

ಅಲಾಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರಿಗೆ ವಾಗ್ದಂಡನೆ (ಮಹಾಭಿಯೋಗ) ವಿಧಿಸುವಂತೆ ಲೋಕಸಭೆ ಅಂಗೀಕರಿಸಿದ ನಿರ್ಣಯವು ರಾಜ್ಯಸಭೆಯಲ್ಲಿ ಮಂಡಿಸಲಾದ ಇದೇ ರೀತಿಯ ನಿರ್ಣಯ ತಿರಸ್ಕೃತವಾದ ನಂತರ ವಿಫಲ ಎಂದು ಪರಿಗಣಿಸಲ್ಪಡುತ್ತದೆ ಎನ್ನುವ ವಾದದ ಬಗ್ಗೆ ಸುಪ್ರೀಂ ಕೋರ್ಟ್ ಬುಧವಾರ ಸಂಶಯ ವ್ಯಕ್ತಪಡಿಸಿದೆ.
ತಮಗೆ ವಾಗ್ದಂಡನೆ ವಿಧಿಸಲು ನ್ಯಾಯಾಧೀಶರ (ವಿಚಾರಣಾ) ಕಾಯಿದೆಯಡಿ ತ್ರಿಸದಸ್ಯ ಸಮಿತಿ ರಚಿಸಿದ ಲೋಕಸಭಾ ಸ್ಪೀಕರ್ ನಿರ್ಧಾರ ರದ್ದುಗೊಳಿಸುವಂತೆ ಕೋರಿ ಅಲಾಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಎಸ್ ಸಿ ಶರ್ಮ ಅವರಿದ್ದ ಪೀಠ ಆಲಿಸಿತು. ವರ್ಮಾ ಅವರು ವಾಗ್ದಂಡನೆಯನ್ನು ವಿಧಿಸುವಾಗ ಅನುಸರಿಸಬೇಕಾದ ಪ್ರಕ್ರಿಯೆಯಲ್ಲಿ ಲೋಪಗಳು ಉಂಟಾಗಿರುವ ಕಾರಣಕ್ಕೆ ಅದನ್ನು ತಿರಸ್ಕರಿಸಬೇಕು ಎಂದು ಕೋರಿದ್ದಾರೆ.
ನ್ಯಾಯಾಧೀಶರ ವಿಚಾರಣಾ ಕಾಯಿದೆಯ ಸೆಕ್ಷನ್ 3ರಲ್ಲಿ ನೀಡಲಾದ ವಿವರಣೆಯಂತೆ ಎರಡೂ ಸದನಗಳಲ್ಲಿ ಒಂದೇ ದಿನ ನೋಟಿಸ್ ನೀಡಿದರೆ ಲೋಕಸಭಾ ಸ್ಪೀಕರ್ ಮತ್ತು ರಾಜ್ಯಸಭಾ ಅಧ್ಯಕ್ಷರ ನಡುವೆ ಜಂಟಿ ಸಮಾಲೋಚನೆ ಅಗತ್ಯವಿದ್ದು, ಆನಂತರವಷ್ಟೇ ತನಿಖಾ ಸಮಿತಿಯನ್ನು ನೇಮಿಸಬೇಕಾಗುತ್ತದೆ ಎಂದು ನ್ಯಾ. ವರ್ಮಾ ಪರ ಹಿರಿಯ ವಕೀಲ ಮುಕುಲ್ ರೋಹಟ್ಗಿ ವಾದಿಸಿದರು. ರಾಜ್ಯಸಭೆಯಲ್ಲಿ ನಿರ್ಣಯವು ಮಂಡನೆಗೆ ಸ್ವೀಕಾರವಾಗುವುದನ್ನು ಕಾಯದೆ ಏಕಪಕ್ಷೀಯವಾಗಿ ಸಮಿತಿಯನ್ನು ರಚಿಸಲಾಗಿದೆ ಎಂದು ಅವರು ಆಕ್ಷೇಪಿಸಿದರು.
