ಕಲ್ಕತ್ತಾ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಅವರನ್ನು ತೆಗೆದುಹಾಕುವಂತೆ ಕೋರಿ ಪಶ್ಚಿಮ ಬಂಗಾಳ ವಕೀಲರ ಪರಿಷತ್ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದನ್ನು ವಿರೋಧಿಸಿ ಸಲ್ಲಿಸಲಾದ ಅರ್ಜಿಯಲ್ಲಿ ಮಧ್ಯಪ್ರವೇಶಿಸಲು ಕಲ್ಕತ್ತಾ ಹೈಕೋರ್ಟ್ ಇತ್ತೀಚೆಗೆ ನಿರಾಕರಿಸಿದೆ.
ವಕೀಲ ವರ್ಗ ಮತ್ತು ನ್ಯಾಯಾಧೀಶ ವರ್ಗ ನ್ಯಾಯಾಂಗ ವ್ಯವಸ್ಥೆಯ ಎರಡು ಆಧಾರ ಸ್ತಂಭಗಳು ಎಂದು ತಿಳಿಸಿದ ಪೀಠ ತೀರ್ಪುಗಳ ಬಗ್ಗೆ ನ್ಯಾಯಯುತ ಟೀಕೆ ನಡೆದರೆ ಅದು ಸದಾ ಸ್ವಾಗತಾರ್ಹ ಎಂದಿತು.
ಇಷ್ಟಾದರೂ ಯಾವುದೇ ದುರುದ್ದೇಶದಿಂದ ಕೂಡಿದ ಮತ್ತು ನೈಜ ಕಾರಣದ ಮೇಲೆ ಯಾವುದೇ ಆಧಾರವಿಲ್ಲದೆ ತಪ್ಪೆಸಗಿದ ವ್ಯಕ್ತಿಗಳ ಕುರಿತು ಕಠೋರವಾಗಿ ವ್ಯವಹರಿಸಬೇಕು ಎಂದು ಪೀಠ ಹೇಳಿತು.
ನ್ಯಾಯಮೂರ್ತಿಗಳಾದ ಹರೀಶ್ ಟಂಡನ್ ಮತ್ತು ಸುಭಾಸಿಸ್ ದಾಸ್ ಗುಪ್ತಾ ಅವರಿದ್ದ ಪೀಠದಲ್ಲಿ ನ್ಯಾಯವಾದಿ ಅಕ್ಷ್ಯಾ ಸಾರಂಗಿ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಯಿತು. ಸಾರಂಗಿ ಅವರು ಪಶ್ಚಿಮ ಬಂಗಾಳ ವಕೀಲರ ಪರಿಷತ್ ಅಧ್ಯಕ್ಷ ಅಶೋಕ್ ಕುಮಾರ್ ದೇಬ್ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಕೋರಿದರು.
ಆದರೆ ವಿವಾದದ ಆಳಕ್ಕೆ ಇಳಿಯಲು ನ್ಯಾಯಾಲಯ ನಿರಾಕರಿಸಿತು. ಪರಿಷತ್ತಿನ ನಾಲ್ವರು ಸದಸ್ಯರು ವಕೀಲರಾಗಿ ಪ್ರಾಕ್ಟೀಸ್ ಮಾಡುತ್ತಿರುವುದರಿಂದ ಶಾಸನಬದ್ಧ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಅವರು ಭಾವಿಸಿದರೆ ಅವರಿಗೆ ಈಗಾಗಲೇ ಇತರೆ ಶಾಸನಬದ್ಧ ಕಾನೂನು ಸೌಲಭ್ಯಗಳು ಲಭ್ಯ ಇವೆ ಎಂದು ಪೀಠ ಅಭಿಪ್ರಾಯಪಟ್ಟಿತು.