ಪ್ರಧಾನಿ ಮೋದಿ ಪದವಿ ಮಾಹಿತಿಯನ್ನು ನ್ಯಾಯಾಲಯಕ್ಕೆ ತೋರಿಸಬಹುದೇ ವಿನಾ ಅಪರಿಚಿತರಿಗಲ್ಲ: ದೆಹಲಿ ವಿಶ್ವವಿದ್ಯಾಲಯದ ವಾದ

ಪ್ರಧಾನಿ ಮೋದಿಯವರ ಪದವಿ ವಿವರ ಬಹಿರಂಗಪಡಿಸುವುದಕ್ಕೆ ಸಂಬಂಧಿಸಿದ ಅರ್ಜಿಯ ತೀರ್ಪನ್ನು ಇಂದು ನ್ಯಾಯಾಲಯ ಕಾಯ್ದಿರಿಸಿತು.
ಪ್ರಧಾನಿ ಮೋದಿ ಪದವಿ ಮಾಹಿತಿಯನ್ನು ನ್ಯಾಯಾಲಯಕ್ಕೆ ತೋರಿಸಬಹುದೇ ವಿನಾ ಅಪರಿಚಿತರಿಗಲ್ಲ: ದೆಹಲಿ ವಿಶ್ವವಿದ್ಯಾಲಯದ ವಾದ
Published on

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪದವಿ ಪ್ರಮಾಣ ಪತ್ರದ ಪ್ರತಿಗಳನ್ನು ನ್ಯಾಯಾಲಯಕ್ಕೆ ತೋರಿಸಬಹುದೇ ವಿನಾ ಅಪರಿಚಿತರು ಅದನ್ನು ಪರಿಶೀಲಿಸುವಂತಿಲ್ಲ ಎಂದು ದೆಹಲಿ ವಿಶ್ವವಿದ್ಯಾಲಯ ಗುರುವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.

ಮಾಹಿತಿ ಹಕ್ಕು ಕಾಯಿದೆಯಡಿ ಅರ್ಜಿದಾರರಿಗೆ ಮೋದಿ ಅವರ ಪದವಿಗೆ ಸಂಬಂಧಿಸಿದ ಮಾಹಿತಿ ಒದಗಿಸುವಂತೆ ಕೇಂದ್ರ ಮಾಹಿತಿ ಆಯೋಗ (ಸಿಐಸಿ) ನೀಡಿದ್ದ ಆದೇಶ ಪ್ರಶ್ನಿಸಿ ದೆಹಲಿ ವಿಶ್ವವಿದ್ಯಾಲಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಅವರು ನ್ಯಾಯಮೂರ್ತಿ ಸಚಿನ್ ದತ್ತ ಅವರ ಮುಂದೆ ಈ ವಿಚಾರ ತಿಳಿಸಿದರು.

Also Read
ಪ್ರಧಾನಿ ಮೋದಿ ಪದವಿ ವಿವಾದ: ಕೇಜ್ರಿವಾಲ್‌ಗೆ ನೀಡಿದ್ದ ಸಮನ್ಸ್ ಆದೇಶ ಎತ್ತಿ ಹಿಡಿದ ಸುಪ್ರೀಂ

“ವಿದ್ಯಾರ್ಥಿಯೊಬ್ಬರ ಪದವಿ ವಿವರ ಕೇಳಲಾಗುತ್ತಿದ್ದು ಅವರು ದೇಶದ ಪ್ರಧಾನಿಯಾಗಿದ್ದಾರೆ. ನಮ್ಮಲ್ಲಿ (ದೆಹಲಿ ವಿವಿ) ಮುಚ್ಚಿಡಲು ಏನೂ ಇಲ್ಲ. ವರ್ಷವಾರು ರಿಜಿಸ್ಟರ್ ನಮ್ಮ ಬಳಿ ಇದೆ, ಅಲ್ಲಿ ಎಲ್ಲವನ್ನೂ ಉಲ್ಲೇಖಿಸಲಾಗಿದೆ. 1978ರಲ್ಲಿ ಪಡೆದ ಬಿಯ ಪದವಿಯ ಮೂಲ ದಾಖಲೆಯನ್ನು ನ್ಯಾಯಾಲಯಕ್ಕೆ ನೀಡಲು ವಿವಿಗೆ ಯಾವುದೇ ಆಕ್ಷೇಪಣೆ ಇಲ್ಲ.ಅದನ್ನು ಪ್ರದರ್ಶಿಸುವುದಕ್ಕೂ ಯಾವುದೇ ಹಿಂಜರಿಕೆ ಇಲ್ಲ. ಆದರೆ ಪ್ರಚಾರಕ್ಕಾಗಿ ಅಥವಾ ಕೆಲವು ಪರೋಕ್ಷ ರಾಜಕೀಯ ಉದ್ದೇಶಕ್ಕಾಗಿ ಅಪರಿಚಿತರು ಅದನ್ನು ಪರಿಶೀಲಿಸಲು ವಿವಿಯ ದಾಖಲೆಗಳನ್ನು ಒದಗಿಸುವುದಿಲ್ಲ” ಎಂದು ಮೆಹ್ತಾ ವಾದಿಸಿದರು.

