ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇರಿಸಿದವರಿಗೆ ತಮಿಳುನಾಡಿನಲ್ಲಿ ತರಬೇತಿ ನೀಡಲಾಗಿತ್ತು ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ತಮಿಳುನಾಡು ಸರ್ಕಾರ ಹೇಳಿರುವಂತೆ ಪತ್ರಿಕಾಗೋಷ್ಠಿ ನಡೆಸಿ ಕ್ಷಮೆಯಾಚಿಸಲು ಸಿದ್ಧರಿದ್ದಾರೆಯೇ ಎಂಬುದನ್ನು ಸ್ಪಷ್ಟಪಡಿಸುವಂತೆ ಮದ್ರಾಸ್ ಹೈಕೋರ್ಟ್ ಶುಕ್ರವಾರ ಪ್ರಶ್ನಿಸಿದೆ.
ಈ ಬಗ್ಗೆ ಅನಿಶ್ಚಿತತೆ ಬೇಡ ಎಂದ ನ್ಯಾ. ಜಿ ಜಯಚಂದ್ರನ್ ಕ್ಷಮೆಯಾಚಿಸುವರೆ ಅಥವಾ ತಮಿಳುನಾಡು ವಾದವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವರೇ ಎಂಬುದನ್ನು ಶೋಭಾ ಅವರು ತಿಳಿಸಬೇಕು ಎಂದು ಸಚಿವೆ ಪರ ವಕೀಲರಿಗೆ ತಿಳಿಸಿದರು.
ಡೋಲಾಯಮಾನವಾಗಿ ಇರುವಂತಿಲ್ಲ. ನೀವು ಕ್ಷಮೆ ಯಾಚಿಸುವುದಾದರೆ ಅದಕ್ಕೆ ಬದ್ಧವಾಗಿರಿ. ಈಗ ಕ್ಷಮೆ ಯಾಚಿಸಿ ನಂತರ ತಮಿಳುನಾಡು ಸರ್ಕಾರದ ನಿಲುವನ್ನು ಅರ್ಹತೆಯ ಆಧಾರದಲ್ಲಿ ಪ್ರಶ್ನಿಸುವೆ ಎಂದು ನೀವು ಹೇಳುವಂತಿಲ್ಲ ಎಂದು ನ್ಯಾಯಾಲಯ ಹೇಳಿತು.
ತಮಿಳುನಾಡು ಸರ್ಕಾರ ತಮ್ಮ ಕ್ಷಮಾಪಣೆಯ ಕರಡು ಪತ್ರ ರೂಪಿಸಿರುವ ಬಗ್ಗೆ ಶೋಭಾ ಅವರಿಗೆ ಅಸಮಾಧಾನ ಇದೆ. ಅವರು ಈಗಾಗಲೇ ಕ್ಷಮೆ ಕೋರಿದ್ದಾರೆ ಎಂದು ಆಕೆಯ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ ವೇಳೆ ನ್ಯಾಯಾಲಯ ಹೀಗೆ ಪ್ರತಿಕ್ರಿಯಿಸಿತು.
ಕಳೆದ ವಿಚಾರಣೆ ವೇಳೆ ಶೋಭಾ ಕರಂದ್ಲಾಜೆ ಅವರು ಪತ್ರಿಕಾಗೋಷ್ಠಿಯಲ್ಲಿ ಕ್ಷಮೆಯಾಚಿಸಿದರೆ ಅವರ ವಿರುದ್ಧದ ಪ್ರಕರಣ ಕೈಬಿಡಲಾಗುವುದು ಎಂದಿದ್ದ ತಮಿಳುನಾಡು ಅಡ್ವೊಕೇಟ್ ಜನರಲ್ ಪಿಎಸ್ ರಾಮನ್, ಸರ್ಕಾರ ನಿರೀಕ್ಷಿಸುತ್ತಿರುವ ಕ್ಷಮಾಪಣೆಯ ಕರಡು ಸ್ವರೂಪವನ್ನು ಕೂಡ ನ್ಯಾಯಾಲಯದ ಮುಂದೆ ಇರಿಸಿದ್ದರು.
ಇಂದಿನ ವಿಚಾರಣೆಯ ಆರಂಭದಲ್ಲಿ ತಾವು ಶೋಭಾ ಅವರ ಅರ್ಜಿ ವಜಾಗೊಳಿಸುವ ಆದೇಶ ನೀಡುವುದಾಗಿ ನ್ಯಾ. ಜಯಚಂದ್ರ ಹೇಳಿದ್ದರು. ಆದರೆ ಬಿಜೆಪಿ ನಾಯಕಿಯ ಪರ ಹಿರಿಯ ವಕೀಲರೊಬ್ಬರು ವಾದ ಮಂಡಿಸಲಿರುವುದರಿಂದ ಕಾಲವಾಕಾಶ ನೀಡುವಂತೆ ಮನವಿ ಮಾಡಿದರು. ಅಂತೆಯೇ ನ್ಯಾಯಾಲಯ ವಿಚಾರಣೆಯನ್ನು ಆಗಸ್ಟ್ 23ಕ್ಕೆ ಮುಂದೂಡಿತು.