'ಪೂರ್ವಾನುಮತಿ ಇಲ್ಲದೆ ಪಿಸಿ ಕಾಯಿದೆಯಡಿ ಮ್ಯಾಜಿಸ್ಟ್ರೇಟ್ ತನಿಖೆ ನಡೆಸಬಹುದೇ?' ನಿರ್ಧರಿಸಲಿದೆ ಕೇರಳ ಹೈಕೋರ್ಟ್
ಪೂರ್ವಾನುಮತಿ ಇಲ್ಲದಿದ್ದಾಗಲೂ ಮ್ಯಾಜಿಸ್ಟ್ರೇಟ್ ಒಬ್ಬರು ಸರ್ಕಾರಿ ನೌಕರನ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯಿದೆ ಸೆಕ್ಷನ್ 19 ರ ಅಡಿಯಲ್ಲಿ ತನಿಖೆಗೆ ಆದೇಶಿಸಬಹುದೇ ಎಂಬುದನ್ನು ಪರಿಶೀಲಿಸಲು ಕೇರಳ ಹೈಕೋರ್ಟ್‌ನಲ್ಲಿ ವಿಸೃತ ಪೀಠ ರಚಿಸಲಾಗಿದೆ [ಎ ಕೆ ಶ್ರೀಕುಮಾರ್ ಮತ್ತು ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಈ ವಿಚಾರಕ್ಕೆ ಸಂಬಂಧಿಸಿದ ಪ್ರಕರಣವೊಂದು 2018 ರಿಂದ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದ್ದು ಸಂಜ್ಞೇಯತೆಯನ್ನು ತೆಗೆದುಕೊಳ್ಳುವ ನಿರ್ಬಂಧ ತನಿಖೆಗೆ ಅಡ್ಡಿಯಾಗುವುದಿಲ್ಲ ಎಂದು 2021ರಲ್ಲಿ ಅದು ಹೇಳಿತ್ತು ಎಂಬುದನ್ನು ಗಮನಿಸಿದ ನ್ಯಾ. ಕೆ ಬಾಬು ಅವರಿದ್ದ ಏಕಸದಸ್ಯ ಪೀಠ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿತು.
ಅಧಿಕೃತ ಪೂರ್ವಾನುಮತಿ ಇಲ್ಲದೆ ಸರ್ಕಾರಿ ನೌಕರನ ವಿರುದ್ಧ ಯಾವುದೇ ವಿಚಾರಣೆ ಅಥವಾ ತನಿಖೆ ನಡೆಸದಂತೆ ಪೊಲೀಸರನ್ನು ಕಾಯಿದೆಯ ಸೆಕ್ಷನ್ 17 ಎ ನಿರ್ಬಂಧಿಸುತ್ತದೆ. ಅಂತೆಯೇ ಸೆಕ್ಷನ್ 19 ಸರ್ಕಾರದ ಅನುಮತಿಯಿಲ್ಲದೆ ಸಾರ್ವಜನಿಕ ಸೇವಕರು ಮಾಡಿದ ಕೆಲವು ಅಪರಾಧಗಳ ಸಂಜ್ಞೇಯ ಪರಿಗಣನೆ ನಡೆಸದಂತೆ ನ್ಯಾಯಾಲಯಕ್ಕೆ ನಿಷೇಧ ವಿಧಿಸುತ್ತದೆ.
ಸುಪ್ರೀಂ ಕೋರ್ಟ್ ವಿಸ್ತೃತ ಪೀಠ ಪ್ರಕರಣದ ಬಗ್ಗೆ ನಿರ್ಧರಿಸುವವರೆಗೆ ಅನಿಲ್ ಕುಮಾರ್ ಮತ್ತು ಎಂ ಕೆ ಅಯ್ಯಪ್ಪ ಪ್ರಕರಣದ ತೀರ್ಪನ್ನು ಅನ್ವಯಿಸಲಾಗುವುದಿಲ್ಲ ಎಂದು ಮಹಮ್ಮದ್ ವಿ ಎ ಮತ್ತಿತರರು ಹಾಗೂ ಕೇರಳ ಸರ್ಕಾರ ನಡುವಣ ಪ್ರಕರಣದ ತೀರ್ಪಿನಲ್ಲಿ ಹೇಳಿತ್ತು. ಅಧಿಕೃತ ಪೂರ್ವಾನುಮತಿ ಇಲ್ಲದೆ ಪಿ ಸಿ ಕಾಯಿದೆಯಡಿ ತನಿಖೆಗೆ ಖಾಸಗಿ ದೂರನ್ನು ಸ್ವೀಕರಿಸುವಂತಿಲ್ಲ ಎಂದು ಅನಿಲ್ ಕುಮಾರ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನುಡಿದಿತ್ತು.
ಆದರೆ, ಕಾಯಿದೆಯ ಸೆಕ್ಷನ್ 17 ಎ ಅಡಿಯಲ್ಲಿ ಸಕ್ಷಮ ಪ್ರಾಧಿಕಾರದ ಅನುಮೋದನೆಗಾಗಿ ಸಿಆರ್‌ಪಿಸಿಯ ಸೆಕ್ಷನ್ 156 (3) ರ ಅಡಿಯಲ್ಲಿ ದೂರನ್ನು ಮುಂದೂಡುವ ವಿಶೇಷ ನ್ಯಾಯಾಧೀಶರ ನಿರ್ಧಾರವನ್ನು ಪ್ರಶ್ನಿಸುವ ಮನವಿಯ ತೀರ್ಪಿನ ಸಂದರ್ಭದಲ್ಲಿ ಈ ಪ್ರಕರಣ ಮತ್ತೆ ಹೈಕೋರ್ಟ್ ಮೆಟ್ಟಿಲೇರಿದೆ.
ಪಿಸಿ ಕಾಯಿದೆಯಡಿ ತನಿಖೆಗೆ ಆದೇಶಿಸುವ ಹಂತದಲ್ಲಿ ಮಂಜೂರಾತಿ ಅಗತ್ಯವಿದೆಯೇ ಎಂಬ ಕುರಿತಂತೆ ನ್ಯಾಯಮೂರ್ತಿ ಬಾಬು, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ನ ವಿವಿಧ ತೀರ್ಪುಗಳನ್ನು ಪರಿಶೀಲಿಸಿದರು.
ಸೆಕ್ಷನ್ 17ಎ ಕಾಯಿದೆಯ ಭಾಗವಾಗದೆ ಇದ್ದ ವೇಳೆ ಅನಿಲ್ ಕುಮಾರ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ ಎಂದು ನ್ಯಾಯಾಲಯ ಹೇಳಿದೆ.
ಈ ಹಿನ್ನೆಲೆಯಲ್ಲಿ ಸಂಪೂರ್ಣ ಸಮಸ್ಯೆಯನ್ನು ಮರುಪರಿಶೀಲಿಸಬೇಕಾಗಿದೆ ಎಂದು ನ್ಯಾಯಾಲಯವು ಹೇಳಿದ ನ್ಯಾಯಾಲಯ ದ್ವಿಸದಸ್ಯ ಪೀಠದ ತೀರ್ಪು ನೀಡುವುದಕ್ಕೆ ಸಂಬಂಧಿಸಿದಂತೆ ಕೆಲ ಪ್ರಶ್ನೆಗಳನ್ನು ಉಲ್ಲೇಖಿಸಿದೆ.