ದೆಹಲಿ ಗಲಭೆ ಪ್ರಕರಣ: ಉಮರ್ ಖಾಲಿದ್, ಶಾರ್ಜೀಲ್ ಇಮಾಮ್‌ಗೆ ಜಾಮೀನು ನಿರಾಕರಿಸಿದ ಸುಪ್ರೀಂ; ಉಳಿದ ಐವರು ನಿರಾಳ

ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್, ಶಾದಾಬ್ ಅಹ್ಮದ್ ಹಾಗೂ ಮೊಹಮ್ಮದ್ ಸಲೀಂ ಖಾನ್ ಅವರಿಗೆ ನ್ಯಾಯಾಲಯ ಜಾಮೀನು ನೀಡಿದೆ.
ದೆಹಲಿ ಗಲಭೆ ಪ್ರಕರಣ: ಉಮರ್ ಖಾಲಿದ್, ಶಾರ್ಜೀಲ್ ಇಮಾಮ್‌ಗೆ ಜಾಮೀನು ನಿರಾಕರಿಸಿದ ಸುಪ್ರೀಂ; ಉಳಿದ ಐವರು ನಿರಾಳ
Published on

ಐದು ವರ್ಷಗಳ ಹಿಂದೆ, 2020ರಲ್ಲಿ ಘಟಿಸಿದ್ದ ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆಯಡಿ ಆರೋಪಿಗಳಾಗಿರುವ ಉಮರ್ ಖಾಲಿದ್ ಹಾಗೂ ಶಾರ್ಜೀಲ್ ಇಮಾಮ್ ಅವರಿಗೆ ಸುಪ್ರೀಂ ಕೋರ್ಟ್ ಸೋಮವಾರ ಜಾಮೀನು ನಿರಾಕರಿಸಿದೆ.

ಇದೇ ವೇಳೆ, ಪ್ರಕರಣದ ಉಳಿದ ಆರೋಪಿಗಳಾದ ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್, ಶಾದಾಬ್ ಅಹ್ಮದ್ ಹಾಗೂ ಮೊಹಮ್ಮದ್ ಸಲೀಂ ಖಾನ್ ಅವರಿಗೆನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಎನ್‌ ವಿ ಅಂಜಾರಿಯಾ ಅವರನ್ನೊಳಗೊಂಡ ಪೀಠ ಜಾಮೀನು ಮಂಜೂರು ಮಾಡಿದೆ.

Also Read
ದೆಹಲಿ ಗಲಭೆ: ಸುಪ್ರೀಂ ಕೋರ್ಟ್‌ಗೆ ಉಮರ್‌ ಖಾಲಿದ್‌ ಜಾಮೀನು ಅರ್ಜಿ ಸಲ್ಲಿಕೆ

ಏಳು ಮಂದಿ ಆರೋಪಿಗಳ ಜಾಮೀನು ಅರ್ಜಿಗಳನ್ನು ಪ್ರತ್ಯೇಕವಾಗಿ ಪರಿಶೀಲಿಸಬೇಕೆಂದು ನ್ಯಾಯಾಲಯ ಹೇಳಿದ್ದು, ಅಪರಾಧದ ವಿಚಾರದಲ್ಲಿ ಎಲ್ಲರೂ ಒಂದೇ ರೀತಿಯ ಪಾತ್ರ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದೆ.

“ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಇತರ ಆರೋಪಿಗಳಿಗಿಂತ ಗುಣಾತ್ಮಕವಾಗಿ ಭಿನ್ನವಾದ ಸ್ಥಿತಿಯಲ್ಲಿದ್ದಾರೆ” ಎಂದು ಹೇಳಿರುವ ಪೀಠ ಇಬ್ಬರಿಗೂ ಜಾಮೀನು ನಿರಾಕರಿಸಿತು.

