
ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿರುವುದರಿಂದ ಹಾವೇರಿ ಜಿಲ್ಲೆಯ ಹರನಗಿ ಗ್ರಾಮದ ರೈತ ರುದ್ರಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸುಳ್ಳು ಸುದ್ದಿ ಹರಿಬಿಟ್ಟ ಸಂಬಂಧ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಮತ್ತು ಆನಂತರದ ನ್ಯಾಯಾಂಗ ಪ್ರಕ್ರಿಯೆಯನ್ನು ಕರ್ನಾಟಕ ಹೈಕೋರ್ಟ್ ಗುರುವಾರ ರದ್ದುಪಡಿಸಿದೆ.
ಹಾವೇರಿ ಸೆನ್ (ಸೈಬರ್, ಆರ್ಥಿಕ ಹಾಗೂ ಮಾದಕ ದ್ರವ್ಯ ನಿಯಂತ್ರಣ) ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸಬೇಕು ಎಂದು ಕೋರಿ ಬಿಜೆಪಿಯ ತೇಜಸ್ವಿ ಸೂರ್ಯ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.
ವಿಚಾರಣೆಯ ಸಂದರ್ಭದಲ್ಲಿ ವಿಶೇಷ ಸರ್ಕಾರಿ ಅಭಿಯೋಜಕ-1 ಬಿ ಎ ಬೆಳ್ಳಿಯಪ್ಪ ಅವರು “ಉದ್ದೇಶಪೂರ್ವಕವಾಗಿ ತೇಜಸ್ವಿ ಸೂರ್ಯ ಅವರು ಸುದ್ದಿ ಪ್ರಟಿಸಿದ್ದಾರೆ. ತೇಜಸ್ವಿ ಅವರ ಟ್ವೀಟ್ ಸಮುದಾಯಗಳ ನಡುವೆ ದ್ವೇಷ ಹರಡುವ ಕೃತ್ಯವಾಗಿದೆ. ಹೀಗಾಗಿ, ಅರ್ಜಿದಾರರ ಮನವಿ ವಜಾ ಮಾಡಿ, ತನಿಖೆಗೆ ಅನುಮತಿಸಬೇಕು” ಎಂದು ಕೋರಿದ್ದರು.
ತೇಜಸ್ವಿ ಸೂರ್ಯರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಅರುಣ್ ಶ್ಯಾಮ್ ಅವರು “ಹಾವೇರಿ ಜಿಲ್ಲಾ ಪೊಲೀಸರು ರೈತನ ಆತ್ಮಹತ್ಯೆಗೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡಿದ ಬೆನ್ನಿಗೇ ತೇಜಸ್ವಿ ತಮ್ಮ ಟ್ವೀಟ್ ಡಿಲೀಟ್ ಮಾಡಿದ್ದಾರೆ. ವೆಬ್ ಪೋರ್ಟ್‌ಲ್ ವರದಿ ಆಧರಿಸಿ ಸೂರ್ಯ ಟ್ವೀಟ್ ಮಾಡಿದ್ದಾರೆ. ಸಾವನ್ನಪ್ಪಿದ ರೈತನ ತಂದೆಯ ಸಂದರ್ಶನ ಸುದ್ದಿಯಾಗಿತ್ತು. ಅದನ್ನು ಲಗತ್ತಿಸಿ ಟ್ವೀಟ್ ಮಾಡಿದ್ದರು. ಇದರಲ್ಲಿ ಯಾವುದೇ ಅನ್ಯ ಉದ್ದೇಶ ಇರಲಿಲ್ಲ” ಎಂದು ಸಮರ್ಥಿಸಿದ್ದರು.
ಪ್ರಕರಣದ ಹಿನ್ನೆಲೆ: ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದ್ದರಿಂದ ರೈತ ರುದ್ರಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕನ್ನಡ ದುನಿಯಾ ಹಾಗೂ ಕನ್ನಡ ನ್ಯೂಸ್ ಡಿಜಿಟಲ್ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಪ್ರಕಟಿಸಲಾಗಿತ್ತು. ಇದನ್ನು ತೇಜಸ್ವಿ ಸೂರ್ಯ ಎಕ್ಸ್‌ನಲ್ಲಿ ಹಂಚಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ತೇಜಸ್ವಿ ಸೂರ್ಯರನ್ನು ಮೊದಲ ಆರೋಪಿಯನ್ನಾಗಿಸಿ, ಕನ್ನಡ ದುನಿಯಾ ಮಾಧ್ಯಮ ಮತ್ತು ಕನ್ನಡ ನ್ಯೂಸ್ ಸಂಪಾದಕರನ್ನು ಕ್ರಮವಾಗಿ ಎರಡು ಮತ್ತು ಮೂರನೇ ಆರೋಪಿಗಳನ್ನಾಗಿಸಿ ಹಾವೇರಿಯ ಸೆನ್ ಠಾಣೆಯಲ್ಲಿ ಬಿಎನ್‌ಎಸ್ ಸೆಕ್ಷನ್ 353 (2) ಅಡಿ (ವಿವಿಧ ಗುಂಪುಗಳ ನಡುವೆ ದ್ವೇಷ ಬಿತ್ತುವ ಮತ್ತು ದ್ವೇಷಕ್ಕೆ ಪ್ರಚೋದನೆ ನೀಡುವ ಸುಳ್ಳು ಸುದ್ದಿ ಹರಡಿದ ಆರೋಪ) ಎಫ್‌ಐಆರ್ ದಾಖಲಿಸಲಾಗಿತ್ತು.