ಭಾರತಕ್ಕೆ ಮರಳುವ ದಿನವನ್ನು ನಿಖರವಾಗಿ ಹೇಳಲಾಗದು: ಬಾಂಬೆ ಹೈಕೋರ್ಟ್‌ಗೆ ವಿಜಯ್‌ ಮಲ್ಯ ಉತ್ತರ

ಪ್ರಸ್ತುತ ತಮ್ಮ ಬಳಿ ಸಕ್ರಿಯವಾದ ಪಾಸ್‌ಪೋರ್ಟ್‌ ಇಲ್ಲದಿರುವುದರಿಂದ ಇಂಗ್ಲೆಂಡ್‌ ತೊರೆಯಲು ಸಾಧ್ಯವಿಲ್ಲ ಎಂದು ಮಲ್ಯ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
Vijay Mallya and Bombay High Court
Vijay Mallya and Bombay High Court
Published on

ಇಂಗ್ಲೆಂಡ್‌ನಿಂದ ಭಾರತಕ್ಕೆ ಮರಳುವ ದಿನವನ್ನು ನಿಖರವಾಗಿ ಹೇಳಲಾಗದು ಎಂಬುದಾಗಿ ದೇಶ ತೊರೆದಿರುವ ಬೆಂಗಳೂರು ಮೂಲದ ಜಾಗತಿಕ ಉದ್ಯಮಿ ವಿಜಯ್‌ ಮಲ್ಯ ಬುಧವಾರ ಬಾಂಬೆ ಹೈಕೋರ್ಟ್‌ಗೆ ತಿಳಿಸಿದ್ದಾರೆ.

ಪಲಾಯನಗೈದ ಆರ್ಥಿಕ ಅಪರಾಧಿಗಳ ಕಾಯಿದೆ (ಎಫ್‌ಇಒ) ಪ್ರಶ್ನಿಸಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ದೇಶಕ್ಕೆ ಮರಳುವ ಸಂಬಂಧ ನ್ಯಾಯಾಲಯ ಕೇಳಿದ ಪ್ರಶ್ನೆಗೆ ಅವರು ಈ ಉತ್ತರ ನೀಡಿದ್ದಾರೆ.

Also Read
ಭಾರತಕ್ಕೆ ಮರಳದಿದ್ದರೆ ಅರ್ಜಿ ವಿಚಾರಣೆ ಇಲ್ಲ: ವಿಜಯ್ ಮಲ್ಯಗೆ ಬಾಂಬೆ ಹೈಕೋರ್ಟ್ ಎಚ್ಚರಿಕೆ

ನ್ಯಾಯಾಲಯದ ವ್ಯಾಪ್ತಿಗೆ ಮಲ್ಯ ಬಾರದ ಹೊರತು ಎಫ್ಇಒ ಕಾಯಿದೆ ವಿರುದ್ಧ ಅವರು ಸಲ್ಲಿಸಿದ್ದ ಅರ್ಜಿ ಆಲಿಸುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಚಂದ್ರಶೇಖರ್‌ ಮತ್ತು ನ್ಯಾ. ಗೌತಮ್‌ ಅಂಖಡ್‌ ಅವರಿದ್ದ ಪೀಠ ಈ ಹಿಂದೆ ತಿಳಿಸಿತ್ತು.

ಈ ಬಗ್ಗೆ ನ್ಯಾಯಾಲಯಕ್ಕೆ ಪ್ರತಿಕ್ರಿಯೆ ನೀಡಿರುವ ಮಲ್ಯ ಪರ ವಾದ ಮಂಡಿಸಿದ ಹಿರಿಯ ವಕೀಲ ಅಮಿತ್‌ ದೇಸಾಯಿ, ಮಲ್ಯ ಅವರು ಇಂಗ್ಲೆಂಡ್ ಮತ್ತು ವೇಲ್ಸ್ ತೊರೆಯಲು ಅಥವಾ ಅದಕ್ಕೆ ಯತ್ನಿಸಲು ಅಥವಾ ಯಾವುದೇ ಅಂತಾರಾಷ್ಟ್ರೀಯ ಪ್ರಯಾಣ ದಾಖಲಾತಿಗಳನ್ನು ಹೊಂದಲು ಅಥವಾ ಅದಕ್ಕಾಗಿ ಅರ್ಜಿ ಸಲ್ಲಿಸಲು ಅನುಮತಿ ಇಲ್ಲ. ಅವರು ಯಾವಾಗ ದೇಶಕ್ಕೆ ಮರಳುತ್ತಾರೆ ಎಂದು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ ಎಂಬುದಾಗಿ ವಿವರಿಸಿದರು.