ಆದರೆ, ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಲೋಕಸಭೆಯ ಪ್ರಧಾನ ಕಾರ್ಯದರ್ಶಿ ಅವರು, ರಾಜ್ಯಸಭೆ ನಿರ್ಣಯ ಅಂಗೀಕರಿಸದೆ ಇರುವುದರಿಂದ ಈ ಸೆಕ್ಷನ್ ಅನ್ವಯವಾಗುವುದಿಲ್ಲ ಎನ್ನಲಾಗದು ಎಂದು ವಾದಿಸಿದರು.
ಈ ವೇಳೆ ನ್ಯಾ. ದತ್ತಾ ಅವರು, ರಾಜ್ಯಸಭೆಯ ಸಭಾಪತಿ ಒಂದೊಮ್ಮೆ ನಿರ್ಣಯವನ್ನು ತಿರಸ್ಕರಿಸಿದರೆ ಆಗ ಲೋಕಸಭಾಧ್ಯಕ್ಷರು ತನಿಖಾ ಸಮಿತಿಯನ್ನು ರಚಿಸಲು ಯಾವುದಾದರೂ ಕಾನೂನಿನ ತೊಡಕು ಇದೆಯೇ ಎಂದು ಪ್ರಶ್ನಿಸಿದರು. ಮುಂದುವರಿದು ಒಂದೊಮ್ಮೆ ವಾಗ್ದಡಂನೆಯ ಪ್ರಸ್ತಾವನೆಗೆ ರಾಜ್ಯಸಭೆಯಲ್ಲಿ ತಿರಸ್ಕೃತವಾದರೆ ಆಗ ಲೋಕಸಭೆಯಲ್ಲಿಯೂ ಅದು ವಿಫಲವಾಗಬೇಕು ಎನ್ನುವ ರೋಹಟ್ಗಿಯವರ ವಾದಕ್ಕೆ ಮೇಲ್ನೋಟಕ್ಕೆ ತಮ್ಮ ಸಹಮತಿ ಇಲ್ಲ ಎಂದು ಅವರು ಹೇಳಿದರು.
ಈ ಹಿನ್ನೆಲೆಯಲ್ಲಿ ತನಿಖಾ ಸಮಿತಿ ರಚಿಸುವ ಮೊದಲು ಜಂಟಿ ಸಮಾಲೋಚನೆ ನಡೆಯದಿರುವುದು ನ್ಯಾಯಮೂರ್ತಿ ವರ್ಮಾ ಅವರ ಹಕ್ಕುಗಳ ಉಲ್ಲಂಘನೆಯೇ ಎಂಬುದನ್ನು ನಾಳೆ ಪರಿಶೀಲಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ನ್ಯಾ.ವರ್ಮಾ ಅವರ ದೆಹಲಿ ನಿವಾಸದಲ್ಲಿ ಮಾರ್ಚ್ 14ರ ಸಂಜೆ ಅಗ್ನಿ ಅವಗಢ ಸಂಭವಿಸಿತ್ತು. ಅಗ್ನಿಶಾಮಕ ದಳ ಬೆಂಕಿ ನಂದಿಸುವಾಗ ಸುಟ್ಟ ನೋಟಿನ ಕಂತೆಗಳು ಪತ್ತೆಯಾಗಿದೆ ಎಂಬ ಆರೋಪ ದೇಶದಾದ್ಯಂತ ಸಂಚಲನ ಸೃಷ್ಟಿಸಿತ್ತು.
ನ್ಯಾ. ವರ್ಮಾ ಅವರ ಪರವಾಗಿ ಹಿರಿಯ ವಕೀಲರಾದ ಮುಕುಲ್ ರೋಹಟ್ಗಿ, ರಾಕೇಶ್ ದ್ವಿವೇದಿ , ಸಿದ್ಧಾರ್ಥ್ ಲೂತ್ರಾ , ಸಿದ್ಧಾರ್ಥ್ ಅಗರ್ವಾಲ್ ಮತ್ತು ಜಯಂತ್ ಮೆಹ್ತಾ ಹಾಗೂ ಅವರ ಕಾನೂನು ತಂಡ ವಾದ ಮಂಡಿಸಿತು. ಕೇಂದ್ರ ಸರ್ಕಾರವನ್ನು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪ್ರತಿನಿಧಿಸಿದ್ದರು.