ಭಾರತಕ್ಕೆ ಮರಳದಿದ್ದರೆ ಅರ್ಜಿ ವಿಚಾರಣೆ ಇಲ್ಲ: ವಿಜಯ್ ಮಲ್ಯಗೆ ಬಾಂಬೆ ಹೈಕೋರ್ಟ್ ಎಚ್ಚರಿಕೆ

ಮಲ್ಯ ಭಾರತಕ್ಕೆ ಮರಳದಿದ್ದರೆ, ಪಲಾಯನಗೈದ ಆರ್ಥಿಕ ಅಪರಾಧಿಗಳ ಕಾಯಿದೆ 2018ಅನ್ನು ಪ್ರಶ್ನಿಸಿ ಮಲ್ಯ ಸಲ್ಲಿಸಿರುವ ಅರ್ಜಿಯನ್ನು ಆಲಿಸುವುದಿಲ್ಲ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ.
Vijya Mallya
Vijya Mallyax.com
Published on

ಇಂಗ್ಲೆಂಡ್‌ನಲ್ಲಿ ತಲೆಮರೆಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯ ಅವರು ಭಾರತೀಯ ಅಧಿಕಾರಿಗಳ ಕಣ್ತಪ್ಪಿಸಿ ನ್ಯಾಯಾಲಯದಿಂದ ಪರಿಹಾರ ಪಡೆಯಲು ಯತ್ನಿಸುತ್ತಿರುವುದನ್ನು ಬಾಂಬೆ ಹೈಕೋರ್ಟ್ ಗುರುವಾರ ತೀಕ್ಷ್ಣವಾಗಿ ಪ್ರಶ್ನಿಸಿದೆ [ವಿಜಯ್‌ ಮಲ್ಯ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಪಲಾಯನಗೈದ ಆರ್ಥಿಕ ಅಪರಾಧಿಗಳ ಕಾಯಿದೆ 2018 ಅನ್ನು ಪ್ರಶ್ನಿಸಿ ಮಲ್ಯ ಸಲ್ಲಿಸಿರುವ ಅರ್ಜಿಯನ್ನುಆಲಿಸಬೇಕು ಎನ್ನುವುದಾದರೆ ಅವರು ಭಾರತಕ್ಕೆ ಮರಳಬೇಕು ಎಂದು ಮುಖ್ಯ ನ್ಯಾಯಮೂರ್ತಿ ಶ್ರೀ ಚಂದ್ರಶೇಖರ್ ಮತ್ತು ನ್ಯಾಯಮೂರ್ತಿ ಗೌತಮ್ ಅಂಖಡ್‌ ಅವರಿದ್ದ ಪೀಠ ಸ್ಪಷ್ಟಪಡಿಸಿತು.

Also Read
ಸಾವರ್ಕರ್ ಭಾವಚಿತ್ರ ಪ್ರಶ್ನಿಸಿದ್ದ ಪಿಐಎಲ್: ಸಮಯ ವ್ಯರ್ಥ ಎಂದ ಸುಪ್ರೀಂ ಕೋರ್ಟ್, ವಿಚಾರಣೆಗೆ ನಕಾರ

ಮಲ್ಯ ಅವರು ಮರಳಲೇಬೇಕು. ಮರಳುವ ಸಾಧ್ಯತೆ ಇಲ್ಲ ಎನ್ನುವುದಾದರೆ ಈ ಅರ್ಜಿಯ ವಿಚಾರಣೆ ನಡೆಸುವುದಿಲ್ಲ ಎಂದು ಪೀಠ ಎಚ್ಚರಿಕೆ ನೀಡಿತು.

ತಮ್ಮನ್ನು ಪಲಾಯನಗೈದ ಆರ್ಥಿಕ ಅಪರಾಧಿ ಎಂದು ಘೋಷಿಸಿರುವುದನ್ನು ಹಾಗೂ ಕಾಯಿದೆಯನ್ನು ಪ್ರಶ್ನಿಸಿ ಮಲ್ಯ ಅರ್ಜಿ ಸಲ್ಲಿಸಿದ್ದರು.