ಸರ್ಕಾರಕ್ಕೆ ಸಲ್ಲಿಸಬೇಕಾದ ಬಾಕಿ ಮೊತ್ತ ಹಾಗೂ ಭಾರತದಲ್ಲಿನ ತಮ್ಮ ಆಸ್ತಿ ಮಾರಾಟದಿಂದ ಬಹುತೇಕವಾಗಿ ಅವುಗಳನ್ನು ಸರ್ಕಾರವು ವಸೂಲಿ ಮಾಡಿದೆ ಎನ್ನುವ ವಿವರ ನೀಡಿ ಮಲ್ಯ ಸಲ್ಲಿಸಿರುವ ಅಫಿಡವಿಟ್‌ಗೆ ಪ್ರತಿಯಾಗಿ ಕೇಂದ್ರ ಸರ್ಕಾರವು ಅಫಿಡವಿಟ್‌ ಸಲ್ಲಿಸಿದೆ ಎಂದು ಕೇಂದ್ರ ಸರ್ಕಾರದ ಪರವಾಗಿ ವಾದಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ನ್ಯಾಯಾಲಯದ ಗಮನಕ್ಕೆ ತಂದರು.

Also Read
ದೇಶಭ್ರಷ್ಟ ಅಪರಾಧಿಗಳ ಕಾಯಿದೆ: ಅರ್ಜಿ ವಿಚಾರಣೆಗೂ ಮುನ್ನ ದೇಶಕ್ಕೆ ಮರಳುವಂತೆ ಮಲ್ಯಗೆ ಬಾಂಬೆ ಹೈಕೋರ್ಟ್ ತಾಕೀತು

ಸಂಬಂಧಪಟ್ಟ ನ್ಯಾಯಾಲಯ ಈಗಾಗಲೇ ಅವರನ್ನು ಪಲಾಯನಗೈದ ಅಪರಾಧಿ ಎಂದು ಘೋಷಿಸಿದೆ. ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ವಿಚಾರದಲ್ಲಿ ಸಾಕಷ್ಟು ಪ್ರಗತಿಯಾಗಿದ್ದು ಈ ಹಂತದಲ್ಲಿ ಮಲ್ಯ ತಾವು ಸಲ್ಲಿಸಿರುವ ಅಫಿಡವಿಟ್‌ ಹಾಗೂ ತಮ್ಮ ವಿರುದ್ಧ ಬಾಕಿ ಇರುವ ವಿಚಾರಣೆಯನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತಪಡಿಸಿದರು.

ಅಂತಿಮವಾಗಿ ನ್ಯಾಯಾಲಯ ಕೇಂದ್ರ ಸರ್ಕಾರಕ್ಕೆ ಒಂದು ವಾರದಲ್ಲಿ ಪ್ರತಿಕ್ರಿಯೆ ಸಲ್ಲಿಸಲು ಸೂಚಿಸಿತು. 2026ರ ಮಾರ್ಚ್ ಎರಡನೇ ವಾರಕ್ಕೆ ಪ್ರಕರಣ ಮುಂದೂಡಿತು. ಅಲ್ಲದೆ ಮೆಹ್ತಾ ಅವರು ತಮ್ಮ ಅರ್ಜಿಯನ್ನು ಅಥವಾ ಯಾವುದೇ ಉದ್ಭವಿಸುವ ವಿಚಾರಣೆಯನ್ನು ಹಸ್ತಾಂತರ ಪ್ರಕ್ರಿಯೆಯಲ್ಲಿ ಬಳಸುವಂತಿಲ್ಲ ಎಂದು ಸ್ಪಷ್ಟಪಡಿಸಿತು.

Kannada Bar & Bench
kannada.barandbench.com