ ಜನರಲ್ ಕಿಶೋರ್ ದತ್ತಾ ಅವರು ಬಲವಾಗಿ ತಳ್ಳಿಹಾಕಿದರು. ಹದ್ದು ಮೀರಿದ ಇಬ್ಬರು ವ್ಯಕ್ತಿಗಳ ನಡುವಿನ ವಿವಾದಕ್ಕೆ ಕೋಮು ಬಣ್ಣ ನೀಡಲಾಗಿದೆ. ಇಲ್ಲಿ ಎರಡು ಸಮುದಾಯಗಳನ್ನು ಗುರಿಯಾಗಿಸಿಕೊಂಡಿರಲಿಲ್ಲ, ಬದಲಿಗೆ ಒಂದು ಸಮುದಾಯ ಹಾಗೂ ಮತ್ತೊಂದು ಸಮುದಾಯದ ನಡುವೆ ಘರ್ಷಣೆ ನಡೆದಿತ್ತು. ಘಟನೆಗೆ ಸಂಬಂಧಿಸಿದಂತೆ ಪಾತ್ರಕ್ಕಾಗಿ 23 ಜನರನ್ನು ಬಂಧಿಸಲಾಗಿದೆ. ಇಲ್ಲಿ ಕೋಮು ಘರ್ಷಣೆ ನಡೆದಿಲ್ಲ ಎಂದು ಹೇಳಿದರು.
ಆಕ್ಷೇಪಿತ ಗುಂಪು ಹಿಂಸಾಚಾರದ ಬಗ್ಗೆ ಹೆಚ್ಚಿನ ವರದಿಗಳು ಬಂದಿಲ್ಲ ಎಂಬ ವಿಚಾರವನ್ನು ನ್ಯಾಯಾಲಯ ಗಮನಿಸಿತು. ಆರಾಧನೆಯ ಸ್ಥಳದ ಮೇಲೆ ದಾಳಿ ನಡೆದರೆ, ಅದು ನಿರ್ದಿಷ್ಟ ಸಮುದಾಯ ಅಥವಾ ಪಂಗಡದ ವಿರುದ್ಧದ ದಾಳಿಯಲ್ಲ; ಅದು ಸಾಮಾನ್ಯವಾಗಿ ಸಾರ್ವಜನಿಕರ ಮೇಲಿನ ದಾಳಿಯಾಗಿರುತ್ತದೆ. ಆದ್ದರಿಂದ ಅಂತಹ ಘಟನೆಯನ್ನು ವರದಿ ಮಾಡದೆ ಇರಲು ಸಾಧ್ಯವಿಲ್ಲ. ಅಕ್ಟೋಬರ್ 24 ರವರೆಗೆ ಪತ್ರಿಕೆಗಳಲ್ಲಿ ಈ ಕುರಿತ ಸುದ್ದಿ ಪ್ರಕಟವಾಗಿರುವುದನ್ನು ತಾವಂತು ಎಲ್ಲಿಯೂ ಗಮನಿಸಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಟಿ ಎಸ್ ಶಿವಜ್ಞಾನಂ ಹೇಳಿದರು.
ಕನಿಷ್ಠ ಇಬ್ಬರು ಪತ್ರಕರ್ತರು ಕೋಮು ಘರ್ಷಣೆಗಳ ಬಗ್ಗೆ ವರದಿ ಮಾಡಿದ್ದಾರೆ, ಆದರೆ ನಂತರ ಅವರನ್ನು ರಾಜ್ಯ ಪೊಲೀಸರು ಬಂಧಿಸಿದ್ದಾರೆ. ಇಂತಹ ಬೆದರಿಸುವ ತಂತ್ರಗಳು ಹೊಸದಲ್ಲ ಎಂದು ಅರ್ಜಿದಾರರ ಪರ ವಕೀಲರು ಇದಕ್ಕೆ ಉತ್ತರಿಸಿದರು. ಅರ್ಜಿದಾರರು ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ ಎಂದು ಅಡ್ವೊಕೇಟ್ ಜನರಲ್ ಖಂಡಿಸಿದರು.
ವಾದಗಳನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಶಿವಜ್ಞಾನಂ ಅವರು, ವಿರೋಧ ಪಕ್ಷದ ನಾಯಕರೊಬ್ಬರು (ಸುವೇಂದು ಅಧಿಕಾರಿ) ಇಷ್ಟೊಂದು ಪ್ರಕರಣಗಳನ್ನು ದಾಖಲಿಸಿರುವುದನ್ನು ಕಂಡು ಅಚ್ಚರಿಯಾಯಿತು. ಆದರೂ ವಿಸ್ತೃತ ಕಾರಣಗಳಿಗಾಗಿ ಅವರ ಇಂತಹ ಪ್ರಕರಣಗಳನ್ನು ಕೈಗೆತ್ತಿಕೊಂಡಿರಬಹುದು ಎಂದರು.