ಉದ್ಯೋಗ, ಶಿಕ್ಷಣದಲ್ಲಿ ತೃತೀಯ ಲಿಂಗಿಗಳಿಗೆ ಮೀಸಲಾತಿ ನೀಡಲು ಸಾಧ್ಯವಿಲ್ಲ ಎಂದ ಮಹಾರಾಷ್ಟ್ರ ಆಡಳಿತ ನ್ಯಾಯಮಂಡಳಿ

ಆದಾಗ್ಯೂ, ತೃತೀಯ ಲಿಂಗಿ ಅರ್ಜಿದಾರರಿಗೆ ಕಟ್-ಆಫ್ ಅಂಕಗಳನ್ನು ತಲುಪಲು ಗ್ರೇಸ್ ಅಂಕಗಳನ್ನು ನೀಡುವಂತೆ ಅಥವಾ ಒಟ್ಟು ಅಂಕಗಳ 50% ವರೆಗೆ ತಲುಪಿದರೆ ಅವರನ್ನು ಹುದ್ದೆಗೆ ಪರಿಗಣಿಸುವಂತೆ ನ್ಯಾಯಮಂಡಳಿ ರಾಜ್ಯಕ್ಕೆ ನಿರ್ದೇಶನ ನೀಡಿತು.
 ತೃತೀಯ ಲಿಂಗಿಗಳು ಮತ್ತು ಮಹಾರಾಷ್ಟ್ರ ನಕ್ಷೆ
ತೃತೀಯ ಲಿಂಗಿಗಳು ಮತ್ತು ಮಹಾರಾಷ್ಟ್ರ ನಕ್ಷೆ

ರಾಜ್ಯದಲ್ಲಿ ಸಾರ್ವಜನಿಕ ಉದ್ಯೋಗ ಮತ್ತು ಶಿಕ್ಷಣದಲ್ಲಿ ತೃತೀಯ ಲಿಂಗಿಗಳಿಗೆ ಮೀಸಲಾತಿ ನೀಡಬೇಕೆನ್ನುವ ಕೋರಿಕೆಯನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಮಹಾರಾಷ್ಟ್ರ ಆಡಳಿತ ನ್ಯಾಯಮಂಡಳಿ (ಎಂಎಟಿ) ಬುಧವಾರ ತೀರ್ಪು ನೀಡಿದೆ [ಆರ್ಯ ಪೂಜಾರಿ ವಿರುದ್ಧ ಮಹಾರಾಷ್ಟ್ರ ರಾಜ್ಯ ಮತ್ತು ಸಂಬಂಧಿತ ವಿಷಯಗಳು].

ಸುಪ್ರೀಂ ಕೋರ್ಟ್‌ನ ಇಂದ್ರಾ ಸಾಹ್ನಿ ತೀರ್ಪಿನಿಂದ ಕಡ್ಡಾಯಗೊಳಿಸಲಾದ ಮೀಸಲಾತಿಯ ಮೇಲಿನ 50% ಮಿತಿಗಿಂತ ಹೆಚ್ಚುವರಿಯಾಗಿ, ರಾಜ್ಯದೊಳಗಿನ ಲಂಬ ಮೀಸಲಾತಿ 62% ಕ್ಕೆ ತಲುಪಿರುವುದರಿಂದ, ತೃತೀಯ ಲಿಂಗಿಗಳಿಗೆ ಮೀಸಲಾತಿ ನೀಡಲು ಸಾಧ್ಯವಿಲ್ಲ ಎಂಬ ರಾಜ್ಯದ ವಾದವನ್ನು ಅಧ್ಯಕ್ಷೆ ನ್ಯಾಯಮೂರ್ತಿ ಮೃದುಲಾ ಭಟ್ಕರ್ ಮತ್ತು ಆಡಳಿತಾತ್ಮಕ ಸದಸ್ಯೆ ಮೇಧಾ ಗಾಡ್ಗೀಳ್ ಅವರ ಕೋರಮ್ ಒಪ್ಪಿಕೊಂಡಿದೆ.

ಆದಾಗ್ಯೂ, ತೃತೀಯ ಲಿಂಗಿಗಳಿಗೆ ಸಾರ್ವಜನಿಕ ಉದ್ಯೋಗಕ್ಕಾಗಿ ಅವಕಾಶಗಳನ್ನು ಒದಗಿಸಲು ಕಲ್ಯಾಣ ಯೋಜನೆಗಳು ಮತ್ತು ವಿವಿಧ ವಿಧಾನಗಳನ್ನು ತರಲು ರಾಜ್ಯವು ಬದ್ಧವಾಗಿದೆ ಎಂದು ನ್ಯಾಯಮಂಡಳಿ ಒತ್ತಿಹೇಳಿತು.

"ಸಾರ್ವಜನಿಕ ಉದ್ಯೋಗದಲ್ಲಿ ಅವರಿಗೆ ಅವಕಾಶವನ್ನು ಒದಗಿಸಲು ಅವರ ಪ್ರತ್ಯೇಕ ಗುರುತನ್ನು ಅಂಗೀಕರಿಸುವುದು ಮಾತ್ರವೇ ಸಾಕಾಗುವುದಿಲ್ಲ. ತೃತೀಯ ಲಿಂಗಿಗಳ ಕಾಯಿದೆಯು ಪ್ರಗತಿಪರ ಆಯಾಮವನ್ನು ಒದಗಿಸುತ್ತದೆ, ಅದೇ ರೀತಿ ಸರ್ಕಾರ ಹಾಗೂ ಆಡಳಿತಾಂಗದಿಂದ ಸಂವೇದನಾಶೀಲ ಕಾರ್ಯವಿಧಾನವನ್ನು ಬೇಡುತ್ತದೆ. ಮಹಾರಾಷ್ಟ್ರ ರಾಜ್ಯವು ತನ್ನ ಚಿಂತನೆ ಮತ್ತು ಸಂಸ್ಕೃತಿಯಲ್ಲಿ ಬಹಳ ಪ್ರಗತಿಪರ ಎಂದು ಸಾಬೀತಾಗಿದೆ. ಆದ್ದರಿಂದ, ಈ ತೃತೀಯ ಲಿಂಗಿ ಅರ್ಜಿದಾರರಿಗೆ ಸರ್ಕಾರಿ ವಲಯದಲ್ಲಿ ಉದ್ಯೋಗ ಪಡೆಯಲು ಅನುವು ಮಾಡಿಕೊಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು ಸರ್ಕಾರದ ಕಡೆಯಿಂದ ಅಪೇಕ್ಷಣೀಯವಾಗಿದೆ" ಎಂದು ಮಂಡಳಿ ಹೇಳಿದೆ.

