ಫಲಾನುಭವಿಗಳ 22 ಲಕ್ಷ ಪಡಿತರ ಚೀಟಿ ರದ್ದತಿ: ತೆಲಂಗಾಣ ಮುಖ್ಯ ಕಾರ್ಯದರ್ಶಿಯಿಂದ ವರದಿ ಕೇಳಿದ ಸುಪ್ರೀಂ ಕೋರ್ಟ್

ಲಾಕ್‌ಡೌನ್‌ ಇದೆ ಎಂದು ಹೇಳಿ ಪರಿಹಾರಕ್ಕಾಗಿ ಸಲ್ಲಿಸಿದ್ದ ಮೂಲ ಮನವಿ ವಜಾಗೊಳಿಸಿದ ಹೈಕೋರ್ಟ್ ಆದೇಶ ನಿಗೂಢ ಎಂದು ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್ ಮತ್ತು ಬಿಆರ್ ಗವಾಯಿ ಅವರ ಪೀಠ ಹೇಳಿದೆ.
Ration
Ration
Published on

ಪೂರ್ವ ಸೂಚನೆ ನೀಡದೆ ಫಲಾನುಭವಿಗಳ 22 ಲಕ್ಷ ಪಡಿತರ ಚೀಟಿ ರದ್ದುಗೊಳಿಸಿದ ತೆಲಂಗಾಣ ಸರ್ಕಾರವನ್ನು ಸುಪ್ರೀಂ ಕೋರ್ಟ್ ಬುಧವಾರ ತರಾಟೆಗೆ ತೆಗೆದುಕೊಂಡಿತು [ಎಸ್‌ಕ್ಯೂ ಮಸೂದ್‌ ಮತ್ತು ತೆಲಂಗಾಣ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

“ಕಾರ್ಡ್‌ಗಳನ್ನು ರದ್ದುಗೊಳಿಸಿರುವುದಕ್ಕೆ ಕಾರಣ ತಿಳಿಸಬೇಕಿತ್ತು. ಹಾಗೆ ಮಾಡಿದ್ದರೆ ಪರಿಹಾರ ಕ್ರಮಗಳಿಗಾಗಿ ಫಲಾನುಭವಿಗಳು ಅಧಿಕಾರಿಗಳನ್ನು ಸಂಪರ್ಕಿಸಬಹುದಿತ್ತು” ಎಂದ ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್ ಮತ್ತು ಬಿ ಆರ್ ಗವಾಯಿ ಅವರಿದ್ದ ಪೀಠ “ಅವರಿಗೆ ಪಡಿತರ ತಪ್ಪಿಸಬಹುದೇ? ಸಾಮೂಹಿಕ ರದ್ದತಿಗೆ ಮುನ್ನ ನೋಟಿಸ್‌ ನೀಡಲು ಏನು ಸಮಸ್ಯೆ? ಬೋಗಸ್‌ ಹೌದೋ ಅಲ್ಲವೋ ಎಂದು ತಿಳಿಯದೆ ನೀವು ಏಕಪಕ್ಷೀಯವಾಗಿ ಹೇಗೆ ರದ್ದುಗೊಳಿಸುತ್ತೀರಿ?” ಎಂದು ಪ್ರಶ್ನೆಗಳ ಮಳೆಗರೆಯಿತು.

ಹೀಗೆ ರದ್ದತಿ ಮಾಡಿರುವುದರ ಉದ್ದೇಶ ಬಡವರಿಗೆ ಮಾತ್ರ ಸವಲತ್ತು ತಲಪುವಂತೆ ಮಾಡುವುದಾಗಿದೆ. ಅನರ್ಹರ ಕೈಗೆ ಸೌಲಭ್ಯ ಸಿಗದಂತೆ ನೋಡಿಕೊಳ್ಳುವುದಾಗಿದೆ ಎಂದು ಸರ್ಕಾರದ ಪರ ವಾದ ಮಂಡಿಸಿದ ವಕೀಲ ಪಾಲ್ವಾಯಿ ವೆಂಕಟ್ ರೆಡ್ಡಿ ತಿಳಿಸಿದರು. ಆಗ ನ್ಯಾಯಾಲಯ “ಜೊಳ್ಳಿನಿಂದ ಕಾಳುಗಳನ್ನು ಬೇರ್ಪಡಿಸಬೇಕು” ಎಂದು ಹೇಳಿತು.

