ಕೆಆರ್‌ಎಸ್‌ಗೆ ಹಾನಿಯಾಗದಂತೆ ಎಚ್ಚರ ಅಗತ್ಯ; ರಾಜ್ಯ ಜಲಾಶಯಗಳ ಸುರಕ್ಷಿತ ಸಮಿತಿ ಸಂಪರ್ಕಿಸಲು ಹೈಕೋರ್ಟ್‌ ನಿರ್ದೇಶನ

ಕಲ್ಲು ಗಣಿಗಾರಿಕೆ ಹಾಗೂ ಸ್ಫೋಟಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ತೀರ್ಮಾನ ಪ್ರಕಟಿಸಲು ಪೀಠ ಪರಿಣಿತಿ ಹೊಂದಿಲ್ಲ. ಸಮಿತಿ ಮುಂದೆ ಮನವಿ ಸಲ್ಲಿಸಿ ಬಗೆಹರಿಸಿಕೊಳ್ಳುವಂತೆ ಅರ್ಜಿದಾರರಿಗೆ ನಿರ್ದೇಶಿಸಿ ಅರ್ಜಿ ಇತ್ಯರ್ಥಪಡಿಸಿದ ನ್ಯಾಯಾಲಯ.
Chief Justice N V Anjaria and Justice Krishna S. Dixit
Chief Justice N V Anjaria and Justice Krishna S. Dixit
Published on

ಗಣಿಗಾರಿಕೆ ಮತ್ತು ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳಿಂದ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕೃಷ್ಣರಾಜ ಸಾಗರ (ಕೆಆರ್‌ಎಸ್‌) ಅಣೆಕಟ್ಟಿಗೆ ಧಕ್ಕೆಯಾಗಂತೆ ನೋಡಿಕೊಳ್ಳಬೇಕಾದ ತುರ್ತು ಇಂದು ಹೆಚ್ಚಿದೆ ಎಂದು ಕರ್ನಾಟಕ ಹೈಕೋರ್ಟ್ ಗುರುವಾರ ಕಾಳಜಿ ವ್ಯಕ್ತಪಡಿಸಿದೆ.

ಕೆಆರ್‌ಎಸ್‌ ಅಣೆಕಟ್ಟಿನ 20 ಕಿಮೀ ಸುತ್ತಳತೆಯ ವ್ಯಾಪ್ತಿ ಪ್ರದೇಶದಿಂದ ಹೊರಗಿರುವ ಕಾರಣ ತಮಗೆ ಕ್ರಷಿಂಗ್ ಚಟುವಟಿಕೆ ನಡೆಸಲು ಅನುಮತಿ ನೀಡಲು ಸರ್ಕಾರಕ್ಕೆ ಆದೇಶಿಸುವಂತೆ ಕೋರಿ ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಕನಗನ ಮರಡಿ ಗ್ರಾಮದ ಮಂಚಮ್ಮದೇವಿ ಸ್ಟೋನ್‌ ಕ್ರಷರ್‌ ಹಾಗೂ ಎಂ ಸ್ಯಾಂಡ್‌ ಘಟಕದ ಮಾಲೀಕ ವೈ ಬಿ ಅಶೋಕ್‌ಗೌಡ ಪಟೇಲ್‌ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠ ತಿರಸ್ಕರಿಸಿತು.

