ವ್ಯಕ್ತಿ ದೇಶ ತೊರೆದ ನಂತರ ಪೊಲೀಸರೆದುರು ಹಾಜರಾಗುವಂತೆ ನೋಟಿಸ್ ನೀಡಲಾಗಿದ್ದರೆ ಅದು ಪಲಾಯನವಲ್ಲ: ದೆಹಲಿ ಹೈಕೋರ್ಟ್

ಇದೇ ವೇಳೆ ನ್ಯಾಯಾಲಯ ಏಪ್ರಿಲ್ 30 ರಂದು ಇಒಡಬ್ಲ್ಯೂ ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ಅರ್ಜಿದಾರರಿಗೆ ನಿರ್ದೇಶಿಸಿತು.
ವ್ಯಕ್ತಿ ದೇಶ ತೊರೆದ ನಂತರ ಪೊಲೀಸರೆದುರು ಹಾಜರಾಗುವಂತೆ ನೋಟಿಸ್ ನೀಡಲಾಗಿದ್ದರೆ ಅದು ಪಲಾಯನವಲ್ಲ: ದೆಹಲಿ ಹೈಕೋರ್ಟ್
Delhi High Court

ಒಬ್ಬ ವ್ಯಕ್ತಿ ದೇಶ ತೊರೆದ ನಂತರ ಪೊಲೀಸ್‌ ಅಧಿಕಾರಿಯ ಮುಂದೆ ಹಾಜರಾಗಬೇಕೆಂದು ಸಿಆರ್‌ಪಿಸಿ ಸೆಕ್ಷನ್‌ 41 ಎ ಅಡಿ ನೋಟಿಸ್‌ ನೀಡಲಾಗಿದ್ದರೆ ಆ ವ್ಯಕ್ತಿ ಕಾನೂನಿನಿಂದ ಪಲಾಯನ ಮಾಡಿದ್ದಾನೆ ಅಥವಾ ನ್ಯಾಯ ಪ್ರಕ್ರಿಯೆಯಿಂದ ತಪ್ಪಿಸಿಕೊಂಡಿದ್ದಾನೆ ಎಂದು ಊಹಿಸಲಾಗದು ಎಂಬುದಾಗಿ ದೆಹಲಿ ಹೈಕೋರ್ಟ್‌ ತೀರ್ಪು ನೀಡಿದೆ.

ದೆಹಲಿ ಪೊಲೀಸ್ ಆರ್ಥಿಕ ಅಪರಾಧ ದಳದ (ಇಒಡಬ್ಲ್ಯೂ) ಎಫ್‌ಐಆರ್‌ ಆಧರಿಸಿ ಹೊರಡಿಸಲಾಗಿದ್ದ ತಮ್ಮ ವಿರುದ್ಧ ಹೊರಡಿಸಲಾಗಿದ್ದ ಜಾಮೀನು ರಹಿತ ವಾರೆಂಟ್‌ ರದ್ದುಪಡಿಸುವಂತೆ ಕೋರಿ ಅಮಿತ್‌ ಮಾವಿ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಅನು ಮಲ್ಹೋತ್ರಾ ಅವರಿದ್ದ ಏಕ ಸದಸ್ಯ ಪೀಠದಲ್ಲಿ ನಡೆಸಿತು.

ಜಾಮೀನು ರದ್ದುಗೊಳಿಸುವಂತೆ ಮತ್ತು ಸಿಆರ್‌ಪಿಸಿ ಸೆಕ್ಷನ್‌ 482ರ ಅಡಿ ನಡೆಸಲಾಗುತ್ತಿರುವ ವಿಚಾರಣೆಯನ್ನು ರದ್ದುಪಡಿಸುವಂತೆ ಕೋರಿ ಮಾವಿ ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿತ್ತು. ಪರಿಣಾಮ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

Also Read
ಏಳನೇ ಬಾರಿಗೆ ದೇಶಭ್ರಷ್ಟ ಉದ್ಯಮಿ ನೀರವ್‌ ಮೋದಿ ಜಾಮೀನು ಅರ್ಜಿ ತಿರಸ್ಕರಿಸಿದ ಇಂಗ್ಲೆಂಡ್‌ ನ್ಯಾಯಾಲಯ

