ಗುಂಪು ಹಲ್ಲೆ, ಗೋರಕ್ಷಕರ ವಿರುದ್ಧ ದೆಹಲಿಯಲ್ಲಿ ಕುಳಿತು ತಾನು ಕ್ರಮ ಕೈಗೊಳ್ಳಲಾಗದು: ಸುಪ್ರೀಂ ಕೋರ್ಟ್

ಪ್ರತಿಯೊಂದು ರಾಜ್ಯದಲ್ಲಿಯೂ ಭಿನ್ನ ಸ್ಥಿತಿ ಇದ್ದು ಇದನ್ನು ದೆಹಲಿಯಲ್ಲಿ ಕುಳಿತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಷ್ಟೇ ಮೇಲ್ವಿಚಾರಣೆ ಮಾಡಲಾಗದು ಎಂದು ಪೀಠ ಹೇಳಿದೆ.
Mob lynching
Mob lynching
Published on

ಗುಂಪು ಹಿಂಸಾಚಾರ, ಗುಂಪು ಹತ್ಯೆಯಂತಹ ಘಟನೆಗಳ ಬಗ್ಗೆ ಅದರಲ್ಲಿಯೂ ಗೋ ಕಳ್ಳಸಾಗಣೆ ಇಲ್ಲವೇ ವಧೆಯಿಂದ ರಕ್ಷಿಸುವ ಹೆಸರಿನಲ್ಲಿ ಗೋರಕ್ಷಕರು ನಡೆಸುವ ಕೃತ್ಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್)  ಸುಪ್ರೀಂ ಕೋರ್ಟ್ ಮಂಗಳವಾರ ಮುಕ್ತಾಯಗೊಳಿಸಿದೆ.

ವಿವಿಧ ರಾಜ್ಯಗಳಲ್ಲಿ ಇಂತಹ ಘಟನೆಗಳಿಗೆ ಕಾರಣವಾಗುವ ಅಂಶಗಳು ಭಿನ್ನವಾಗಿರಬಹುದಾಗಿದ್ದು, ದೆಹಲಿಯಲ್ಲಿ ಕುಳಿತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಇಂತಹ ಸಮಸ್ಯೆಗಳನ್ನು ಸೂಕ್ಷ್ಮವಾಗಿ ನಿರ್ವಹಿಸುವುದು ಪ್ರಾಯೋಗಿಕವಾಗಿ ಸಾಧುವಲ್ಲ ಎಂದು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಕೆ ವಿನೋದ್ ಚಂದ್ರನ್ ಅವರಿದ್ದ ಪೀಠ ತರ್ಕಿಸಿತು.

Also Read
ಆದಿವಾಸಿ ಮಧು ಗುಂಪು ಹತ್ಯೆ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು ನೀಡಿ, ಉಳಿದವರಿಗೆ ನಿರಾಕರಿಸಿದ ಕೇರಳ ಹೈಕೋರ್ಟ್

ಅಪರಾಧಿಗಳೆಂದು ಅನುಮಾನ ಬಂದವರ ಆಸ್ತಿ ನೆಲಸಮ ಮಾಡುವ ಕುರಿತಾದ ಕಾನೂನುಬಾಹಿರ ಶಿಕ್ಷೆ ನೀಡಿರುವ ಪ್ರಕರಣಗಳಲ್ಲಿಯೂ ನ್ಯಾಯಾಲಯವು ಪಕ್ಷಕಾರರಿಗೆ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರವನ್ನು ಎಡತಾಕುವ ಸ್ವಾತಂತ್ರ್ಯ ನೀಡಿದೆ. ಪ್ರತಿಯೊಂದು ರಾಜ್ಯದಲ್ಲಿಯೂ ಭಿನ್ನ ಸ್ಥಿತಿ ಇದ್ದು ಕೆಲ ರಾಜ್ಯಗಳಲ್ಲಿ ಗೋಮಾಂಸ ಸೇವನೆ ಸರ್ವೇಸಾಮಾನ್ಯವಾದ ಸಂಗತಿಯಾಗಿದೆ ಎಂದು ನ್ಯಾ. ಗವಾಯಿ ತಿಳಿಸಿದರು.

