ಪಪ್ಪಿ ಪ್ರಕರಣ: ₹19 ಸಾವಿರ ವಂಚನೆಯು ₹200 ಕೋಟಿ ಆರೋಪದ ಅಪರಾಧಕ್ಕೆ ಆಧಾರವಾಗುತ್ತದೆಯೇ? ಹೈಕೋರ್ಟ್‌ ಪ್ರಶ್ನೆ

“ವಂಚನೆ ಪ್ರಕರಣದ ತನಿಖೆ ಮುಂದುವರಿಸಲು ಸ್ಥಳೀಯ ಪೊಲೀಸರಿಗೆ ತಿಳಿಸಲು ನಿಮ್ಮನ್ನು (ಇ ಡಿ) ಯಾರೂ ತಡೆಯುತ್ತಿಲ್ಲ. ನಾವು ಕಾಯಿದೆಯ ಅನ್ವಯ ನಡೆಯಬೇಕು. ಇದನ್ನು ಸೂಕ್ತ ದಾಖಲೆಗಳೊಂದಿಗೆ ಸಾಬೀತುಪಡಿಸಬೇಕಾದ ಜವಾಬ್ದಾರಿ ನಿಮ್ಮ ಮೇಲಿದೆ” ಎಂದಿದೆ.
ಪಪ್ಪಿ ಪ್ರಕರಣ: ₹19 ಸಾವಿರ ವಂಚನೆಯು ₹200 ಕೋಟಿ ಆರೋಪದ ಅಪರಾಧಕ್ಕೆ ಆಧಾರವಾಗುತ್ತದೆಯೇ? ಹೈಕೋರ್ಟ್‌ ಪ್ರಶ್ನೆ
Published on

ರಾಮನಗರದ ಕನಕಪುರ ತಾಲ್ಲೂಕಿನ ಹಾರೋಹಳ್ಳಿಯಲ್ಲಿ ದಾಖಲಾಗಿರುವ ವಂಚನೆ ಪ್ರಕರಣದಲ್ಲಿ ಕಾಂಗ್ರೆಸ್‌ ಶಾಸಕ ಕೆ ಸಿ ವೀರೇಂದ್ರ ಅಲಿಯಾಸ್‌ ವೀರೇಂದ್ರ ಪಪ್ಪಿ ಅವರು ಆರೋಪಿ ಅಥವಾ ಸಾಕ್ಷಿ ಆಗದಿರುವಾಗ ₹19 ಸಾವಿರ ಬಾಕಿ ಉಳಿದಿರುವ ಆ ಪ್ರಕರಣವು ನೂರಾರು ಕೋಟಿ ಜಫ್ತಿ ಮಾಡಲಾಗಿದೆ ಎಂದು ಆರೋಪಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪ್ರೆಡಿಕೇಟ್‌ ಅಪರಾಧಕ್ಕೆ (ಅಕ್ರಮ ಗಳಿಕೆಗೆ ಕಾರಣವಾದ ಮೂಲ ಅಪರಾಧ) ಆಧಾರವಾಗುತ್ತದೆಯೇ ಎಂಬುದಕ್ಕೆ ಉತ್ತರಿಸುವಂತೆ ಜಾರಿ ನಿರ್ದೇಶನಾಲಯಕ್ಕೆ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ನಿರ್ದೇಶಿಸಿದೆ.

ಆಧಾರರಹಿತವಾಗಿ ಬಂಧಿಸಿರುವುದರಿಂದ ತಮ್ಮ ಬಂಧನ ಕಾನೂನುಬಾಹಿರ ಎಂದು ಘೋಷಿಸುವಂತೆ ಕೋರಿ ವೀರೇಂದ್ರ ಪತ್ನಿ ಆರ್‌ ಡಿ ಚೈತ್ರಾ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ಐ ಅರುಣ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

“ಕನಕಪುರದ ಹಾರೋಹಳ್ಳಿಯಲ್ಲಿ ದಾಖಲಾಗಿರುವ ವಂಚನೆ ಪ್ರಕರಣದಲ್ಲಿ ಸಕ್ಷಮ ನ್ಯಾಯಾಲಯಕ್ಕೆ ಪೊಲೀಸರು ಬಿ ರಿಪೋರ್ಟ್‌ ಸಲ್ಲಿದ್ದು, ಅದನ್ನು ನ್ಯಾಯಾಲಯ ಒಪ್ಪಿಕೊಂಡಿಲ್ಲ. ಈ ಸಂಬಂಧ ಪ್ರತಿಭಟನಾ ಅರ್ಜಿ ಸಲ್ಲಿಸಿದ್ದು, ಅದು ನಿರ್ಧಾರವಾಗಿಲ್ಲ. ಈ ಪ್ರಕರಣದಲ್ಲಿ ವೀರೇಂದ್ರ ಅವರು ಆರೋಪಿಯೂ ಅಲ್ಲ, ಸಾಕ್ಷಿಯೂ ಅಲ್ಲ.

