ಒಂದು ಕ್ಷೇತ್ರದ ಮತಪತ್ರ ಬೇರೆ ಕ್ಷೇತ್ರದಲ್ಲಿ ಬಳಕೆ; ಚಿಹ್ನೆ ಮೂಲಕ ಮತದಾರರು ಅಭ್ಯರ್ಥಿ ಗುರುತಿಸುತ್ತಾರೆ: ಹೈಕೋರ್ಟ್‌

ಮತಪತ್ರಗಳು ನಿರಾಕರಿಸಲಾಗದ ಪುರಾವೆಯಾಗಿವೆ. ಅಧಿಕಾರಿಗಳೇ ನೀಡಿದ ಮತಪತ್ರಗಳನ್ನು ಬಳಸಿ ಮತದಾರರು ಮತ ಚಲಾಯಿಸಿದ್ದಾರೆ. ಇದರಿಂದ ಮತಪತ್ರಗಳನ್ನು ನಕಲು ಮಾಡಲಾಗಿದೆ ಅಥವಾ ಅಕ್ರಮವಾಗಿದೆ ಎಂದು ಹೇಳಲಾಗದು ಎಂದ ಪೀಠ.
Justice Krishna S Dixit and Karnataka HC
Justice Krishna S Dixit and Karnataka HC
Published on

ಚುನಾವಣೆಯಲ್ಲಿ ಒಂದು ಕ್ಷೇತ್ರದ ಮತಪತ್ರಗಳು ಬೇರೊಂದು ಕ್ಷೇತ್ರದಲ್ಲಿ ಬಳಕೆಯಾಗಿವೆ ಎಂಬ ಕಾರಣಕ್ಕೆ ಆ ಮತಪತ್ರಗಳಿಗೆ ಚಲಾವಣೆಯಾಗಿರುವ ಮತಗಳನ್ನು ಅಸಿಂಧುಗೊಳಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಅಭಿಪ್ರಾಯಪಟ್ಟಿದೆ. ಆ ಮೂಲಕ ಚುನಾವಣಾ ನ್ಯಾಯಮಂಡಳಿಯು ಸೋತ ಅಭ್ಯರ್ಥಿಯ ಪರವಾಗಿ ನೀಡಿದ್ದ ತೀರ್ಪನ್ನು ಎತ್ತಿಹಿಡಿದಿದೆ.

ಹಾಸನ ತಾಲ್ಲೂಕಿನ ಕರ್ಲೆ ಗ್ರಾಮ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಪ್ರಭಾಮಣಿ ಎಂಬವರು ಸಲ್ಲಿಸಿದ್ದ ಮನವಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ನೇತೃತ್ವದ ಏಕಸದಸ್ಯ ಪೀಠವು ಅರ್ಜಿ ವಜಾ ಮಾಡಿದೆ.

“ಇದೊಂದು ಅಪರೂಪದ ಪ್ರಕರಣ. ಈ ಪ್ರಕರಣದಲ್ಲಿ ಗೆಲುವಿನ ಅಂತರಾ ತೀರಾ ಕಡಿಮೆ ಇದೆ. ಹೀಗಾಗಿ, ಇದರಲ್ಲಿ ಮತಪತ್ರಗಳ ಪರಿಶೀಲನೆಗೆ ಹೆಚ್ಚಿನ ಮಹತ್ವವಿದೆ. ಪ್ರಕರಣದಲ್ಲಿ ಬೇರೊಂದು ಕ್ಷೇತ್ರಕ್ಕೆ ಸಂಬಂಧಿಸಿದ ಮತಪತ್ರಗಳು ಬಳಕೆಯಾಗಿರುವುದು ದಾಖಲೆಗಳಿಂದ ಸ್ಪಷ್ಟವಾಗಿದೆ. ಆ ಮತಪತ್ರಗಳಲ್ಲೂ ಒಂದೇ ರೀತಿಯ ಚುನಾವಣಾ ಚಿಹ್ನೆಗಳಿವೆ. ಚುನಾವಣಾಧಿಕಾರಿಗಳು ಪರಿಶೀಲನೆಯ ನಂತರ ಮತಚೀಟಿಗಳನ್ನು ಮತದಾರರಿಗೆ ನೀಡಿದ್ದಾರೆ. ಅದರಂತೆ ಮತದಾರರು ಮತ ಚಲಾವಣೆ ಮಾಡಿದ್ದಾರೆ” ಎಂದು ಪೀಠವು ಆದೇಶದಲ್ಲಿ ತಿಳಿಸಿದೆ.