ಪ್ರಸ್ತುತ ಸಂದರ್ಭದಲ್ಲಿ ಸಿಆರ್‌ಪಿಸಿ ಸೆಕ್ಷನ್‌ 482ರ ಅಡಿ ದೊರೆಯುವ ವಿನಾಯಿತಿಗಳನ್ನು ಅರ್ಜಿದಾರರು ಕೋರಲು ಸಾಧ್ಯವಿಲ್ಲ. ಇದಕ್ಕೆ ಸೂಕ್ತ ಪರಿಹಾರವೆಂದರೆ ಅವರು ನಿರೀಕ್ಷಣಾ ಜಾಮೀನು ಪಡೆಯುವುದು ಎಂದು ರಾಜ್ಯ ಸರ್ಕಾರ ವಾದಿಸಿತು. ಇಒಡಬ್ಲ್ಯೂ ದೂರು ನೀಡಿದ ಒಂದು ದಿನದ ಬಳಿಕ ಅರ್ಜಿದಾರರು ದೇಶ ತೊರೆದಿದ್ದು ಕೋವಿಡ್‌ ಕಾರಣಕ್ಕೆ ದೇಶಕ್ಕೆ ಮರಳಲಾಗದು ಎಂಬುದಾಗಿ ಹೇಳುವುದು ಕಟ್ಟುಕತೆ ಎಂದು ದೂರಿತು.

ಆದರೆ ಅರ್ಜಿದಾರ ತಾನು ಫ್ರಾನ್ಸ್‌ನಲ್ಲಿರುವ ಕಾರಣ ವೀಡಿಯೊ ಕಾನ್ಫರೆನ್ಸ್‌ ಮೂಲಕ ತನಿಖೆಗೆ ಹಾಜರಾಗುವುದಾಗಿ ಪದೇ ಪದೇ ಮನವಿ ಮಾಡುತ್ತಿದ್ದೇನೆ. ಲಸಿಕೆ ಪಡೆದ ನಂತರ ದೇಶಕ್ಕೆ ಮರಳುವುದಾಗಿ ಸ್ಪಷ್ಟನೆ ನೀಡಿದ್ದರು.

ಅರ್ಜಿದಾರರು ತಪ್ಪಿಸಿಕೊಳ್ಳಬಹುದು ಮತ್ತು ಅವರ ಭೌತಿಕ ಉಪಸ್ಥಿತಿ ಇಲ್ಲದಿರುವುದರಿಂದ ವೀಡಿಯೊ ಕಾನ್ಫರೆನ್ಸ್‌ ಮೂಲಕ ಅವರ ವಿರುದ್ಧ ʼಮುಂದಿನ ಕ್ರಮ ಕೈಗೊಳ್ಳಲಾಗದುʼ ಎಂದು ಸರ್ಕಾರ ಆತಂಕ ವ್ಯಕ್ತಪಡಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರು “ಇದು ತನ್ನ ವಿರುದ್ಧ ತಾನೇ ಸಾಕ್ಷಿ ಹೇಳುವಂತೆ ಒಬ್ಬ ವ್ಯಕ್ತಿಯನ್ನು ಒತ್ತಾಯಿಸಲಾಗದು ಎಂದು ಸಂವಿಧಾನದ 20 (3) ನೇ ವಿಧಿಯಡಿ ನೀಡಲಾದ ಹಕ್ಕಿಗೆ ವ್ಯತಿರಿಕ್ತವಾಗಿದೆ” ಎಂದು ಹೇಳಿದ್ದಾರೆ.

