ಅಂತರ್ಜಾಲದಲ್ಲಿ ಡೀಪ್‌ಫೇಕ್ ಹಬ್ಬುತ್ತಿರುವುದಕ್ಕೆ ಕಡಿವಾಣ ಹಾಕುವುದು ತುರ್ತು ಅವಶ್ಯಕ ಎಂದು ದೆಹಲಿ ಹೈಕೋರ್ಟ್ ಬುಧವಾರ ಹೇಳಿದೆ.
ಇಂದು ಜನ ತಾವು ಕಂಡು ಕೇಳಿದ್ದನ್ನೇ ನಂಬಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಇದು ನಿಜಕ್ಕೂ ಆಘಾತಕಾರಿ ಸಂಗತಿ. ನೀವು ನೋಡುತ್ತಿರುವ ಅಥವಾ ಕೇಳುವ ಎಲ್ಲವೂ ನಕಲಿಯಾಗಿರಬಹುದು. ಅದು ಹಾಗಾಗಬಾರದು ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರಿದ್ದ ವಿಭಾಗೀಯ ಪೀಠ ತಿಳಿಸಿದೆ.
ಡೀ್ಪ್‌ಫೇಕ್ ರೂಪಿಸುವ ವೇದಿಕೆಗಳನ್ನು ಐಟಿ ಕಾಯಿದೆಯಡಿ ಕೇವಲ ಮಧ್ಯಸ್ಥಗಾರರಾಗಿ ವರ್ಗೀಕರಿಸುವುದು ಸರಿಯಲ್ಲ ಎಂದು ಕೂಡ ನ್ಯಾಯಾಲಯ ಹೇಳಿತು. ಡೀಪ್‌ಫೇಕ್ ವಸ್ತುವಿಷಯಗಳು ಸಮಾಜಕ್ಕೆ ಅಪಾಯಕಾರಿಯಾಗಿದ್ದು ಅವುಗಳ ನಿಗ್ರಹಕ್ಕೆ ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ನ್ಯಾಯಮೂರ್ತಿ ಮನಮೋಹನ್ ತಿಳಿಸಿದರು.
ಡೀಪ್‌ಫೇಕ್ ನಿಯಂತ್ರಣ ಕೋರಿ ಪತ್ರಕರ್ತ ರಜತ್ ಶರ್ಮಾ ಮತ್ತು ವಕೀಲ ಚೈತನ್ಯ ರೋಹಿಲ್ಲಾ ಅವರು ಸಲ್ಲಿಸಿದ್ದ ಎರಡು ಅರ್ಜಿಗಳ ವಿಚಾರಣೆ ವೇಳೆ ನ್ಯಾಯಾಲಯ ಈ ವಿಚಾರ ತಿಳಿಸಿತು.
ಪ್ರಕರಣದಲ್ಲಿ ಕೇಂದ್ರ ಸರ್ಕಾರ ಸಲ್ಲಿಸಿದ ಉತ್ತರವನ್ನು ಪರಿಗಣಿಸಿದ ನ್ಯಾಯಾಲಯವು ತಂತ್ರಜ್ಞಾನ ನಿಯಂತ್ರಿಸಲು ಸಲಹೆ ನೀಡುವಂತೆ ಅರ್ಜಿದಾರರನ್ನು ಕೇಳಿದೆ.
ಐರೋಪ್ಯ ಒಕ್ಕೂಟ, ಅಮೆರಿಕದ ಕಾನೂನುಗಳನ್ನು ಅಧ್ಯಯನ ಮಾಡಿ ಅಫಿಡವಿಟ್ ಸಲ್ಲಿಸುವಂತೆ ನ್ಯಾಯಾಲಯ ಅರ್ಜಿದಾರರನ್ನು ಕೇಳಿದೆ. ಅಕ್ಟೋಬರ್‌ನಲ್ಲಿ ಮತ್ತೆ ಪ್ರಕರಣದ ವಿಚಾರಣೆ ನಡೆಯಲಿದೆ.