
ತನ್ನ ನೋಂದಾಯಿತ ವಾಣಿಜ್ಯ ಚಿಹ್ನೆಯಾದ 'ಚಿಂಗ್ಸ್ ಶೆಜ್ವಾನ್ ಚಟ್ನಿ'ಯನ್ನು ಹೋಲುವಂತೆ 'ಶೆಜ್ವಾನ್ ಚಟ್ನಿ' ಹೆಸರು ಬಳಸಲಾಗುತ್ತಿದೆ ಎಂದು ದೂರಿ ಟಾಟಾ ಸಮೂಹ ಒಡೆತನದ ಕ್ಯಾಪಿಟಲ್ ಫುಡ್ಸ್ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಶುಕ್ರವಾರ ಡಾಬರ್ ಇಂಡಿಯಾ ಲಿಮಿಟೆಡ್‌ಗೆ ನೋಟಿಸ್ ನೀಡಿದೆ [ಕ್ಯಾಪಿಟಲ್ ಫುಡ್ಸ್ ಲಿಮಿಟೆಡ್ ಮತ್ತು ಡಾಬರ್ ಇಂಡಿಯಾ ಲಿಮಿಟೆಡ್ ನಡುವಣ ಪ್ರಕರಣ].
ಪ್ರಕರಣವನ್ನು ಫೆಬ್ರವರಿ ಕೊನೆಯ ವಾರದಲ್ಲಿ ವಿಚಾರಣೆ ನಡೆಸುವುದಾಗಿ ನ್ಯಾಯಮೂರ್ತಿ ಮಿನಿ ಪುಷ್ಕರ್ಣ ಅವರು ತಿಳಿಸಿದ್ದಾರೆ.
ಇದೇ ವೇಳೆ ವಾಣಿಜ್ಯ ಚಿಹ್ನೆ ರಿಜಿಸ್ಟ್ರಿಯಿಂದ ಶೆಜ್ವಾನ್ ಚಟ್ನಿ ನೋಂದಣಿ ರದ್ದುಗೊಳಿಸಲು ಅಕ್ಟೋಬರ್ 2024ರಲ್ಲಿ ಡಾಬರ್ ಸಲ್ಲಿಸಿದ್ದ ಮನವಿಯ ವಿಚಾರಣೆ ಫೆಬ್ರವರಿ 5ರಂದು ನಡೆಯಲಿದೆ.
ಗಮನಾರ್ಹ ಮನ್ನಣೆ ಗಳಿಸಿರುವ ತನ್ನ ವಾಣಿಜ್ಯ ಚಿಹ್ನೆಯಾದ 'ಶೆಜ್ವಾನ್ ಚಟ್ನಿʼಯನ್ನು ಹೆಚ್ಚು ಪ್ರಚುರಪಡಿಸಲು ಮತ್ತು ರಕ್ಷಿಸಲು ಸಾಕಷ್ಟು ಹಣ ಹೂಡಿರುವುದಾಗಿ ಕ್ಯಾಪಿಟಲ್ ಫುಡ್ಸ್ ಹೇಳಿಕೊಂಡಿತ್ತು.
ಈಗಾಗಲೇ ತನ್ನ ಚಿಂಗ್ಸ್ ಶೆಜ್ವಾನ್ ಚಟ್ನಿ ವಾಣಿಜ್ಯ ಚಿಹ್ನೆಗೆ ನ್ಯಾಯಾಲಯಗಳು ಮಾನ್ಯತೆ ನೀಡಿವೆ. ಡಾಬರ್‌ನ ಶೆಜ್ವಾನ್ ಚಟ್ನಿ ಎಂಬ ಹೆಸರಿನ ಉತ್ಪನ್ನವನ್ನು ನೋಡಿದಾಗ ಗ್ರಾಹಕರು ತನ್ನ ಉತ್ಪನ್ನವಾದ ಚಿಂಗ್ಸ್ ಶೆಜ್ವಾನ್ ಚಟ್ನಿ ಉತ್ಪನ್ನದೊಂದಿಗೆ ನಂಟು ಕಲ್ಪಿಸಿಕೊಳ್ಳುತ್ತಾರೆ. ಹೀಗಾಗಿ ಡಾಬರ್ ಆ ಹೆಸರನ್ನು ಬಳಸುವುದಕ್ಕೆ ತನ್ನ ವಿರೋಧವಿದೆ ಎಂದು ಅದು ವಾದಿಸಿತ್ತು.
ಡಾಬರ್ 2024ರಲ್ಲಿ ತನ್ನ ಸ್ವಂತ ಉತ್ಪನ್ನವಾದ 'ಶೆಜ್ವಾನ್ ಚಟ್ನಿ' ಉತ್ಪನ್ನವನ್ನು 2024ರಲ್ಲಿ ಬಿಡುಗಡೆ ಮಾಡಿತ್ತು. ಅದರೊಂದಿಗೆ ವಿವಾದ ತಲೆ ಎತ್ತಿತ್ತು. ಕ್ಯಾಪಿಟಲ್ ಫುಡ್ಸ್ ಪರವಾಗಿ ಶೆಜ್ವಾನ್ ಚಟ್ನಿ ನೋಂದಣಿ ಮಾಡುವುದನ್ನು ಡಾಬರ್ ಪ್ರಶ್ನಿಸಿತ್ತು.
ಶೆಜ್ವಾನ್ ಚಟ್ನಿ ಹೆಚ್ಚು ವಿವರಣಾತ್ಮಕವೂ ಸಾಮಾನ್ಯವೂ ಆಗಿದೆ ಎಂದು ಅದು ವಾದಿಸಿತ್ತು. ಹೀಗೆ ಹೆಸರು ನೋಂದಾಯಿಸಿರುವುದು ಸಾಮಾನ್ಯ ಮತ್ತು ವಿವರಣಾತ್ಮಕ ಪದಗಳಿಗೆ ಏಕಸ್ವಾಮ್ಯತೆ ಸೃಷ್ಟಿಸಿದಂತಾಗುತ್ತದೆ. ಸಾಮಾನ್ಯ ಮತ್ತು ವಿವರಣಾತ್ಮಕ ಪದಗಳನ್ನು ಬಳಸಲು ತನಗೆ ವಿಶೇಷ ಹಕ್ಕು ಇಲ್ಲದಿದ್ದರೂ ಯಾವುದೇ ಹಕ್ಕು ನಿರಾಕರಣೆ ಇಲ್ಲದೆ ಕ್ಯಾಪಿಟಲ್ ಫುಡ್ಸ್ ವಾಣಿಜ್ಯ ಚಿಹ್ನೆಯನ್ನು ನೋಂದಾಯಿಸಿದೆ ಎಂದು ಅದು ಹೇಳಿತ್ತು.