ಹೀಗಾಗಿ, ಅದನ್ನು ಹಾಲಿ ಪ್ರಕರಣಕ್ಕೆ ಕಾರಣವಾದ ಪ್ರೆಡಿಕೇಟ್‌ ಅಪರಾಧವಾಗಿ ಬಳಕೆ ಮಾಡಬಹುದೇ? ಎಂಬುದು ಮೊದಲ ಪ್ರಶ್ನೆ. ಹಾರೋಹಳ್ಳಿ ಪ್ರಕರಣವು ₹30 ಸಾವಿರ ವಂಚನೆಗೆ ಸಂಬಂಧಿಸಿದ್ದು, ಈ ಪೈಕಿ ದೂರುದಾರನಿಗೆ ₹11 ಸಾವಿರ ಮರಳಿಸಲಾಗಿದೆ. ಇನ್ನು ಬಾಕಿ ಉಳಿದಿರುವುದು ₹19 ಸಾವಿರ ಮಾತ್ರ. ಹಾರೋಹಳ್ಳಿ ಅಪರಾಧದಲ್ಲಿ ಅಪರಾಧ ಪ್ರಕ್ರಿಯೆಯು ₹30 ಸಾವಿರ ಮೀರುವಂತಿಲ್ಲ. ಇ ಡಿಯು ₹19 ಸಾವಿರಕ್ಕೆ ಸಂಬಂಧಿಸಿದ ಅಪರಾಧ ಪ್ರಕ್ರಿಯೆ ಪ್ರಕರಣವನ್ನು ನೋಡುತ್ತಿದೆ. ಆದರೆ, ಹಾಲಿ ಪ್ರಕರಣದಲ್ಲಿ ಇ ಡಿಯು ನೂರಾರು ಕೋಟಿ ಜಫ್ತಿ ಮಾಡಿರುವುದಾಗಿ ಹೇಳುತ್ತಿದೆ. ಕನಕಪುರದ ಹಾರೋಹಳ್ಳಿಯಲ್ಲಿ ದಾಖಲಾಗಿರುವ ಎಫ್‌ಐಆರ್‌ ಆಧರಿಸಿ ಹಾಲಿ ಪ್ರಕರಣ ನಿಲ್ಲುತ್ತದಯೇ ಎಂಬುದನ್ನು ತಿಳಿಸಬೇಕು ಎಂದು ಇ ಡಿಗೆ ನಿರ್ದೇಶಿಸಿದೆ.

ವೀರೇಂದ್ರ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲರಾದ ಸಿದ್ಧಾರ್ಥ್‌ ದವೆ ಮತ್ತು ಚಂದ್ರಮೌಳಿ ಅವರು “ವೀರೇಂದ್ರ ವಿರುದ್ಧ ದಾಖಲಾಗಿದ್ದ ಐದು ಎಫ್‌ಐಆರ್‌ಗಳಲ್ಲಿ ನಾಲ್ಕರಲ್ಲಿ ಅವರನ್ನು ಖುಲಾಸೆ/ಆರೋಪದಿಂದ ಕೈಬಿಡಲಾಗಿದೆ. ವಂಚನೆ ಪ್ರಕರಣದಲ್ಲಿ ವೀರೇಂದ್ರ ಅವರು ಆರೋಪಿಯೂ ಅಲ್ಲ, ಸಾಕ್ಷಿಯೂ ಅಲ್ಲ. ಈ ಪ್ರಕರಣದಲ್ಲಿ ₹30 ಸಾವಿರ ವರ್ಗಾವಣೆ ವಿಚಾರವಿದ್ದು, ಅದರಲ್ಲಿ ₹11 ಸಾವಿರ ಮರುಪಾವತಿಯಾಗಿದೆ. ದೂರುದಾರರ ಪ್ರಕರಣವನ್ನು ನಡೆಸದೇ ಇರುವುದರಿಂದ ಪೊಲೀಸರು ಬಿ ರಿಪೋರ್ಟ್‌ ಸಲ್ಲಿಸಿದ್ದಾರೆ. ಸಕ್ಷಮ ನ್ಯಾಯಾಲಯವು ಆರೋಪ ಪಟ್ಟಿಯನ್ನು ಒಪ್ಪಿಯೂ ಇಲ್ಲ, ತಿರಸ್ಕರಿಸಿಯೂ ಇಲ್ಲ. ಈ ಪ್ರಕರಣವನ್ನು ವೀರೇಂದ್ರ ವಿರುದ್ಧದ ಪ್ರೆಡಿಕೇಟ್‌ ಅಪರಾಧಕ್ಕೆ ಹೇಗೆ ಬೆರಳು ಮಾಡಲಾಗುತ್ತದೆ” ಎಂದರು.