"ಪ್ರಾಸಿಕ್ಯೂಷನ್‌ ನ್ಯಾಯಾಲಯದ ಮುಂದಿರಿಸಿರುವ ದಾಖಲೆಗಳು ಉಮರ್‌ ಖಾಲಿದ್‌ ಮತ್ತು ಶಾರ್ಜೀಲ್‌ ಅವರ ಮೇಲಿನ ಆರೋಪಗಳನ್ನು ಮೇಲ್ನೋಟಕ್ಕೆ ಪುಷ್ಟೀಕರಿಸುತ್ತವೆ. ಈ ಅರ್ಜಿದಾರರ ವಿಷಯದಲ್ಲಿ ಶಾಸನಾತ್ಮಕ ನಿರ್ಬಂಧಗಳು ಅನ್ವಯವಾಗುತ್ತವೆ. ವಿಚಾರಣಾ ಪ್ರಕ್ರಿಯೆಯ ಈ ಹಂತದಲ್ಲಿ ಈ ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸುವುದನ್ನು ಸಮರ್ಥಿಸಲಾಗದು," ಎಂದು ಉಮರ್‌ ಹಾಗೂ ಶಾರ್ಜೀಲ್‌ ಅವರಿಗೆ ಜಾಮೀನು ನಿರಾಕರಿಸುವ ವೇಳೆ ಪೀಠ ಹೇಳಿದೆ.

ಆದರೆ, ಇದೇ ವೇಳೆ ನ್ಯಾಯಾಲಯವು ಪ್ರಕರಣಕ್ಕೆ ಸಂಬಂಧಿಸಿದಂತೆ ರಕ್ಷಣೆಯಲ್ಲಿರುವ ಸಾಕ್ಷಿಗಳ ವಿಚಾರಣೆಯಾದ ಮೇಲೆ ಅಥವಾ ಈ ಆದೇಶದ ಒಂದು ವರ್ಷದ ಅವಧಿಯ ನಂತರ ಉಮರ್‌ ಹಾಗೂ ಶಾರ್ಜೀಲ್‌ ಅವರು ಮತ್ತೆ ಜಾಮೀನು ಕೋರಿ ಅರ್ಜಿ ಸಲ್ಲಿಸಲು ಸ್ವತಂತ್ರರು ಎಂದು ಸ್ಪಷ್ಟಪಡಿಸಿದೆ.

ಉಳಿದ ಐವರು ಆರೋಪಿಗಳಿಗೆ ಹನ್ನೆರಡು ಕಠಿಣ ಷರತ್ತುಗಳನ್ನು ವಿಧಿಸಿ ನ್ಯಾಯಾಲಯವು ಜಾಮೀನು ಮಂಜೂರು ಮಾಡಿತು.

ತೀರ್ಪಿನ ವೇಳೆ ಪೀಠವು, ವಿಚಾರಣೆಯಲ್ಲಿ ವಿಳಂಬ ಉಂಟಾದರೆ ಅದು ಪ್ರಸಕ್ತ ಪ್ರಕರಣದಂತೆ ಯುಎಪಿಎ ಅಡಿಯ ಪ್ರಕರಣಗಳನ್ನು ಸಹ ಪರಿಶೀಲಿಸಲು ನ್ಯಾಯಾಂಗಕ್ಕೆ ಪ್ರೇರಣೆಯಾಗುತ್ತದೆ ಎಂದು ಅಭಿಪ್ರಾಯಪಟ್ಟಿತು.