ಕೆಆರ್‌ಎಸ್‌ ಅಣೆಕಟ್ಟು ವ್ಯಾಪ್ತಿ ಹಾಗೂ ಅದರಾಚೆಗೂ ಕೂಡಾ ಯಾವುದೇ ಕಲ್ಲು ಗಣಿಗಾರಿಕೆ ಹಾಗೂ ಸ್ಫೋಟಕ ಚಟುವಟಿಕೆಗಳಿಗೆ ಸಂಬಂಧಿಸಿದ ತಕರಾರುಗಳಿಗೆ ಪರಿಹಾರ ಪಡೆಯಲು ಶಾಸನಾತ್ಮಕವಾಗಿ ರೂಪುಗೊಂಡಿರುವ ಕರ್ನಾಟಕ ರಾಜ್ಯ ಜಲಾಶಯಗಳ ಸುರಕ್ಷಿತ ಸಮಿತಿಯ ಮುಂದೆಯೇ ಮನವಿ ಸಲ್ಲಿಸಬೇಕು. ಈ ವಿಚಾರದಲ್ಲಿ ಸಮಿತಿಯ ತೀರ್ಮಾನವೇ ಅಂತಿಮ. ಈ ವಿಚಾರದಲ್ಲಿ ತೀರ್ಮಾನ ಪ್ರಕಟಿಸಲು ನ್ಯಾಯಾಲಯ ಪರಿಣಿತಿ ಹೊಂದಿಲ್ಲ. ಅದರಂತೆ ನಿಮ್ಮ ಮನವಿಯನ್ನು ಸಮಿತಿ ಮುಂದೆಯೇ ಸಲ್ಲಿಸಿ ಬಗೆಹರಿಸಿಕೊಳ್ಳುವಂತೆ ಅರ್ಜಿದಾರರಿಗೆ ನಿರ್ದೇಶಿಸಿ ಪೀಠವು ಅರ್ಜಿ ಇತ್ಯರ್ಥಪಡಿಸಿತು.

ಇದಕ್ಕೂ ಮುನ್ನ, ಅರ್ಜಿದಾರರ ಪರ ವಕೀಲರು “ಘಟಕದ ಮನವಿ ಪರಿಗಣಿಸಲು ಸರ್ಕಾರಕ್ಕೆ ಆದೇಶಿಸಬೇಕು” ಎಂದು ಕೋರಿದರು.

ಅದಕ್ಕೆ ಪ್ರತಿಕ್ರಿಯಿಸಿದ ಪೀಠವು “ಕರ್ನಾಟಕ, ತಮಿಳುನಾಡು, ಪುದುಚೇರಿ ಮತ್ತು ಕೇರಳಕ್ಕೆ ನೀರುಣಿಸುವ ಕಾವೇರಿಯು ಜೀವನದಿಯಾಗಿದೆ. ಕೆಆರ್‌ಎಸ್‌ ಅಣೆಕಟ್ಟಿನ ಸುತ್ತಮುತ್ತಲ ಪ್ರದೇಶದಲ್ಲಿ ಯಾವುದೇ ರೀತಿಯ ಗಣಿಗಾರಿಕೆ ಮತ್ತು ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳು ಅತ್ಯಂತ ಅಪಾಯಕಾರಿ. ಆದ್ದರಿಂದ, ಅಣೆಕಟ್ಟಿಗೆ ಕಿಂಚಿತ್ತೂ ಧಕ್ಕೆಯಾಗಂತೆ ನೋಡಿಕೊಳ್ಳಬೇಕಾದ ತುರ್ತು ಹಿಂದಿಗಿಂತ ಇಂದು ಹೆಚ್ಚಿದೆ” ಎಂದು ನುಡಿಯಿತು.

“ಅಣೆಕಟ್ಟಿಗೆ ಏನಾದರೂ ಆದರೆ ಗತಿಯೇನು? ಮುಂದಿನ ಪರಿಸ್ಥಿತಿ ಏನು?” ಎಂದು ಪ್ರಶ್ನಿಸಿದ ಪೀಠವು “ಕೆಆರ್‌ಎಸ್‌ ಸುತ್ತಮುತ್ತಲ ಪ್ರದೇಶದಲ್ಲಿ ಯಾವುದೇ ಗಣಿಗಾರಿಕೆಯ ಚಟುವಟಿಕೆಗಳು ಅಪಾಯ ತಂದೊಡ್ಡಬಲ್ಲವು. ಕೆಎಆರ್‌ಎಸ್‌ ವ್ಯಾಪ್ತಿಯಲ್ಲಿ ಗಣಿಗಾರಿಕೆ ಹಾಗೂ ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳಿಗೆ ಸಂಬಂಧಿಸಿದ ತಕರಾರುಗಳನ್ನು ಕರ್ನಾಟಕ ರಾಜ್ಯ ಜಲಾಶಯಗಳ ಸುರಕ್ಷಿತ ಸಮಿತಿಯ ಮುಂದೆಯೇ ಮನವಿ ಸಲ್ಲಿಸಬೇಕು. ಆ ಮನವಿಯನ್ನು ತಜ್ಞರ ಸಮಿತಿಯೇ ಪರಾಮರ್ಶಿಸಿ ಕ್ರಮ ಕೈಗೊಳ್ಳಬಹುದು” ಎಂದು ಹೇಳಿತು.