ವಾದಗಳನ್ನು ಆಲಿಸಿದ ನ್ಯಾಯಾಲಯ ಸಿಆರ್‌ಪಿಸಿ ಸೆಕ್ಷನ್‌ 482ರ ಅಡಿಯಲ್ಲಿ ಜಾಮೀನು ರಹಿತ ವಾರಂಟ್‌ಗಳನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿ ಸಮರ್ಥನೀಯ ಎಂದು ಅಭಿಪ್ರಾಯಪಟ್ಟಿತು. ಸಿಆರ್‌ಪಿಸಿ ಸೆಕ್ಷನ್‌ 41 ಎ ಅಡಿಯಲ್ಲಿ ತನಿಖೆಯ ಉದ್ದೇಶ ವ್ಯಕ್ತಿಯನ್ನು ಹೆಚ್ಚಿನ ತನಿಖೆಗಾಗಿ ಹಾಜರುಪಡಿಸುವುದಾಗಿದೆ ಎಂದು ಅದು ಹೇಳಿದೆ. "02 ಸೆಪ್ಟೆಂಬರ್‌ 2020ಕ್ಕಿಂತ ಮೊದಲು ಅರ್ಜಿದಾರರಿಗೆ ಯಾವುದೇ ನೋಟಿಸ್ ನೀಡದೇ ಇರುವುದರಿಂದ, ಅರ್ಜಿದಾರರು ಕಾನೂನಿನಿಂದ ಪಲಾಯನ ಮಾಡುತ್ತಿದ್ದಾರೆ ಮತ್ತು ನ್ಯಾಯ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಊಹಿಸಲು ಆಗದು…” ಎಂಬುದಾಗಿ ಆದೇಶದಲ್ಲಿ ತಿಳಿಸಲಾಗಿದೆ.

ಅರ್ಜಿದಾರರು ತನಿಖೆಗೆ ಸಹಕರಿಸಲಿದ್ದಾರೆ ಮತ್ತು ಪ್ರಸ್ತುತ ಫ್ರಾನ್ಸ್‌ನಿಂದ ಭಾರತಕ್ಕೆ ಹಿಂತಿರುಗಲು ಯಾವುದೇ ನಿರ್ಬಂಧಗಳಿಲ್ಲ ಎಂಬುದನ್ನು ಗಮನಿಸಿದ ನ್ಯಾಯಾಲಯ ಏಪ್ರಿಲ್ 30 ರಂದು ಮಂದಿರ್ ಮಾರ್ಗದ ಇಒಡಬ್ಲ್ಯೂ ಕಚೇರಿಯಲ್ಲಿ ತನಿಖಾಧಿಕಾರಿಯ ಮುಂದೆ ಹಾಜರಾಗುವಂತೆ ಅರ್ಜಿದಾರರಿಗೆ ನಿರ್ದೇಶನ ನೀಡಿತು.

ಅರ್ಜಿದಾರರು ಹಾಗೆ ಹಾಜರಾದ ಸಂದರ್ಭದಲ್ಲಿ ಆ ದಿನ ವಿಚಾರಣಾ ನ್ಯಾಯಾಲಯಕ್ಕೆ ಮನವಿ ಸಲ್ಲಿಸದೆ ಅರ್ಜಿದಾರರನ್ನು ಬಂಧಿಸುವಂತಿಲ್ಲ. ಅರ್ಜಿದಾರರ ಹಾಜರಾತಿಯನ್ನು ಗಮನಿಸಿ ಜಾಮೀನು ರಹಿತ ವಾರೆಂಟ್‌ ನೀಡಬೇಕು ಎಂದು ನ್ಯಾಯಾಲಯ ನಿರ್ದೇಶಿಸಿತು. ಇದೆಲ್ಲದರ ನಡುವೆ ಅರ್ಜಿದಾರರು ವರ್ಚುವಲ್‌ ವಿಧಾನದಲ್ಲಿ ವಿಚಾರಣೆಗೆ ಹಾಜರಾಗುತ್ತಿರಬೇಕು ಎಂದು ಅದು ಸೂಚಿಸಿತು.

ಅರ್ಜಿದಾರರ ಪರವಾಗಿ ವಕೀಲರಾದ ನಿಶಾಂಕ್ ಮಟ್ಟೂ ಮತ್ತು ಪ್ರತೀಕ್ ಗೌತಮ್ ಹಾಜರಾದರು. ಹೆಚ್ಚುವರಿ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಹಿರೇನ್‌ ಶರ್ಮಾ ಸರ್ಕಾರದ ಪರವಾಗಿ ವಾದ ಮಂಡಿಸಿದರು.

No stories found.
Kannada Bar & Bench
kannada.barandbench.com