“ಚುನಾವಣೆಯಲ್ಲಿ ಬಳಕೆ ಮಾಡಲಾದ ಬೇರೊಂದು ಕ್ಷೇತ್ರದ ಮತಪತ್ರಗಳನ್ನು ಅಧಿಕಾರಿಗಳು ಗುರುತು ಹಾಕಿದ್ದಾರೆ. ಮತಪತ್ರಗಳು ನಿರಾಕರಿಸಲಾಗದ ಪುರಾವೆಯಾಗಿವೆ. ಅಧಿಕಾರಿಗಳೇ ನೀಡಿದ ಮತಪತ್ರಗಳನ್ನು ಬಳಸಿ ಮತದಾರರು ಮತ ಚಲಾಯಿಸಿದ್ದಾರೆ. ಇದರಿಂದ ಮತಪತ್ರಗಳನ್ನು ನಕಲು ಮಾಡಲಾಗಿದೆ ಅಥವಾ ಅಕ್ರಮವಾಗಿದೆ ಎಂದು ಹೇಳಲಾಗದು. ಹೀಗಾಗಿ, ಆ ಮತಗಳನ್ನು ಅಸಿಂಧು ಎಂದು ಹೇಳಲಾಗದು. ಆ ಮತಗಳನ್ನು ಪರಿಗಣಿಸಿ ಹೇಮಲತಾ ಅವರನ್ನು ವಿಜಯಿ ಎಂದು ಘೋಷಿಸಿರುವುದು ಸರಿಯಾಗಿದೆ” ಎಂದು ಆದೇಶದಲ್ಲಿ ಪೀಠ ಹೇಳಿದೆ.

1999ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ ಕೇವಲ ಒಂದು ಮತದಿಂದ ಪತನವಾಗಿರುವ ಅಂಶವನ್ನು ಆದೇಶದಲ್ಲಿ ಉಲ್ಲೇಖಿಸಿರುವ ಹೈಕೋರ್ಟ್, “ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಂದು ಮತಕ್ಕೂ ಮಹತ್ವವಿದೆ” ಎಂದು ಅಭಿಪ್ರಾಯಪಟ್ಟಿದೆ.

Also Read
[ಗಾಂಜಾ ಸಾಗಣೆ] ಆರೋಪ ಪಟ್ಟಿ ಜೊತೆಗೆ ಎಫ್‌ಎಸ್‌ಎಲ್ ವರದಿ ಸಲ್ಲಿಸಿಲ್ಲ ಎಂದು ಜಾಮೀನು ನೀಡಲಾಗದು: ಹೈಕೋರ್ಟ್‌

ಪ್ರಕರಣದ ಹಿನ್ನೆಲೆ: 2021ರಲ್ಲಿ ಕರ್ಲೆ ಗ್ರಾಮ ಪಂಚಾಯಿತಿಗೆ ಚುನಾವಣೆ ನಡೆದಿತ್ತು. ಅಭ್ಯರ್ಥಿ ಪ್ರಭಾಮಣಿ 232 ಮತಗಳಿಸಿದ್ದರು. ಪ್ರತಿಸ್ಪರ್ಧಿ ಹೇಮಲತಾ 231 ಮತಗಳಿಸಿದ್ದರು. ಆದರೆ, ಬೇರೊಂದು ಕ್ಷೇತ್ರದ 4 ಮತಪತ್ರಗಳು ಆ ಕ್ಷೇತ್ರದಲ್ಲಿ ಬಳಕೆಯಾಗಿದ್ದವು. ಮತಪತ್ರಗಳನ್ನು ಬಳಸಿ ಹಾಕಿದ ನಾಲ್ಕು ಮತಗಳು ಹೇಮಲತಾ ಅವರಿಗೆ ಚಲಾವಣೆಯಾಗಿದ್ದವು. ಆದರೆ, ಬೇರೆ ಕ್ಷೇತ್ರದ ಮತಪತ್ರಗಳು ಎಂಬ ಕಾರಣಕ್ಕೆ ಅವುಗಳನ್ನು ಚುನಾವಣಾಧಿಕಾರಿಗಳು ಪರಿಗಣಿಸಿರಲಿಲ್ಲ. ಇದರಿಂದ ಹೇಮಲತಾ ಅವರು ಚುನಾವಣಾ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದರು.

ಚುನಾವಣಾ ನ್ಯಾಯಮಂಡಳಿಯು ಆ 4 ಮತಪತ್ರಗಳನ್ನು ಪರಿಗಣಿಸಿ, ಹೇಮಲತಾ ಅವರನ್ನು ವಿಜಯಿ ಎಂದು ಘೋಷಿಸಿತ್ತು. ಈ ಆದೇಶ ರದ್ದು ಕೋರಿ ಪ್ರಭಾಮಣಿ ಅವರು ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಈಗ ಅದನ್ನು ನ್ಯಾಯಾಲಯ ವಜಾ ಮಾಡಿದೆ.

Attachment
PDF
Prabhamani V. Hemalatha and others.pdf
Preview
Kannada Bar & Bench
kannada.barandbench.com