ನಾರದ ಹಗರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕರಾದ ಮದನ್ ಮಿತ್ರ, ಫಿರ್ಹಾದ್ ಹಕೀಮ್ ಅಲಿಯಾಸ್ ಬಾಬ್ಬಿ ಹಕೀಮ್, ಸುಬ್ರತಾ ಮುಖರ್ಜಿ ಮತ್ತು ಸೋವನ್ ಚಟರ್ಜಿ ಅವರಿಗೆ ಸೋಮವಾರ ಸಂಜೆ ಸಿಬಿಐ ನೀಡಿದ್ದ ಮಧ್ಯಂತರ ಜಾಮೀನಿಗೆ ಕಲ್ಕತ್ತಾ ಹೈಕೋರ್ಟ್ ಸೋಮವಾರ ತಡರಾತ್ರಿ ತಡೆ ನೀಡಿದೆ.
ಪ್ರಕರಣದ ವಿಚಾರಣೆಯನ್ನು ಪಶ್ಚಿಮ ಬಂಗಾಳದಿಂದ ವರ್ಗಾವಣೆ ಮಾಡುವಂತೆ ಕೋರಿ ಸಿಬಿಐ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಮತ್ತು ನ್ಯಾಯಮೂರ್ತಿ ಅರಿಜಿತ್ ಬ್ಯಾನರ್ಜಿ ಅವರಿದ್ದ ಪೀಠ ಈ ಆದೇಶ ಜಾರಿ ಮಾಡಿತು. ಪರಿಣಾಮ ಬಂಧಿತ ನಾಯಕರನ್ನು ಪ್ರೆಸಿಡೆನ್ಸಿ ಜೈಲಿನಲ್ಲಿ ಇರಿಸಲಾಗಿದೆ.
ಬಂಧಿತರಲ್ಲಿ ಫಿರ್ಹಾದ್ ಹಕೀಮ್ ಮತ್ತು ಸುಬ್ರತಾ ಮುಖರ್ಜಿ ಅವರು ರಾಜ್ಯ ಸಚಿವ ಸಂಪುಟದಲ್ಲಿ ಹಾಲಿ ಸಚಿವರಾಗಿದ್ದು ಮದನ್ ಮಿತ್ರಾ ಶಾಸಕರಾಗಿದ್ದಾರೆ. ಸೋವಾನ್ ಚಟರ್ಜಿ ಕೋಲ್ಕತ್ತಾದ ಮಾಜಿ ಮೇಯರ್ ಆಗಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಸರ್ಕಾರ ಮತ್ತು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರದ ನಡುವೆ ಮತ್ತೊಂದು ಸಂಘರ್ಷಕ್ಕೆ ಕಾರಣವಾಗುವಂತೆ ಸೋಮವಾರ ಬೆಳಿಗ್ಗೆ ಆ ರಾಜಕೀಯ ನಾಯಕರನ್ನು ತಮ್ಮ ನಿವಾಸಗಳಿಂದ ಸಿಬಿಐ ಬಂಧಿಸಿ ಕರೆದೊಯ್ಯಿತು. ಬಂಧನದ ಸುದ್ದಿ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಿಬಿಐ ಕಚೇರಿ ಎದುರು ಧರಣಿ ಕುಳಿತರು.
ಇತ್ತ ಹೈಕೋರ್ಟ್‌ನಲ್ಲಿ ಘಟನೆಯಿಂದಾಗಿ ರಾಜ್ಯ ರಾಜ್ಯಧಾನಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿ ತುರ್ತು ವಿಚಾರಣೆ ನಡೆಸಬೇಕೆಂದು ಹೆಚ್ಚುವರಿ ಸಾಲಿಸಿಟರ್ ಜನರಲ್, ವೈ.ಜೆ.ದಸ್ತೂರ್ ಅವರು ಕೋರಿದರು. ಇದನ್ನು ಮನ್ನಿಸಿದ ನ್ಯಾಯಾಲಯ ತುರ್ತು ವಿಚಾರಣೆ ಕೈಗೆತ್ತಿಕೊಂಡಿತು. ವಿಚಾರಣೆ ವೇಳೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ಕಾನೂನು ಸಚಿವರು ತಮ್ಮ ಬೆಂಬಲಿಗರೊಂದಿಗೆ ನ್ಯಾಯಾಲಯಕ್ಕೆ ನುಗ್ಗಿದ ಘಟನೆಯನ್ನು ವಿವರಿಸಿ, ವಿಚಾರಣೆಯನ್ನು ವರ್ಗಾಯಿಸಲು ಸಿಆರ್‌ಪಿಸಿ ಸೆಕ್ಷನ್ 407 ರ ಅಡಿಯಲ್ಲಿ ಅಧಿಕಾರ ಚಲಾಯಿಸುವಂತೆ ಕೋರಿದರು.