ತೆಹ್ಸೀನ್ ಪೂನಾವಾಲಾ ಪ್ರಕರಣದಲ್ಲಿಗುಂಪು ಹತ್ಯೆಯ ಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಲು ಈಗಾಗಲೇ ವಿವರವಾದ ನಿರ್ದೇಶನಗಳನ್ನು ನೀಡಲಾಗಿದೆ ಎಂದು ನ್ಯಾಯಾಲಯ ತಿಳಿಸಿತು.

ಈ ನಿರ್ದೇಶನಗಳಿಗೆ ಎಲ್ಲಾ ಅಧಿಕಾರಿಗಳು ಬದ್ಧರಾಗಿರಬೇಕಿದ್ದು ನಿರ್ದೇಶನ ಉಲ್ಲಂಘನೆಯಾದರೆ ಅದರಿಂದ ತೊಂದರೆಗೊಳಗಾಗುವ ವ್ಯಕ್ತಿಗಳು ಪರಿಹಾರ ಪಡೆಯಬಹುದಾಗಿದೆ ಎಂದು ಅದು ಹೇಳಿತು.

"ಆದಾಗ್ಯೂ, ನಾವು ದೆಹಲಿಯಲ್ಲಿ ಕುಳಿತು ದೇಶದ ವಿವಿಧ ಪ್ರದೇಶಗಳಲ್ಲಿನ ಸಮಸ್ಯೆಗಳನ್ನು ಮೇಲ್ವಿಚಾರಣೆ ಮಾಡಲು ಸಾಧ್ಯವಿಲ್ಲ. ನಮ್ಮ ಅಭಿಪ್ರಾಯದಲ್ಲಿ ಈ ನ್ಯಾಯಾಲಯದಿಂದ ಅಂತಹ ಸೂಕ್ಷ್ಮ ನಿರ್ವಹಣೆ ಕಾರ್ಯಸಾಧ್ಯವಲ್ಲ. ಯಾವುದೇ ವ್ಯಕ್ತಿಗೆ ತೊಂದರೆಯಾದರೆ, ಕಾನೂನಿನ ಪ್ರಕಾರ ಸಂಬಂಧಪಟ್ಟ ನ್ಯಾಯಾಲಯವನ್ನು ಅವರು ಸಂಪರ್ಕಿಸಬಹುದು " ಎಂದು ಆದೇಶದಲ್ಲಿ ತಿಳಿಸಲಾಗಿದೆ.

Also Read
ಗೋವಿಗೆ ಮೂಲಭೂತ ಹಕ್ಕು ಕಲ್ಪಿಸಿ, ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು: ಅಲಾಹಾಬಾದ್‌ ಹೈಕೋರ್ಟ್‌

ಇದೇ ರೀತಿಯ ಕಾರಣಗಳಿಗಾಗಿ, ವಿವಿಧ ರಾಜ್ಯಗಳಲ್ಲಿ ಜಾರಿಗೊಳಿಸಲಾದ ಗೋಸಂರಕ್ಷಣಾ ಕಾನೂನುಗಳ ಸಿಂಧುತ್ವ ಪರಿಶೀಲಿಸಲು ನ್ಯಾಯಾಲಯ ನಿರಾಕರಿಸಿತು, ಅಂತಹ ವಿಷಯಗಳ ಬಗ್ಗೆ ಸಂಬಂಧಪಟ್ಟ ರಾಜ್ಯಗಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಬಹುದು ಎಂದು ಅದು ಸ್ಪಷ್ಟಪಡಿಸಿತು.

ಗುಂಪು ಹಲ್ಲೆ ಘಟನೆಗಳ ಕುರಿತು ರಾಷ್ಟ್ರೀಯ ಮಹಿಳಾ ಒಕ್ಕೂಟ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

Kannada Bar & Bench
kannada.barandbench.com