ಹಿಂದೂ ಪತಿ ಮಾರಾಟ ಮಾಡಿದ ಆಸ್ತಿಯಿಂದ ಹೆಂಡತಿ ಜೀವನಾಂಶ ಪಡೆಯಬಹುದು: ಕೇರಳ ಹೈಕೋರ್ಟ್

ಪತಿಯ ಸ್ಥಿರಾಸ್ತಿಯಿಂದ ಜೀವನಾಂಶ ಪಡೆಯಲು 1956ರ ಹಿಂದೂ ದತ್ತು ಮತ್ತು ಜೀವನಾಂಶ ಕಾಯಿದೆ ಅವಕಾಶ ನೀಡುತ್ತೆಯೇ ಎಂಬ ವಿಚಾರವಾಗಿ ವಿಭಾಗೀಯ ಪೀಠ ಈ ಹಿಂದೆ ಭಿನ್ನ ತೀರ್ಪು ನೀಡಿತ್ತು.
Kerala High Court
Kerala High Court
Published on

ಪತಿ ತನ್ನ ಸ್ಥಿರಾಸ್ತಿ ಮಾರಾಟ ಮಾಡುವ ಮುನ್ನ ಪತ್ನಿಯು ಜೀವನಾಂಶ ಕೋರಿ ಕಾನೂನು ಕ್ರಮ ಆರಂಭಿಸಿದ್ದರೆ ಅಥವಾ ಖರೀದಿದಾರರಿಗೆ ಆಕೆಯ ಹಕ್ಕಿನ ಬಗ್ಗೆ ಸುಳಿವು ಇದ್ದರೆ ಗಂಡ ಸ್ಥಿರಾಸ್ತಿ ಮಾರಾಟ ಮಾಡಿದ ಬಳಿಕವೂ ನಿರ್ದಿಷ್ಟ ಷರತ್ತುಗಳನ್ವಯ ಹಿಂದೂ ಧರ್ಮೀಯ ಪತ್ನಿಗೆ ಆ ಆಸ್ತಿಗೆ ಸಂಬಂಧಿಸಿದಂತೆ ಜೀವನಾಂಶ ಪಡೆಯುವ ಹಕ್ಕಿದೆ ಎಂದು ಕೇರಳ ಹೈಕೋರ್ಟ್‌ ಬುಧವಾರ ತೀರ್ಪು ನೀಡಿದೆ [ಸುಲೋಚನಾ ಮತ್ತು ಅನಿತಾ ಇನ್ನಿತರರ ನಡುವಣ ಪ್ರಕರಣ].

ಪತಿಯ ಸ್ಥಿರಾಸ್ತಿಯಿಂದ ಜೀವನಾಂಶ ಪಡೆಯಲು 1956ರ ಹಿಂದೂ ದತ್ತು ಮತ್ತು ಜೀವನಾಂಶ ಕಾಯಿದೆ ಅವಕಾಶ ನೀಡುತ್ತೆಯೇ ಎಂಬ ವಿಚಾರವಾಗಿ ವಿಭಾಗೀಯ ಪೀಠ ಈ ಹಿಂದೆ ಭಿನ್ನ ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ಸುಶ್ರುತ್ ಅರವಿಂದ ಧರ್ಮಾಧಿಕಾರಿ, ಪಿ ವಿ ಕುನ್ಹಿಕೃಷ್ಣನ್ ಮತ್ತು ಜಿ ಗಿರೀಶ್ ಅವರನ್ನು ಒಳಗೊಂಡ ಪೂರ್ಣ ಪೀಠ ಇದೀಗ ತೀರ್ಪು ಪ್ರಕಟಿಸಿದೆ.