ಆದರೆ ರಾಜ್ಯ ಸರ್ಕಾರದ ಪರವಾಗಿ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಅವರು ಸಿಆರ್‌ಪಿಸಿ ಸೆಕ್ಷನ್ 407 ರ ಅಡಿಯಲ್ಲಿ ಅರ್ಜಿ ಸಲ್ಲಿಸಿದರೆ ಸಂತ್ರಸ್ತರು, ಆರೋಪಿಗಳು, ಸಾಕ್ಷಿಗಳು ಸೇರಿದಂತೆ ಎಲ್ಲಾ ಪಕ್ಷಕಾರರು ವಿಚಾರಣೆಗೆ ಒಳಪಡಬೇಕಾಗುತ್ತದೆ ಎಂದರು.
ಆದರೆ, ಇದನ್ನು ನ್ಯಾಯಾಲಯ ಒಪ್ಪಲಿಲ್ಲ. ಆರೋಪಿಗಳನ್ನು ಹಾಜರುಪಡಿಸಿದ್ದ ನ್ಯಾಯಾಲಯಕ್ಕೆ ಬೆಂಬಲಿಗರೊಂದಿಗೆ ಕಾನೂನು ಸಚಿವರು ನುಗ್ಗಿದ್ದಾರೆ ಎಂದು ಅದು ಅಸಮಾಧಾನ ವ್ಯಕ್ತಪಡಿಸಿತು. ವಿಚಾರಣೆ ನಡೆಯುವವರೆಗೂ ಕಾನೂನು ಸಚಿವರು ದಿನವಿಡೀ ನ್ಯಾಯಾಲಯ ಸಂಕೀರ್ಣದಲ್ಲಿಯೇ ಉಳಿದಿದ್ದರು. ಇಂತಹ ಘಟನೆಗಳಿಗೆ ಅವಕಾಶ ನೀಡಿದರೆ ನ್ಯಾಯ ವ್ಯವಸ್ಥೆ ಬಗೆಗಿನ ಜನರ ವಿಶ್ವಾಸ ನಾಶವಾಗಲಿದೆ ಎಂದು ಟೀಕಿಸಿತು.
ಈ ಹಿನ್ನೆಲೆಯಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ನೀಡಿದ್ದ ಆದೇಶಕ್ಕೆ ತಡೆ ನೀಡಿದ ಹೈಕೋರ್ಟ್ ರಾಜಕೀಯ ನಾಯಕರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿತು.
ಜನ ಕಾನೂನು ವ್ಯವಸ್ಥೆ ಅಸ್ತಿತ್ವದಲ್ಲಿ ಇದೆ ಎಂದು ಭಾವಿಸುವುದಿಲ್ಲ ಬದಲಿಗೆ ಅದರಲ್ಲಿಯೂ ವಿಶೇಷವಾಗಿ ಸಿಬಿಐ ಕಚೇರಿಗೆ ಮುಖ್ಯಮಂತ್ರಿ ಮತ್ತು ನ್ಯಾಯಾಲಯಕ್ಕೆ ಕಾನೂನು ಸಚಿವರು ಬಂದಾಗ ಗುಂಪಿನ ಮೇಲುಗೈಯಾಗಿದೆ ಎಂದು ತಿಳಿಯುತ್ತಾರೆ ಎಂದು ನ್ಯಾಯಾಲಯ ಹೇಳಿತು.
ಇದಕ್ಕೂ ಮುನ್ನ ಸೋಮವಾರ ಸಂಜೆ ವೇಳೆಗೆ ನಡೆದ ವಿಚಾರಣೆಯಲ್ಲಿ ಸಿಬಿಐ ವಿಶೇಷ ನ್ಯಾಯಾಲಯ “ನಾಲ್ವರು ಆರೋಪಿಗಳನ್ನು ಸಿಬಿಐ ವಿಚಾರಣೆಗೆ ಕೋರಿಲ್ಲ. ಬದಲಿಗೆ ಅವರನ್ನು ನ್ಯಾಯಾಂಗ ಬಂಧನದಲ್ಲಿರಿಸುವಂತೆ ಕೋರಿತ್ತು. ಇದು ಬಂಧಿತ ವ್ಯಕ್ತಿಗಳನ್ನು ವಶಕ್ಕೆ ಪಡೆಯಲು ಆಧಾರವಲ್ಲ ಎಂದು ತಿಳಿಸಿ ಆರೋಪಿ ನಾಯಕರುಗಳಿಗೆ ಮಧ್ಯಂತರ ಜಾಮೀನನ್ನು ನ್ಯಾಯಾಲಯ ನೀಡಿತ್ತು. ವಿಶೇಷವೆಂದರೆ ಅದು ಆರೋಪಿಗಳಿಗೆ ಜಾಮೀನು ನೀಡುವಾಗ ʼಕೋವಿಡ್ ಹಿನ್ನೆಲೆಯಲ್ಲಿ ಜೈಲಿನಲ್ಲಿರುವವರನ್ನು ಬಿಡುಗಡೆಗೊಳಿಸಬೇಕುʼ ಎಂದು ಸುಪ್ರೀಂಕೋರ್ಟ್ ನೀಡಿದ್ದ ಆದೇಶವನ್ನು ಅವಲಂಬಿಸಿತ್ತು.