“ಒಂದೊಮ್ಮೆ ವಂಚನೆ ಪ್ರಕರಣ ಇದ್ದರೆ ಇಡಿಯು ಅದನ್ನು ಸ್ಥಳೀಯ ಪೊಲೀಸರು, ಆದಾಯ ತೆರಿಗೆ ಇಲಾಖೆಗೆ ತಿಳಿಸಿಬೇಕಿತ್ತು. ಅಲ್ಲಿ ದೂರು ದಾಖಲಾದ ಬಳಿಕ ಅದನ್ನು ಆಧರಿಸಿ ತನಿಖೆ ಮುಂದುವರಿಸಬಹುದಿತ್ತು. ಆದರೆ, ಆನ್‌ಲೈನ್‌-ಆಫ್‌ಲೈನ್‌ ಬೆಟ್ಟಿಂಗ್‌ ಪ್ರಕರಣದ ಸಂಬಂಧ ದೇಶಾದ್ಯಂತ ದಾಖಲಿಸಿರುವ ಎಫ್‌ಐಆರ್‌ ಆಧರಿಸಿ ತನಿಖೆ ಆರಂಭಿಸಿರುವ ಇಡಿಯು ಏನೇನೂ ಅಲ್ಲದ ವಂಚನೆ ಪ್ರಕರಣವನ್ನು ಪ್ರೆಡಿಕೇಟ್‌ ಅಪರಾಧಕ್ಕೆ ಬಳಕೆ ಮಾಡುತ್ತಿರುವುದು ಏಕೆ” ಎಂದು ಪ್ರಶ್ನಿಸಿದರು.

ಆಗ ಪೀಠವು ಜಾರಿ ನಿರ್ದೇಶನಾಲಯವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ ಅರವಿಂದ್‌ ಕಾಮತ್‌ ಅವರನ್ನು ಕುರಿತು “ಇಲ್ಲಿ ಷೆಡ್ಯೂಲ್ಡ್‌ (ಪ್ರೆಡಿಕೇಟ್‌) ಅಪರಾಧ ಇರಬೇಕು. ಇಲ್ಲಿ ಷೆಡ್ಯೂಲ್ಡ್‌ ಅಪರಾಧವೇನು? ₹30 ಸಾವಿರ ವಂಚನೆ ಪ್ರಕರಣ. ಇದರಲ್ಲಿ ₹11 ಸಾವಿರ ಮರಳಿಸಲಾಗಿದೆ. ಬಾಕಿ ಇರುವುದು ₹19 ಸಾವಿರ ಮಾತ್ರ. ಹೀಗಾಗಿ, ಇ ಡಿ ಹೇಳುತ್ತಿರುವಂತೆ ಹಾಲಿ ₹150 ಕೋಟಿ/₹200 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣ ನಿಲ್ಲಲಿದೆಯೇ?” ಎಂಬ ಪ್ರಶ್ನೆ ಇದೆ ಎಂದಿತು.

Also Read
ಶಾಸಕ ವೀರೇಂದ್ರ ಪಪ್ಪಿಗೆ ಸಮನ್ಸ್‌ ನೀಡಿಲ್ಲ, ವಿವೇಚನೆ ಬಳಕೆ ಮಾಡಿಲ್ಲ: ಹಿರಿಯ ವಕೀಲ ಸಿದ್ಧಾರ್ಥ್‌ ದವೆ

ಅಲ್ಲದೆ, “ವಂಚನೆ ಪ್ರಕರಣವನ್ನು ಮುಂದಕ್ಕೆ ಕೊಂಡೊಯ್ಯಲು ಸ್ಥಳೀಯ ಪೊಲೀಸರನ್ನು ಕೆಲಸಕ್ಕೆ ಹಚ್ಚಲು ನಿಮ್ಮನ್ನು ಯಾರೂ ತಡೆಯುತ್ತಿಲ್ಲ. ನಾವು ಕಾಯಿದೆಯ ಅನ್ವಯ ನಡೆಯಬೇಕು. ಇದನ್ನು ಸೂಕ್ತ ದಾಖಲೆಗಳೊಂದಿಗೆ ಸಾಬೀತುಪಡಿಸಬೇಕಾದ ಜವಾಬ್ದಾರಿ ನಿಮ್ಮ ಮೇಲಿದೆ” ಎಂದಿತು.

ಇದಕ್ಕೆ ಸೋಮವಾರ ಉತ್ತರಿಸುವುದಾಗಿ ಕಾಮತ್‌ ಅವರು ಹೇಳಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ನ್ಯಾಯಾಲಯವು ಮುಂದೂಡಿತು. ಅಂದೇ ಆದೇಶ ಪ್ರಕಟಿಸುವುದಾಗಿಯೂ ಸ್ಪಷ್ಟಪಡಿಸಿತು.

Kannada Bar & Bench
kannada.barandbench.com