ಹೀಗಾಗಿ, ತೃತೀಯ ಲಿಂಗಿ ಅರ್ಜಿದಾರರಿಗೆ ಕಟ್-ಆಫ್ ಅಂಕಗಳನ್ನು ತಲುಪಲು ಅಗತ್ಯವಾದ ಕೃಪಾಂಕಗಳನ್ನು ನೀಡುವಂತೆ ಅಥವಾ ಒಟ್ಟು ಅಂಕಗಳ 50% ವರೆಗೆ ತಲುಪಿದರೆ ಹುದ್ದೆಗೆ ಅರ್ಜಿದಾರರನ್ನು ಪರಿಗಣಿಸುವಂತೆ ಅದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು.

"ಸಾರ್ವಜನಿಕ ಉದ್ಯೋಗದಲ್ಲಿ ತೊಡಗುವುದು ತೃತೀಯ ಲಿಂಗಿಗಳಿಗೆ ವೈಕಲ್ಯತೆಯೊಂದಿಗೆ ಸ್ಪರ್ಧೆ ಎದುರಿಸುವ ಸವಾಲಿನಂತಿದೆ. ಅವರು ದೈಹಿಕವಾಗಿ ಅಂಗವಿಕಲರಲ್ಲದಿದ್ದರೂ, ಸಮರ್ಥ ವ್ಯಕ್ತಿಗಳಾಗಿದ್ದರೂ, ಸಮಾಜ, ಕುಟುಂಬ, ಶಿಕ್ಷಣದ ವಿವಿಧ ಹಂತಗಳಲ್ಲಿ ಅವರೆಡೆಗೆ ತೋರುವ ನಕಾರಾತ್ಮಕತೆಯಿಂದಾಗಿ ಅವರ ಚಟುವಟಿಕೆಗಳು, ಕ್ರಿಯೆಗಳು, ಬೆಳವಣಿಗೆ ಸ್ಥಗಿತಗೊಂಡಿದೆ" ಎಂದು ಆದೇಶದಲ್ಲಿ ತಿಳಿಸಿದೆ.

ಕೇಂದ್ರ ಸರ್ಕಾರ ಹೊರಡಿಸಿದ 2020 ರ ಮಾರ್ಗಸೂಚಿಗಳಿಗೆ ಅನುಸಾರವಾಗಿ ತೃತೀಯ ಲಿಂಗಿಗಳು ಸರ್ಕಾರಿ ಹುದ್ದೆಗಳಲ್ಲಿ ಉದ್ಯೋಗ ಪಡೆಯಲು ಅನುವು ಮಾಡಿಕೊಡುವ ನಿಯಮಗಳನ್ನು ರೂಪಿಸುವಂತೆ ಬಾಂಬೆ ಹೈಕೋರ್ಟ್ 2022 ರ ಡಿಸೆಂಬರ್‌ನಲ್ಲಿ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು.

ಉದ್ಯೋಗ ಮತ್ತು ಶಿಕ್ಷಣದಲ್ಲಿ ತೃತೀಯ ಲಿಂಗಿಗಳ ನೇಮಕಾತಿಗಾಗಿ ರಾಜ್ಯವು ಮಾರ್ಚ್ 3, 2023 ರಂದು ಸರ್ಕಾರದ ನಿರ್ಣಯವನ್ನು (ಜಿಆರ್) ಹೊರಡಿಸಿತ್ತು.

ಸಾಮಾಜಿಕ ನ್ಯಾಯ ಇಲಾಖೆಯ ಅಡಿಯಲ್ಲಿ ಪ್ರಾಥಮಿಕವಾಗಿ ವಿವಿಧ ರಾಜ್ಯ ಇಲಾಖೆಗಳ ಕಾರ್ಯದರ್ಶಿಗಳು ಮತ್ತು ಮನಶ್ಶಾಸ್ತ್ರಜ್ಞರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿದೆ ಎಂದು ಜಿಆರ್ ಉಲ್ಲೇಖಿಸಿದೆ.

ಆದಾಗ್ಯೂ, ಶಿಕ್ಷಣ ಮತ್ತು ಉದ್ಯೋಗದಲ್ಲಿ ತೃತೀಯ ಲಿಂಗಿಗಳಿಗೆ ಹೆಚ್ಚುವರಿ ಮೀಸಲಾತಿ (ಸಮತಲ/ಲಂಬ) ಒದಗಿಸುವುದು ಪ್ರಸ್ತುತ ಕಷ್ಟ ಎಂದು ಅದು ಹೈಕೋರ್ಟ್‌ಗೆ ತಿಳಿಸಿದೆ .

[ಆದೇಶ ಓದಿ]

Attachment
PDF
Arya Pujari v. State of Maharashtra & Ors. (MAT judgment).pdf
Preview

Related Stories

No stories found.
Kannada Bar & Bench
kannada.barandbench.com