ಪ್ರಕರಣದ ತೀರ್ಪನ್ನು ನ್ಯಾಯಾಲಯ ಕಾಯ್ದಿರಿಸಿತು. ಈ ಹಿಂದೆ ವಿವಿಧ ಪಕ್ಷಕಾರರ ವಾದವನ್ನು ನ್ಯಾಯಾಲಯ ಆಲಿಸಿತ್ತು.

ದೆಹಲಿಯ ಮಾಜಿ ಮುಖ್ಯಮಂತ್ರಿ  ಅರವಿಂದ್ ಕೇಜ್ರಿವಾಲ್ 2016 ರಲ್ಲಿ ಪ್ರಧಾನಿ ಮೋದಿಯವರ ತಮ್ಮ ಶೈಕ್ಷಣಿಕ ಪದವಿಗಳ ಬಗ್ಗೆ ಸ್ಪಷ್ಟನೆ ನೀಡಬೇಕು ಮತ್ತು ಅವುಗಳನ್ನು ಬಹಿರಂಗಪಡಿಸಬೇಕು ಎಂದು ದಾವೆ ಹೂಡಿದ್ದರು. ತಾನು 1978 ರಲ್ಲಿ ಡಿಯುನಿಂದ ಬಿಎ ರಾಜ್ಯಶಾಸ್ತ್ರ ಕೋರ್ಸ್‌ನಲ್ಲಿ ಪದವಿ ಪಡೆದಿರುವುದಾಗಿ ಮೋದಿ ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ  ವಿವರಿಸಿದ್ದರು.

ತರುವಾಯ, ದೆಹಲಿ ವಿಶ್ವವಿದ್ಯಾಲಯದಿಂದ ಪ್ರಧಾನಿ ಮೋದಿಯವರ ಪದವಿಯ ವಿವರಗಳನ್ನು ಕೋರಿ ಆರ್‌ಟಿಐ ಅಡಿ ಆಮ್ ಆದ್ಮಿ ಪಕ್ಷದ ಬೆಂಬಲಿಗ ನೀರಜ್ ಶರ್ಮಾ ಅವರು ಅರ್ಜಿ ಸಲ್ಲಿಸಿದ್ದರು. ಆದರೆ ಈ ಮಾಹಿತಿ ಖಾಸಗಿಯಾಗಿದ್ದು ಸಾರ್ವಜನಿಕ ಹಿತಾಸಕ್ತಿಗೆ ಯಾವುದೇ ಸಂಬಂಧವಿಲ್ಲ ಎಂದ ವಿವಿ ಪದವಿ ವಿವರ ಬಹಿರಂಗಪಡಿಸಲು ನಿರಾಕರಿಸಿತು.

Also Read
ಪ್ರಧಾನಿ ಮೋದಿ ಪದವಿ ವಿವಾದ: ಮಾನನಷ್ಟ ಮೊಕದ್ದಮೆ ಪ್ರಶ್ನಿಸಿ ಕೇಜ್ರಿವಾಲ್, ಸಂಜಯ್‌ ಸಲ್ಲಿಸಿದ್ದ ಅರ್ಜಿ ತಿರಸ್ಕಾರ

ಡಿಸೆಂಬರ್ 2016 ರಲ್ಲಿ, ಶರ್ಮಾ ವಿಶ್ವವಿದ್ಯಾಲಯದ ಪ್ರತಿಕ್ರಿಯೆಯ ವಿರುದ್ಧ ಸಿಐಸಿಗೆ ಅರ್ಜಿ ಸಲ್ಲಿಸಿದರು. ಮಾಹಿತಿ ಆಯುಕ್ತ ಪ್ರೊ ಎಂ ಆಚಾರ್ಯುಲು ಅವರು 1978ರಲ್ಲಿ ಬಿ ಎ ಪದವಿ ಪಡೆದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ವಿವರವುಳ್ಳ ರಿಜಿಸ್ಟರ್‌ಅನ್ನು ನೀಡುವಂತೆ ಅದೇಶಿಸಿದ್ದರು. ಈ ನಿರ್ಧಾರ ಪ್ರಶ್ನಿಸಿ ವಿವಿ ಜನವರಿ 23, 2017ರಂದು ಹೈಕೋರ್ಟ್‌ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ್ದ ನ್ಯಾಯಾಲಯ ಜನವರಿ 2017ರಲ್ಲಿ ಸಿಐಸಿ ಆದೇಶಕ್ಕೆ ತಡೆ ನೀಡಿತ್ತು.