Also Read
ಪಡಿತರ ಸೌಲಭ್ಯ ಪಡೆಯಲು ಆಧಾರ್ ಕಡ್ಡಾಯ ಪ್ರಶ್ನಿಸಿದ್ದ ಪಿಐಎಲ್‌ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ನಂತರ ಪಡಿತರ ಚೀಟಿ ರದ್ದತಿ ಕುರಿತು ವರದಿ ಸಲ್ಲಿಸುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಪೀಠ ಸೂಚಿಸಿತು. ಈ ನಿಟ್ಟಿನಲ್ಲಿ ಅಗತ್ಯ ಕ್ಷೇತ್ರ ಕಾರ್ಯ ನಡೆಸುವಂತೆ ಸರ್ಕಾರಕ್ಕೂ ನಿರ್ದೇಶಿಸಿತು. ಪಡಿತರ ಚೀಟಿ ರದ್ದತಿ ಮಾಡಿದ್ದನ್ನು ತೆಲಂಗಾಣ ಹೈಕೋರ್ಟ್‌ ಎತ್ತಿ ಹಿಡಿದಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು.

ಇದೇ ವೇಳೆ “ಲಾಕ್‌ಡೌನ್‌ ಇದೆ ಎಂದು ಹೇಳಿ ಪರಿಹಾರಕ್ಕಾಗಿ ಸಲ್ಲಿಸಿದ್ದ ಮೂಲ ಮನವಿ ವಜಾಗೊಳಿಸಿದ ಹೈಕೋರ್ಟ್‌ ಆದೇಶ ನಿಗೂಢವಾಗಿದೆ” ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿತು.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವೆಸ್‌ “ಸಂತ್ರಸ್ತ ಫಲಾನುಭವಿಗಳಿಗೆ ಪಡಿತರ ಚೀಟಿಯನ್ನು ಏಕೆ ರದ್ದುಗೊಳಿಸಲಾಗಿದೆ ಎಂಬುದಕ್ಕೆ ಸ್ಪಷ್ಟ ಕಾರಣ ನೀಡಿಲ್ಲ. ನೋಟಿಸ್ ನೀಡದೆ ಪಡಿತರ ಚೀಟಿ ರದ್ದುಗೊಳಿಸಿರುವುದು ಸಹಜ ನ್ಯಾಯದ ಉಲ್ಲಂಘನೆ" ಎಂದು ತಿಳಿಸಿದರು. ಸರ್ಕಾರಿ ಆದೇಶದ ಮೇರೆಗೆ ಹೊಸ ಪಡಿತರ ಚೀಟಿಗಳನ್ನು ನೀಡಲಾಗಿದ್ದು, ಕಾರ್ಡ್‌ಗಳ ಸಂಖ್ಯೆಯೂ ಹೆಚ್ಚಾಗಿದೆ ಎಂದು ಸರ್ಕಾರದ ಪರ ವಕೀಲರು ಹೇಳಿದ್ದನ್ನು ನ್ಯಾಯಾಲಯ ಒಪ್ಪಲಿಲ್ಲ. ರದ್ದತಿಗೂ ಮುನ್ನ ವಿವಾದಿತ ಪಡಿತರ ಚೀಟಿದಾರರ ಕ್ಷೇತ್ರ ಪರಿಶೀಲನೆ ನಡೆಸಬೇಕಿತ್ತು ಎಂದು ಅದು ಹೇಳಿತು. ಮೂರು ವಾರಗಳ ನಂತರ ಪ್ರಕರಣದ ವಿಚಾರಣೆ ನಡೆಯಲಿದೆ.

Kannada Bar & Bench
kannada.barandbench.com