[ನ್ಯಾ. ವರ್ಮಾ ವಾಗ್ದಂಡನೆ ವಿಚಾರ] ಪ್ರಕ್ರಿಯಾ ಲೋಪದತ್ತ ಬೆರಳು ಮಾಡಿದ ಸುಪ್ರೀಂ: ಲೋಕಸಭೆ, ರಾಜ್ಯಸಭೆಗೆ ನೋಟಿಸ್

ನ್ಯಾ.ವರ್ಮಾ ಅವರ ದೆಹಲಿ ನಿವಾಸದಲ್ಲಿ ಮಾರ್ಚ್ 14ರ ಸಂಜೆ ಅಗ್ನಿ ಅವಗಢ ಸಂಭವಿಸಿತ್ತು. ಅಗ್ನಿಶಾಮಕ ದಳ ಬೆಂಕಿ ನಂದಿಸುವಾಗ ಸುಟ್ಟ ನೋಟಿನ ಕಂತೆಗಳು ಪತ್ತೆಯಾಗಿದೆ ಎಂಬ ಆರೋಪ ದೇಶದಾದ್ಯಂತ ಸಂಚಲನ ಸೃಷ್ಟಿಸಿತ್ತು.
Justice Yashwant Varma and Supreme Court
Justice Yashwant Varma and Supreme Court
Published on

ತಮ್ಮ ವಿರುದ್ಧ ವಾಗ್ದಂಡನೆ (ಮಹಾಭಿಯೋಗ) ವಿಧಿಸುವುದಕ್ಕಾಗಿ ನ್ಯಾಯಾಧೀಶರ (ವಿಚಾರಣಾ) ಕಾಯಿದೆಯಡಿ ತ್ರಿಸದಸ್ಯ ಸಮಿತಿ ರಚಿಸುವ ಲೋಕಸಭಾ ಸ್ಪೀಕರ್‌ ನಿರ್ಧಾರ ರದ್ದುಗೊಳಿಸುವಂತೆ ಕೋರಿ ಅಲಾಹಾಬಾದ್‌ ಹೈಕೋರ್ಟ್‌ ನ್ಯಾಯಮೂರ್ತಿ ಯಶವಂತ್‌ ವರ್ಮಾ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಈ ಸಂಬಂಧ ಸ್ಪೀಕರ್ ಹಾಗೂ ಸಂಸತ್ತಿನ ಮೇಲ್ಮನೆ (ರಾಜ್ಯಸಭೆ) ಮತ್ತು ಕೆಳಮನೆ (ಲೋಕಸಭೆ) ಕಾರ್ಯಾಲಯಗಳಿಗೆ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಎ ಜಿ ಮಸೀಹ್ ಅವರಿದ್ದ ಪೀಠ ನೋಟಿಸ್‌ ಜಾರಿ ಮಾಡಿದೆ.

Also Read
ನ್ಯಾ. ವರ್ಮಾ ವಿರುದ್ಧದ ಆರೋಪಗಳ ತನಿಖೆಗೆ ತ್ರಿಸದಸ್ಯ ಸಮಿತಿ ರಚಿಸಿದ ಲೋಕಸಭಾ ಸ್ಪೀಕರ್

ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ತಮ್ಮ ವಾಗ್ದಂಡನೆಗೆ ನೋಟಿಸ್‌ಗಳನ್ನು ನೀಡಲಾಗಿದ್ದರೂ, ರಾಜ್ಯಸಭೆಯ ಸಭಾಪತಿಗಳು ಆ ನಿರ್ಣಯ ಅಂಗೀಕರಿಸುವುದನ್ನು ಕಾಯದೆ ಮತ್ತು ಕಾನೂನಿನಲ್ಲಿ ತಿಳಿಸಿರುವಂತೆ ಅವರೊಂದಿಗೆ ಜಂಟಿ ಸಮಾಲೋಚನೆ ನಡೆಸದೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಏಕಪಕ್ಷೀಯವಾಗಿ ಸಮಿತಿ ರಚಿಸಿರುವುದನ್ನು ವರ್ಮಾ ಪ್ರಶ್ನಿಸಿದ್ದಾರೆ.