ಗುರುವಾರ ನಡೆದ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ಡಿಯು ಪರವಾಗಿ ಹಾಜರಾದ ಎಸ್‌ಜಿ ಮೆಹ್ತಾ, ಮಾಹಿತಿ ಅರಿಯುವ ಹಕ್ಕು ಅನಿಯಂತ್ರಿತ ಹಕ್ಕಲ್ಲ ಎಂದು ವಾದಿಸಿದರು. ಆರ್‌ಟಿಐ ಕಾಯಿದೆಯಡಿ ವೈಯಕ್ತಿಕ ಮಾಹಿತಿ  ಕೇಳುವಂತಿಲ್ಲ. ಸಾರ್ವಜನಿಕ ಹುದ್ದೆಯಲ್ಲಿರುವವರನ್ನು ಬೆದರಿಸಲು ಆರ್‌ಟಿಐ ಕಾಯಿದೆಯನ್ನು ಬಳಸುವಂತಿಲ್ಲ. ಅಲ್ಲದೆ ಆರ್‌ಟಿಐ ಅರ್ಜಿದಾರರು ಆರ್‌ಟಿಐ ಕಾಯ್ದೆಯನ್ನು ಅಣಕಿಸುತ್ತಿದ್ದಾರೆ ಎಂದು ಮೆಹ್ತಾ ವಾದ ಮಂಡನೆ ಮಾಡಿದರು.

ಮುಖ್ಯವಾಗಿ, "ಇದರಲ್ಲಿ ನಿಮಗೆ (ಅರ್ಜಿದಾರರಿಗೆ) ಯಾವ ಹಿತಾಸಕ್ತಿ ಇದೆ ಎನ್ನುವುದನ್ನು ಅಧಿಕಾರಿಗಳು ನಿರ್ಧರಿಸಬೇಕಾಗುತ್ತದೆ. ಸಾರ್ವಜನಿಕ ಹಿತಾಸಕ್ತಿಯಿಂದ ಇದನ್ನು ನೀಡಬೇಕು ಎನ್ನುತ್ತಿದ್ದಾರೆ. ಆದರೆ, 1978ರಲ್ಲಿ ಯಾರೋ ಒಬ್ಬರು ಉತ್ತೀರ್ಣರಾಗಿದ್ದಾರೆ. ಆ ಮಾಹಿತಿ ಅವರ ಈಗಿನ ಸಾರ್ವಜನಿಕ ಕರ್ತವ್ಯಕ್ಕೂ ಸಂಬಂಧಿಸಿದ್ದಲ್ಲ... ನೀವು ಇದನ್ನು ರಾಜಕೀಯ ಉದ್ದೇಶಕ್ಕಾಗಿ ಕೋರುತ್ತಿದ್ದೀರಿ," ಎಂದು ಎಸ್‌ಜಿ ಮೆಹ್ತಾ ವಾದಿಸಿದರು.

ಮುಂದುವರೆದು, "ನಮ್ಮ ಬಳಿ ದಾಖಲೆ ಇದೆ, ಅದರೆ ನಾವು ಅದನ್ನು ನೀಡಬೇಕೆಂದು ಶಾಸನಾತ್ಮಕವಾಗಿಯೇನೂ ಕಟ್ಟುಪಾಡಿಲ್ಲ. ಅದನ್ನು ನಾವು ನ್ಯಾಯಮೂರ್ತಿಗಳಿಗೆ ತೋರಿಸುತ್ತೇವೆ. ನಾವು ಇದನ್ನು (ಆರ್‌ಟಿಐ ಕೋರಿಕೆ) ತಾತ್ವಿಕವಾಗಿ ವಿರೋಧಿಸಬೇಕಾಗುತ್ತದೆ, ಇಲ್ಲವಾದಲ್ಲಿ ಲಕ್ಷಾಂತರ ಅರ್ಜಿಗಳ ಪ್ರವಾಹವೇ ಹರಿದುಬರಲಿದೆ" ಎಂದು ಮೆಹ್ತಾ ಆಕ್ಷೇಪಿಸಿದರು.

Kannada Bar & Bench
kannada.barandbench.com