"ಯಾವ ಪರಿಸ್ಥಿತಿಗಳಲ್ಲಿ ವಿಚಾರಣೆಗೂ ಮುನ್ನ ಜಾಮೀನು ನೀಡಬಹುದು ಎನ್ನುವ ಬಗ್ಗೆ ಶಾಸನಾತ್ಮಕ ವಿವೇಚನೆ ಇರುವುದನ್ನು ಯುಎಪಿಎ ಒಂದು ವಿಶೇಷ ಕಾಯಿದೆಯಾಗಿ ಸೂಚಿಸುತ್ತದೆ. ವಿಳಂಬ ಹೆಚ್ಚಿನ ನ್ಯಾಯಾಂಗ ಪರಿಶೀಲನೆಗೆ ಕಾರಣವಾಗುತ್ತದೆ. ಪ್ರಸಕ್ತ ಪ್ರಕರಣದಲ್ಲಿ ಚರ್ಚೆಯನ್ನು ವಿಳಂಬ ಹಾಗೂ ದೀರ್ಘಾವಧಿಯ ಬಂಧನಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ. ಯುಎಪಿಎ ಅಡಿಯ ಅಪರಾಧಗಳು ಸಾಮಾನ್ಯವಾಗಿ ಪ್ರತ್ಯೇಕ ಕೃತ್ಯಗಳಿಗೆ ಸೀಮಿತವಾಗಿರುವುದಿಲ್ಲ. ಕಾನೂನಿನ ಸ್ವರೂಪವು ಈ ಅರ್ಥವನ್ನು ಪ್ರತಿಬಿಂಬಿಸುತ್ತದೆ” ಎಂದು ನ್ಯಾಯಾಲಯವು ತೀರ್ಪಿನ ವೇಳೆ ವಿವರಿಸಿದೆ.

ಸಂವಿಧಾನದ 21ನೇ ವಿಧಿಯಡಿ ಒದಗಿಸಲಾದ ಸ್ವಾತಂತ್ರ್ಯದ ಹಕ್ಕಿನ ಪ್ರಕಾರ, ವಿಚಾರಣೆ ಪೂರ್ವ ದೀರ್ಘಾವಧಿಯ ಬಂಧನನ್ನು ಸರ್ಕಾರ ಸಮರ್ಥಿಸಿಕೊಳ್ಳಬೇಕಾಗುತ್ತದೆ  ಎಂದು ಪೀಠ ಒತ್ತಿ ಹೇಳಿದೆ.

Also Read
ಬುದ್ಧಿಜೀವಿಗಳಲ್ಲ ದೇಶ ವಿರೋಧಿಗಳು: ಶಾರ್ಜಿಲ್, ಉಮರ್ ಜಾಮೀನು ಅರ್ಜಿ ವಿಚಾರಣೆ ವೇಳೆ ದೆಹಲಿ ಪೊಲೀಸರ ಆರೋಪ

ಯುಎಪಿಎ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಜಾಮೀನು ನೀಡುವುದಿಲ್ಲವಾದರೂ, ಜಾಮೀನನ್ನು ಪೂರ್ವನಿಯೋಜಿತವಾಗಿ ನಿರಾಕರಿಸಬೇಕು ಎಂದು ಕಾಯಿದೆ ಕಡ್ಡಾಯಗೊಳಿಸುವುದಿಲ್ಲ ಹಾಗೂ ಜಾಮೀನು ಮಂಜೂರು ಮಾಡುವ ನ್ಯಾಯಾಲಯದ ಅಧಿಕಾರವನ್ನು ಕೂಡ ಹೊರತುಪಡಿಸುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.

“ಯುಎಪಿಎಯ 4 ಡಿ (5) ಸೆಕ್ಷನ್ ಜಾಮೀನು ನೀಡುವ ಸಾಮಾನ್ಯ ವಿಧಾನದೊಳಗೆ ಭಿನ್ನತೆಯನ್ನು ತರುತ್ತದೆ. ಆದರೆ ಅದು ನ್ಯಾಯಾಂಗ ಪರಿಶೀಲನೆಯನ್ನು ಹೊರತುಪಡಿಸುವುದಿಲ್ಲ ಅಥವಾ ಪೂರ್ವನಿಯೋಜಿತವಾಗಿ ಜಾಮೀನು ನಿರಾಕರಿಸಬೇಕು ಎಂದು ಕಡ್ಡಾಯಗೊಳಿಸುವುದಿಲ್ಲ” ಎಂದು ಅದು ವಿವರಿಸಿದೆ.

Kannada Bar & Bench
kannada.barandbench.com