“21.07.2025ರಂದು ಲೋಕಸಭೆಯಲ್ಲಿ ಸಲ್ಲಿಸಲಾದ ನಿರ್ಣಯವನ್ನು ಅಂಗೀಕರಿಸಿದ ಬಳಿಕ, ಅದೇ ದಿನ ರಾಜ್ಯಸಭೆಯಲ್ಲಿಯೂ ಪ್ರತ್ಯೇಕ ನಿರ್ಣಯ ಸಲ್ಲಿಸಲಾಗಿದ್ದು, ಅದು ಇನ್ನೂ ಅಂಗೀಕಾರವಾಗದಿದ್ದರೂ, 12.08.2025ರಂದು ಲೋಕಸಭಾ ಸ್ಪೀಕರ್ ಏಕಪಕ್ಷೀಯವಾಗಿ ಸಮಿತಿ ರಚಿಸಿದ್ದಾರೆ. ಇದು ನ್ಯಾಯಮೂರ್ತಿಗಳ (ವಿಚಾರಣಾ) ಕಾಯಿದೆ- 1968ರ ಸೆಕ್ಷನ್ 3(2)ರ  ಸ್ಪಷ್ಟ ಉಲ್ಲಂಘನೆ” ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಇಂದಿನ ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಾಲಯ ಈ ವಾದಕ್ಕೆ ಸಮ್ಮತಿಸಿದಂತೆ ಕಂಡಿತು. ಸಂಸತ್ತಿನ ಕಾನೂನು ತಜ್ಞರು ಇದಕ್ಕೆ ಹೇಗೆ ಅವಕಾಶ ನೀಡಿದರು ಎಂದು ಅದು ಕೇಳಿತು.

"ಇಷ್ಟೊಂದು ಸಂಸದರು ಮತ್ತು ಕಾನೂನು ತಜ್ಞರು ಇದ್ದರೂ ಯಾರೂ ಇದನ್ನು ಹೇಳಲಿಲ್ಲವೇ? " ಎಂದು ನ್ಯಾಯಮೂರ್ತಿ ದತ್ತ ಕೇಳಿದರು.

ನ್ಯಾ.ವರ್ಮಾ ಅವರ ದೆಹಲಿ ನಿವಾಸದಲ್ಲಿ ಮಾರ್ಚ್ 14ರ ಸಂಜೆ ಅಗ್ನಿ ಅವಗಢ ಸಂಭವಿಸಿತ್ತು. ಈ ವೇಳೆ ಅಗ್ನಿಶಾಮಕ ದಳ ಬೆಂಕಿ ನಂದಿಸುವಾಗ ಸುಟ್ಟ ನೋಟಿನ ಕಂತೆಗಳು ಪತ್ತೆಯಾಗಿದೆ ಎಂಬ ಆರೋಪ ದೇಶದಾದ್ಯಂತ ಸಂಚಲನ ಸೃಷ್ಟಿಸಿತ್ತು.

ಈ ಹಿಂದೆ ಹೈಕೋರ್ಟ್‌ ಮೂವರು ನ್ಯಾಯಮೂರ್ತಿಗಳ ಸಮಿತಿ (ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು, ಹಿಮಾಚಲ ಪ್ರದೇಶ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಜಿ ಎಸ್ ಸಂಧವಾಲಿಯಾ ಹಾಗೂ ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಅನು ಶಿವರಾಮನ್‌ ಅವರನ್ನೊಳಗೊಂಡ ಸಮಿತಿ) ನ್ಯಾ. ವರ್ಮಾ ಅವರ ವಿರುದ್ಧ ವಾಗ್ದಂಡನೆಗೆ (ಮಹಾಭಿಯೋಗ) ಶಿಫಾರಸ್ಸು ಮಾಡಿತ್ತು. ನಂತರ ಕೇಂದ್ರ ಸರ್ಕಾರ ನ್ಯಾ. ವರ್ಮಾ ಅವರಿಗೆ ವಾಗ್ದಂಡನೆ ವಿಧಿಸಲು ಸಂಸತ್‌ನಲ್ಲಿ ಪ್ರಸ್ತಾವನೆ ಮಂಡಿಸಿತ್ತು.

ಸಂಸತ್ತಿನ 146 ಸದಸ್ಯರು ಸಹಿ ಮಾಡಿದ ನಿರ್ಣಯವನ್ನು ಸ್ಪೀಕರ್ ಅಂಗೀಕರಿಸಿದರು. ನ್ಯಾಯಾಧೀಶರ (ವಿಚಾರಣಾ) ಕಾಯಿದೆಯ ಪ್ರಕಾರ, ಲೋಕಸಭಾ ಸ್ಪೀಕರ್‌ ಅವರು ಘಟನೆಯ ತನಿಖೆಗಾಗಿ  ಸುಪ್ರೀಂ ಕೋರ್ಟ್‌ ಹಾಲಿ ನ್ಯಾಯಮೂರ್ತಿ ಅರವಿಂದ್‌ ಕುಮಾರ್‌, ಮದ್ರಾಸ್‌ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಮಣೀಂದ್ರ ಮೋಹನ್‌ ಶ್ರೀವಾಸ್ತವ ಹಾಗೂ ಹಿರಿಯ ನ್ಯಾಯವಾದಿ ಬಿ ವಾಸುದೇವ ಆಚಾರ್ಯ ಅವರನ್ನು ಒಳಗೊಂಡ ತ್ರಿಸದಸ್ಯ ಸಮಿತಿ ರಚಿಸಿದ್ದಾರೆ. ಇವರಲ್ಲಿ ನ್ಯಾ. ಅರವಿಂದ್‌ ಕುಮಾರ್‌ ಮತ್ತು ಬಿ ವಿ ಆಚಾರ್ಯ ಅವರು ಕರ್ನಾಟಕ ಮೂಲದವರು.