Also Read
ದೆಹಲಿ ಗಲಭೆ ಪ್ರಕರಣ: ಉಮರ್ ಖಾಲಿದ್, ಶಾರ್ಜೀಲ್ ಇಮಾಮ್‌ಗೆ ಜಾಮೀನು ನಿರಾಕರಿಸಿದ ಸುಪ್ರೀಂ; ಉಳಿದ ಐವರು ನಿರಾಳ

ಪ್ರಕರಣ ಮುಖ್ಯವಾಗಿ ಆಸ್ತಿ ವರ್ಗಾವಣೆ ಕಾಯಿದೆಯ ಸೆಕ್ಷನ್ 39 ಮತ್ತು ಹಿಂದೂ ದತ್ತು ಮತ್ತು ಜೀವನಾಂಶ ಕಾಯಿದೆಯ ಸೆಕ್ಷನ್ 28ರ ಅನ್ವಯತೆಯನ್ನು ಕುರಿತದ್ದಾಗಿತ್ತು. ಈ ಎರಡೂ ವಿಧಿಗಳು, ಪತಿಯ ಆಸ್ತಿಯನ್ನು ವರ್ಗಾಯಿಸಿದ ನಂತರವೂ, ಹೆಂಡತಿಯ ಜೀವನಾಂಶದ ಹಕ್ಕನ್ನು ಆ ಆಸ್ತಿಯ ವಿರುದ್ಧ ಜಾರಿಗೊಳಿಸಲು ಅವಕಾಶ ನೀಡುತ್ತವೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಹಿಂದೂ ದತ್ತು ಮತ್ತು ಜೀವನಾಂಶ ಕಾಯಿದೆ 1956ರ ವಿಧಿಗಳನ್ನು ಮೀರಿ  ಹಿಂದೂ ಹೆಂಡತಿಗೆ ತನ್ನ ಪತಿಯ ಸ್ಥಿರಾಸ್ತಿಯಿಂದ ಜೀವನಾಂಶ ಪಡೆಯುವ ಹಕ್ಕು ಇದೆ ಎಂದು ಜನವರಿ 14ರಂದು ನೀಡಿದ ತೀರ್ಪಿನಲ್ಲಿ ಪೂರ್ಣ ಪೀಠ ತೀರ್ಮಾನಿಸಿದೆ.

ಆದರೆ, ಹೆಂಡತಿಯ ಪತಿ ಮತ್ತು ಅವನ ಆಸ್ತಿಗಳಿಂದ ಜೀವನಾಂಶ ಪಡೆಯಲು ಕಾನೂನು ಕ್ರಮಗಳನ್ನು ಆರಂಭಿಸುವವರೆಗೂ, ಅಥವಾ ಪತಿಯ ಮರಣದಿಂದಾಗಿ ಆ ಜೀವನಾಂಶಯಿಂದ ವಂಚಿತಳಾಗುವವರೆಗೂ, ಆಕೆಯ ಹಕ್ಕು ಸುಪ್ತಾವಸ್ಥೆಯಲ್ಲಿ ಇರುತ್ತದೆ ಎಂದು ಊಹಿಸಿಕೊಳ್ಳಬೇಕು ಎಂಬುದಾಗಿ ನ್ಯಾಯಾಲಯ ಸ್ಪಷ್ಟಪಡಿಸಿದೆ.

ಈ ಸುಪ್ತಾವಸ್ಥೆ ಅವಧಿಯಲ್ಲಿ, ಆ ಸ್ಥಿರಾಸ್ತಿಯನ್ನು ಖರೀದಿಸಿದವರು, ಆ ಹಕ್ಕಿನ ಕುರಿತು ಅರಿವು ಹೊಂದಿದ್ದರು ಎಂದು ಊಹಿಸಲು ಸಾಧ್ಯವಿಲ್ಲ. ಹೀಗಾಗಿ, ಆಸ್ತಿ ವರ್ಗಾವಣೆ ಕಾಯಿದೆಯ ಸೆಕ್ಷನ್ 39 ಅಥವಾ ಹಿಂದೂ ದತ್ತು ಮತ್ತು ಜೀವನಾಂಶ ಕಾಯಿದೆಯ ಸೆಕ್ಷನ್ 28 ಅನ್ನು ಅನ್ವಯಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಆದರೆ, ಮಾರಾಟದ ಸಮಯದಲ್ಲಿ ಖರೀದಿದಾರರಿಗೆ, ಮಾರಾಟಗಾರನು ತನ್ನ ಹೆಂಡತಿಗೆ ಜೀವನಾಂಶ ನಿರಾಕರಿಸಿದ್ದಾನೆ ಮತ್ತು ಆ ನಿರಾಕರಣೆಯಿಂದ ಉದ್ಭವಿಸಿದ ಯಾವುದೇ  ಸಕ್ರಿಯ ಜೀವನಾಂಶ ಬೇಡಿಕೆ ಇದೆ ಎಂಬುದರ ಕುರಿತು ಅರಿವು ಇದ್ದುದನ್ನು ತೋರಿಸುವ ಸಾಕ್ಷ್ಯವಿದ್ದರೆ, ಅಥವಾ ಆಸ್ತಿ ವರ್ಗಾವಣೆ ದಾನ ಸ್ವಭಾವದ್ದಾಗಿದೆ ಎಂದು ತೋರಿಸುವ ಕಾರಣಗಳಿದ್ದರೆ, ಅಂಥ ಸಂದರ್ಭದಲ್ಲಿ ಹೆಂಡತಿಯ ಜೀವನಾಂಶ ಹಕ್ಕಿಗೆ ಆಸ್ತಿ ವರ್ಗಾವಣೆ ಕಾಯಿದೆಯ ಸೆಕ್ಷನ್ 39ರ ರಕ್ಷಣೆ ಮತ್ತು ವಿಶೇಷಾಧಿಕಾರಗಳು ಅನ್ವಯವಾಗುತ್ತವೆ ಎಂದು ನ್ಯಾಯಾಲಯ ತಿಳಿಸಿದೆ.

