ಪ್ರಜಾಪ್ರಭುತ್ವ ಹೈಜಾಕ್‌ ಮಾಡಲು ಅವಕಾಶವಿಲ್ಲ: ರಾಜೇಗೌಡರ ಶೃಂಗೇರಿ ವಿಧಾನಸಭಾ ಸದಸ್ಯತ್ವ ಪುನರ್‌ ಸ್ಥಾಪಿಸಿದ ಸುಪ್ರೀಂ

ಮತ ಮರು ಎಣಿಕೆಗೂ ಮುನ್ನ ಇದ್ದ ಯಥಾಸ್ಥಿತಿಯನ್ನು ಕಾಪಾಡುವಂತೆ ಪಕ್ಷಕಾರರಿಗೆ ಸುಪ್ರೀಂ ಕೋರ್ಟ್‌ ನಿರ್ದೇಶಿಸಿದೆ. ಇದರರ್ಥ ರಾಜೇಗೌಡ ಶೃಂಗೇರಿ ಶಾಸಕರಾಗಿ ಮುಂದುವರಿಯಲಿದ್ದಾರೆ.
TD Rajegowda
TD Rajegowda
Published on

ಪ್ರಜಾಪ್ರಭುತ್ವವನ್ನು ಹೈಜಾಕ್‌ ಮಾಡಲು ಅವಕಾಶ ನೀಡುವುದಿಲ್ಲ ಎಂದಿರುವ ಸುಪ್ರೀಂ ಕೋರ್ಟ್‌, ಚಿಕ್ಕಮಗಳೂರಿನ ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಕಾಂಗ್ರೆಸ್‌ನ ಟಿ ಡಿ ರಾಜೇಗೌಡ ಮುಂದುವರಿಯಲಿದ್ದಾರೆ ಎಂದು ಸೋಮವಾರ ಮಹತ್ವದ ಆದೇಶ ಮಾಡಿದೆ.

ರಾಜೇಗೌಡರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪಿ ವಿ ಸಂಜಯ್ ಕುಮಾರ್‌ ಮತ್ತು ಕೆ ವಿನೋದ್‌ ಚಂದ್ರನ್‌ ಅವರ ವಿಭಾಗೀಯ ಪೀಠವು ಬಿಜೆಪಿ ಅಭ್ಯರ್ಥಿ ಡಿ ಎನ್‌ ಜೀವರಾಜ್‌ ವಿರುದ್ಧ ಗಂಭೀರ ಮಾತುಗಳನ್ನಾಡಿದೆ.

Justice Vinod Chandran and Justice PV Sanjay Kumar
Justice Vinod Chandran and Justice PV Sanjay Kumar

ಹೈಕೋರ್ಟ್‌ ನಿರ್ದೇಶದನಂತೆ ಅಂಚೆ ಮತ ಎಣಿಕೆಯ ನಂತರ ಬಿಜೆಪಿಯ ಜೀವರಾಜ್‌ ವಿಜೇತರಾಗಿದ್ದಾರೆ ಎಂಬ ನಿರ್ದೇಶನದ ಹೊರತಾಗಿಯೂ ರಾಜೇಗೌಡ ಶಾಸಕರಾಗಿ ಮುಂದುವರಿಯಲಿದ್ದಾರೆ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.

“ಪ್ರಜಾಪ್ರಭುತ್ವವನ್ನು ಈ ರೀತಿಯಲ್ಲಿ ಹೈಜಾಕ್‌ ಮಾಡಲು ಅವಕಾಶ ನೀಡಲಾಗದು” ಎಂದು ಪೀಠ ಮೌಖಿಕವಾಗಿ ಹೇಳಿದ್ದು, ಮತ ಮರು ಎಣಿಕೆಗೂ ಮುನ್ನ ಇದ್ದ ಯಥಾಸ್ಥಿತಿಯನ್ನು ಕಾಪಾಡುವಂತೆ ಪಕ್ಷಕಾರರಿಗೆ ನ್ಯಾಯಾಲಯ ನಿರ್ದೇಶಿಸಿದೆ. ಇದರರ್ಥ ರಾಜೇಗೌಡ ಶೃಂಗೇರಿ ಶಾಸಕರಾಗಿ ಮುಂದುವರಿಯಲಿದ್ದಾರೆ.

ರಾಜೇಗೌಡ ತಮ್ಮ ಆಯ್ಕೆ ಅಸಿಂಧುವನ್ನು ವಕೀಲ ತುಷಾರ್‌ ಗಿರಿ ಮೂಲಕ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. 279 ತಿರಸ್ಕೃತ ಮತಗಳನ್ನು ಮಾತ್ರ ಪರಿಶೀಲಿಸುವಂತೆ ಹೈಕೋರ್ಟ್‌ ನಿರ್ದೇಶಿಸಿತ್ತು. ಆದರೆ, ಚುನಾವಣಾಧಿಕಾರಿಯು ರಾಜೇಗೌಡ ಪರವಾಗಿದ್ದ 562 ಸಿಂಧುವಾದ ಮತಗಳನ್ನು ಅಕ್ರಮವಾಗಿ ಪರಿಗಣಿಸಿದ್ದಾರೆ ಎಂದು ವಾದಿಸಲಾಗಿತ್ತು.

ಜೀವರಾಜ್‌ ಮಾಡಿರುವ ಭ್ರಷ್ಟಾಚಾರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಅಭಿಪ್ರಾಯ ನೀಡಿರುವ ಹೈಕೋರ್ಟ್‌, ಮರು ಮತ ಎಣಿಕೆಗೆ ಅವಕಾಶ ಮಾಡಿರುವುದನ್ನು ರಾಜೇಗೌಡ ಪ್ರಶ್ನಿಸಿದ್ದಾರೆ.

Also Read
ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಮರು ಎಣಿಕೆಯಲ್ಲಿ ಸೋತ ಕಾಂಗ್ರೆಸ್‌ ಮಾಜಿ ಶಾಸಕ ಟಿ ಡಿ ರಾಜೇಗೌಡ

ಈ ನಡುವೆ, ಜೀವರಾಜ್‌, ಅಂದಿನ ಜಿಲ್ಲಾಧಿಕಾರಿ ಕೆ ಎನ್‌ ರಮೇಶ್‌, ಅಂದಿನ ಚುನಾವಣಾಧಿಕಾರಿ ಟಿ ಆರ್‌ ವೇದಮೂರ್ತಿ ವಿರುದ್ಧ ಮತ ತಿರುಚದ ಆರೋಪ ಮಾಡಿ ಚಿಕ್ಕಮಗಳೂರು ಟೌನ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಇದಕ್ಕೆ ಹೈಕೋರ್ಟ್‌ ತಡೆ ನೀಡಿದೆ.

ಈ ಎಲ್ಲಾ ಬೆಳವಣಿಗೆಗಳ ನಡುವೆ ಮೇ 6ರಂದು ಜೀವರಾಜ್‌ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

Kannada Bar & Bench
kannada.barandbench.com