ಕಳೆದ ತಿಂಗಳು ಸಮಿತಿಯು ನ್ಯಾಯಮೂರ್ತಿ ವರ್ಮಾ ಅವರಿಗೆ ತಮ್ಮ ವಿರುದ್ಧದ ಆರೋಪಗಳ ಕುರಿತು ಲಿಖಿತ ಹೇಳಿಕೆ ಸಲ್ಲಿಸಲು ಸೂಚಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ನ್ಯಾ. ವರ್ಮಾ ಜುಲೈನಲ್ಲಿ ಉಭಯ ಸದನಗಳ ಮುಂದೆ ನೀಡಲಾದ ಪ್ರಸ್ತಾವನೆಗಳ ಮತ್ತು ಅವುಗಳ ಪರಿಣಾಮವಾಗಿ ಹೊರಡಿಸಲಾದ ಯಾವುದೇ ಆದೇಶಗಳ ದೃಢೀಕೃತ ಪ್ರತಿ ಕೋರಿದ್ದರು.

ಆದರೆ, ಲೋಕಸಭೆ ಮತ್ತು ರಾಜ್ಯಸಭೆಗಳಿಗೆ ಕಳುಹಿಸಿದ ತಮ್ಮ ಪತ್ರಗಳಿಗೆ ಇನ್ನೂ ಪ್ರತಿಕ್ರಿಯೆ ಬಂದಿಲ್ಲ ಎಂದು ಅವರು ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ. ಜೊತೆಗೆ, ಲೋಕಸಭಾ ಸ್ಪೀಕರ್ ಕೈಗೊಂಡ ಕ್ರಮಗಳನ್ನು ಪ್ರಶ್ನಿಸಲು ತಮಗೆ ಉದ್ದೇಶವಿರುವುದನ್ನು ಅವರು ಸಮಿತಿಗೂ ತಿಳಿಸಿದ್ದರು.

ಈ ಹಿನ್ನೆಲೆಯಲ್ಲಿ, ಲಿಖಿತ ಉತ್ತರ ಸಲ್ಲಿಸಲು ನೀಡಿದ್ದ ಅವಧಿಯನ್ನು 12 ಜನವರಿ 2026ರವರೆಗೆ ವಿಸ್ತರಿಸಲಾಗಿದೆ. ಅವರು ಜನವರಿ 24ರಂದು ಸಮಿತಿ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ.

Also Read
ನ್ಯಾ. ವರ್ಮಾ ವಾಗ್ದಂಡನೆ: ಸಲಹೆಗಾಗಿ ಇಬ್ಬರು ವಕೀಲರ ನೇಮಿಸಿಕೊಂಡ ಲೋಕಸಭಾ ಸ್ಪೀಕರ್

ಇದರ ನಡುವೆ, ನ್ಯಾಯಮೂರ್ತಿ ವರ್ಮಾ ಅವರ ಅರ್ಜಿಯನ್ನು ಸುಪ್ರೀಂ ಕೋರ್ಟ್ ಜನವರಿ ಮೊದಲ ವಾರದಲ್ಲಿ ವಿಚಾರಣೆ ನಡೆಸಲಿದೆ. ವಿಶೇಷವಾಗಿ, ಸಮಿತಿಯಿಂದ ನೀಡಲಾದ ನೋಟಿಸನ್ನೂ ಅವರು ಪ್ರಶ್ನಿಸಿದ್ದಾರೆ.

ಹಿರಿಯ ವಕೀಲರಾದ ಮುಕುಲ್ ರೋಹಟ್ಗಿ , ರಾಕೇಶ್ ದ್ವಿವೇದಿ , ಸಿದ್ಧಾರ್ಥ್ ಲೂತ್ರಾ , ಸಿದ್ಧಾರ್ಥ್ ಅಗರ್ವಾಲ್ ಮತ್ತು  ಜಯಂತ್ ಮೆಹ್ತಾ ಮತ್ತವರ ಕಾನೂನು ತಂಡ ನ್ಯಾ. ವರ್ಮಾ ಪರವಾಗಿ ವಾದ ಮಂಡಿಸಿತು.

Kannada Bar & Bench
kannada.barandbench.com