ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಮರು ಎಣಿಕೆಯಲ್ಲಿ ಸೋತ ಕಾಂಗ್ರೆಸ್‌ ಮಾಜಿ ಶಾಸಕ ಟಿ ಡಿ ರಾಜೇಗೌಡ

ಮೇ 3ರಂದು ನಡೆದ ಅಂಚೆ ಮತಗಳ ಮರು ಎಣಿಕೆಯಲ್ಲಿ ಬಿಜೆಪಿಯ ಡಿ ಎನ್‌ ಜೀವರಾಜ್‌ ಅವರನ್ನು ವಿಜೇತ ಎಂದು ಘೋಷಿಸಲಾಗಿದೆ. ಅಲ್ಲಿಯವರೆಗೂ ಅಂದರೆ ಮೂರು ವರ್ಷಗಳವರೆಗೆ ರಾಜೇಗೌಡ ಶಾಸಕರಾಗಿದ್ದರು.
ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಮರು ಎಣಿಕೆಯಲ್ಲಿ ಸೋತ ಕಾಂಗ್ರೆಸ್‌ ಮಾಜಿ ಶಾಸಕ ಟಿ ಡಿ ರಾಜೇಗೌಡ
Published on

ಅಂಚೆ ಮತಗಳ ಮರು ಎಣಿಕೆಯಲ್ಲಿ ಶೃಂಗೇರಿ ವಿಧಾನಸಭಾ ಕ್ಷೇತ್ರದ ಸದಸ್ಯತ್ವ ಕಳೆದುಕೊಂಡಿರುವ ಟಿ ಡಿ ರಾಜೇಗೌಡ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಮೂರು ವರ್ಷಗಳ ಕಾಲ ಶೃಂಗೇರಿ ಶಾಸಕರಾಗಿದ್ದ ರಾಜೇಗೌಡ ಅವರು ಮೇ 3ರಂದು ಬಿಜೆಪಿಯ ಡಿ ಎನ್‌ ಜೀವರಾಜ್‌ ವಿರುದ್ಧ ಪರಾಭವಗೊಂಡಿದ್ದರು.

ಹಿರಿಯ ವಕೀಲ ದೇವದತ್‌ ಕಾಮತ್‌ ಅವರು ಶುಕ್ರವಾರ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌ ಮತ್ತು ನ್ಯಾಯಮೂರ್ತಿ ಜೋಯಮಲ್ಯ ಬಾಗ್ಚಿ ಅವರ ವಿಭಾಗೀಯ ಪೀಠದ ಮುಂದೆ ಅರ್ಜಿ ಉಲ್ಲೇಖಿಸಿದ್ದು, ಪೀಠವು ಸೋಮವಾರ ವಿಚಾರಣೆ ನಡೆಸುವುದಾಗಿ ತಿಳಿಸಿದೆ.  

ಕಾಮತ್‌ ಅವರು “ಚುನಾವಣಾ ಅರ್ಜಿ ಆಧರಿಸಿ ಹಾಲಿ ಶಾಸಕರನ್ನು ಬದಲಾಯಿಸಲಾಗಿದೆ” ಎಂದರು. ಇದನ್ನು ಆಲಿಸಿದ ಪೀಠವು ಮೇ 11ರಂದು ವಿಚಾರಣೆ ನಡೆಸುವುದಾಗಿ ಪೀಠ ಹೇಳಿತು.

2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ರಾಜೇಗೌಡರು 201 ಮತಗಳಿಂದ ಜೀವರಾಜ್‌ ವಿರುದ್ಧ ಜಯ ಸಾಧಿಸಿದ್ದರು. ಇದನ್ನು ಪ್ರಶ್ನಿಸಿ ಬಿಜೆಪಿಯ ಶಾಸಕ ಜೀವರಾಜ್‌ ಅವರು ಹೈಕೋರ್ಟ್‌ಗೆ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು.

ಏಪ್ರಿಲ್‌ 6ರಂದು ಹೈಕೋರ್ಟ್‌ 279 ತಿರಸ್ಕೃತವಾದ ಅಂಚೆ ಮತಗಳು ಸೇರಿ ಅಂಚೆ ಮತಗಳನ್ನು ಮರು ಎಣಿಕೆ ಮಾಡಿ ಫಲಿತಾಂಶ ಪ್ರಕಟಿಸುವಂತೆ ನಿರ್ದೇಶಿಸಿತ್ತು. ಇದರ ಪ್ರಕಾರ ಮೇ 3ರಂದು ಚುನಾವಣಾಧಿಕಾರಿ ಫಲಿತಾಂಶ ಪ್ರಕಟಿಸಿದ್ದು, ರಾಜೇಗೌಡ ಮತಗಳಿಕೆಯು 255ಕ್ಕೆ ಕುಸಿದಿದ್ದರಿಂದ ಜೀವರಾಜ್‌ ಅವರನ್ನು ವಿಜೇತ ಎಂದು ಘೋಷಿಸಲಾಗಿತ್ತು.

ನ್ಯಾಯಾಲಯವು ತಿರಸ್ಕೃತವಾದ 279 ಅಂಚೆ ಮತಗಳನ್ನು ಪರಿಶೀಲಿಸುವಂತೆ ಸೂಚಿಸಿತ್ತು. ಆದರೆ, ಚುನಾವಣಾಧಿಕಾರಿಯು ಅಕ್ರಮವಾಗಿ ಸಿಂಧುವಾದ ರಾಜೇಗೌಡರಿಗೆ ಬಂದಿದ್ದ 562 ಅಂಚೆ ಮತಗಳನ್ನು ಮರುಪರಿಗಣಿಸಿದ್ದಾರೆ ಎಂದು ರಾಜೇಗೌಡ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಆಕ್ಷೇಪಿಸಿದ್ದಾರೆ.

Also Read
ಶೃಂಗೇರಿ ಕ್ಷೇತ್ರದಲ್ಲಿ ತಿರಸ್ಕೃತಗೊಂಡಿದ್ದ 279 ಅಂಚೆ ಮತ ಮರು ಪರಿಶೀಲಿಸಿ, ಫಲಿತಾಂಶ ಪ್ರಕಟಿಸಲು ಹೈಕೋರ್ಟ್‌ ಆದೇಶ

ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ಪರವಾಗಿ ಆದೇಶಿಸಲಾಗಿದೆ. ಅದಾಗ್ಯೂ, ಮತ ಮರು ಎಣಿಕೆಗೆ ಆದೇಶ ಮಾಡಲಾಗಿದೆ ಎಂದು ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಲಾಗಿದೆ.

ಈ ನಡುವೆ, ಕಾಂಗ್ರೆಸ್‌ ಏಜೆಂಟ್‌ ಸುಧೀರ್‌ ಕುಮಾರ್‌ ಮುರೋಳ್ಳಿ ಅವರು ನೀಡಿದ ದೂರಿನ ಅನ್ವಯ ಮತ ಪತ್ರ ತಿರುಚಿದ ಆರೋಪದ ಸಂಬಂಧ ಜೀವರಾಜ್‌, ಅಂದಿನ ಜಿಲ್ಲಾಧಿಕಾರಿ ಕೆ ಎನ್ ರಮೇಶ್‌ ಮತ್ತು ಅಂದಿನ ಚುನಾವಣಾಧಿಕಾರಿ ಟಿ ಆರ್‌ ವೇದಮೂರ್ತಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದಕ್ಕೆ ಹೈಕೋರ್ಟ್‌ ತಡೆ ನೀಡಿದೆ.

Kannada Bar & Bench
kannada.barandbench.com