ಇಂಗ್ಲೆಂಡ್‌ನಿಂದ ಭಾರತಕ್ಕೆ ಮರಳುವ ವಿಚಾರ ಸ್ಪಷ್ಟಪಡಿಸುವ ಅಫಿಡವಿಟ್‌ ಸಲ್ಲಿಸುವಂತೆ ಕಳೆದ ಡಿಸೆಂಬರ್ 23ರಂದು ನ್ಯಾಯಾಲಯ ಮಲ್ಯಗೆ ಆದೇಶಿಸಿತ್ತು. ಆದರೆ ಈ ಕುರಿತು ಅವರಿನ್ನೂ ಅಫಿಡವಿಟ್‌ ಸಲ್ಲಿಸಿಲ್ಲ ಎಂಬುದನ್ನು ನ್ಯಾಯಾಲಯ ಗಮನಿಸಿತು.

ಮಲ್ಯ ಅವರು ಬ್ಯಾಂಕ್‌ಗಳ ವಸೂಲಾತಿ ಕ್ರಮವನ್ನು ಪ್ರಶ್ನಿಸಿ ಪ್ರಕರಣವನ್ನು ಬೇರೆ ದಿಕ್ಕಿಗೆ ತಿರುಗಿಸಲು ಯತ್ನಿಸುತ್ತಿದ್ದಾರೆ ಎಂದು ಜಾರಿ ನಿರ್ದೇಶನಾಲಯದ ಪರವಾಗಿ ಹಾಜರಾದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ವಾದಿಸಿದರು. ಪಲಾಯನಗೈದ ನಂತರ ಹಾಗೂ ಲಂಡನ್‌ನಲ್ಲಿ ಹಸ್ತಾಂತರ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದಾಗಲೇ 2018ರ ಕಾಯಿದೆಯನ್ನು ಅವರು ಪ್ರಶ್ನಿಸಿದ್ದಾರೆ ಎಂದರು.

ಭಾರತಕ್ಕೆ ಬಂದು ಎಲ್ಲ ವಿಚಾರಗಳನ್ನೂ ತಿಳಿಸಬಹುದು. ಆದರೆ ದೇಶದ ಕಾನೂನಿನ ಮೇಲೆ ನಂಬಿಕೆ ಇಲ್ಲದವರಂತೆ ವರ್ತಿಸಿ ನ್ಯಾಯಾಧಿಕಾರ ಕೋರುವ ಹಕ್ಕು ಮಲ್ಯ ಅವರಿಗೆ ಇಲ್ಲ ಎಂದು ಮೆಹ್ತಾ ಹೇಳಿದರು.

Also Read
ಡಿಜಿಟಲ್‌ ಅರೆಸ್ಟ್‌: ಬ್ಯಾಂಕ್‌ಗಳ ಪಾತ್ರದ ಬಗ್ಗೆ ಸುಪ್ರೀಂ ಕೋರ್ಟ್‌ ಕಳವಳ

ಕಾಯಿದೆಯ ಸ್ವರೂಪದ ಪ್ರಕಾರ ಅವರು ಭಾರತಕ್ಕೆ ಬಾರದಿದ್ದರೂ ಅರ್ಜಿ ಆಲಿಸಬಹುದಾಗಿದೆ ಎಂದು ಮಲ್ಯ ಪರವಾಗಿ ಹಿರಿಯ ವಕೀಲ ಅಮಿತ್ ದೇಸಾಯಿ ವಾದಿಸಿದರು. ಆದರೆ, ಈಗಾಗಲೇ ನೀಡಿರುವ ಆದೇಶವನ್ನು ಪಾಲಿಸದೆ ಇರುವುದರಿಂದ, ಮುಂದೆಯೂ ಆದೇಶ ಪಾಲನೆಯಾಗದಿದ್ದರೆ ಕ್ರ,ಮ ಕೈಗೊಳ್ಳಬೇಕಾಗುತ್ತದೆ ಎಂದು ಪೀಠ ಎಚ್ಚರಿಕೆ ನೀಡಿತು.

“ನ್ಯಾಯಸಮ್ಮತವಾಗಿ ನೋಡುವ ಮೂಲಕ, ಅರ್ಜಿಯನ್ನು ಈಗಲೇ ವಜಾಗೊಳಿಸುತ್ತಿಲ್ಲ; ನಿಮಗೆ ಇನ್ನೊಂದು ಅವಕಾಶ ನೀಡುತ್ತಿದ್ದೇವೆ,” ಎಂದ ನ್ಯಾಯಾಲಯ ಪ್ರಕರಣವನ್ನು ಮುಂದಿನ ವಾರಕ್ಕೆ ಮುಂದೂಡಿತು.

Kannada Bar & Bench
kannada.barandbench.com