Also Read
ದೆಹಲಿ ಗಲಭೆ ಪ್ರಕರಣ: ಉಮರ್ ಖಾಲಿದ್, ಶಾರ್ಜೀಲ್ ಇಮಾಮ್‌ಗೆ ಜಾಮೀನು ನಿರಾಕರಿಸಿದ ಸುಪ್ರೀಂ; ಉಳಿದ ಐವರು ನಿರಾಳ

ಅಲ್ಲದೆ, ಹೆಂಡತಿ ಕಾನೂನು ಕ್ರಮ ಆರಂಭಿಸಿದ ಅವಧಿಯಲ್ಲಿ ಅಥವಾ ಪತಿಯ ಮರಣದಿಂದಾಗಿ ಆಕೆ ಜೀವನಾಂಶದಿಂದ ವಂಚಿತಳಾಗಿರುವ ಅವಧಿಯಲ್ಲಿ ಯಾವುದೇ ಆಸ್ತಿ ವರ್ಗಾವಣೆ ನಡೆದಿದ್ದರೆ, ಆಸ್ತಿ ಖರೀದಿದಾರರಿಗೆ ಆ ಹಕ್ಕಿನ ಕುರಿತು ಅರಿವು ಇದೆ ಎಂದು ಪರಿಗಣಿಸಬೇಕು. ಈ ಉದ್ದೇಶಕ್ಕಾಗಿ, ಆಸ್ತಿ ವರ್ಗಾವಣೆ ಕಾಯಿದೆಯ ಸೆಕ್ಷನ್ 39 ಅಥವಾ ಹಿಂದೂ ದತ್ತು ಮತ್ತು ಜೀವನಾಂಶ ಕಾಯಿದೆಯ ಸೆಕ್ಷನ್ 28 ಅನ್ವಯವಾಗುತ್ತದೆ ಎಂದು ಪೂರ್ಣ ಪೀಠ ವಿವರಿಸಿದೆ.

1956ರ ಕಾಯಿದೆಯಲ್ಲಿ ಹಿಂದೂ ಹೆಂಡತಿಯ ಜೀವನೋಪಾಯ ಹಕ್ಕು ಪತಿಯ ಆಸ್ತಿಗೂ ಅನ್ವಯಿಸುತ್ತದೆ ಎಂದು ಸ್ಪಷ್ಟವಾಗಿ ಹೇಳದಿದ್ದರೂ, ಅದನ್ನು ಹೆಂಡತಿಯ ಹಕ್ಕನ್ನು ಕುಗ್ಗಿಸುವ ರೀತಿ ವ್ಯಾಖ್ಯಾನಿಸಲು ಸಾಧ್ಯವಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.

[ಆದೇಶದ ಪ್ರತಿ]

Attachment
PDF
Sulochana_v_Anitha___ors
Preview
Kannada Bar & Bench
kannada.barandbench.com