ಅಂತಿಮವಾಗಿ ಅರ್ಜಿದಾರರು ತಮ್ಮ ಮನವಿಯನ್ನು ಸಮಿತಿಯ ಮುಂದೆ ಸಲ್ಲಿಸಬೇಕು. ಒಂದೊಮ್ಮೆ ಅರ್ಜಿದಾರರು ಮನವಿ ಸಲ್ಲಿಸಿದರೆ ಅದನ್ನು ಪರಿಗಣಿಸಿ ಕಾನೂನು ಪ್ರಕಾರ ಸಮಿತಿ ತೀರ್ಮಾನ ಕೈಗೊಳ್ಳಬಹುದು. ಇನ್ನೂ ತಮ್ಮ ಮನವಿಯನ್ನು ಇಂತಿಷ್ಟೇ ಸಮಯದೊಳಗೆ ಅವಧಿಯಲ್ಲಿ ಇತ್ಯರ್ಥಗೊಳಿಸಬೇಕು ಎಂಬ ಬಗ್ಗೆ ಅರ್ಜಿದಾರರು ಸಮಿತಿಗೆ ಮನವಿ ಮಾಡಲು ಮುಕ್ತವಾಗಿದ್ದಾರೆ. ಆದರೆ, ನ್ಯಾಯಾಲಯವು ಈ ಕುರಿತು ಸಮಿತಿಗೆ ಗಡುವು ವಿಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿತು.

Also Read
ಕೆಆರ್‌ಎಸ್‌ ಸುರಕ್ಷತೆ ಕುರಿತ ಪ್ರಕರಣ: ಜಲಾಶಯ ಸುರಕ್ಷತಾ ಸಮಿತಿಯನ್ನು ಪಕ್ಷಕಾರನಾಗಿಸಲು ಸೂಚಿಸಿದ ಹೈಕೋರ್ಟ್‌

ತಮ್ಮದು ಕೇವಲ ಕ್ರಷರ್‌ ಮತ್ತು ಎಂ ಸ್ಯಾಂಡ್ ಘಟಕ. ಕಲ್ಲು ಸ್ಫೋಟಿಸುವುದು ಸೇರಿದಂತೆ ಗಣಿಗಾರಿಕೆಗೆ ಸಂಬಂಧಿಸಿದ ಇತರೆ ಯಾವುದೇ ನಿರ್ಬಂಧಿತ ಚಟುವಟಿಕೆ ಕೈಗೊಳ್ಳುತ್ತಿಲ್ಲ. ಕೆಆರ್‌ಎಸ್‌ ಸುತ್ತಲಿನ 20 ಕಿ ಮೀ ವ್ಯಾಪ್ತಿಯಲ್ಲಿ ಯಾವುದೇ ಗಣಿಗಾರಿಕೆ ಚಟುವಟಿಕೆ ನಡೆಸಲು ಹೈಕೋರ್ಟ್‌ ನಿರ್ಬಂಧ ಹೇರಿದೆ ಎಂದು ತಿಳಿಸಿ ತಮ್ಮ ಘಟಕದ ಕಾರ್ಯಾಚರಣೆ ನಿಲ್ಲಿಸಲು ಜಿಲ್ಲಾ ಸ್ಟೋನ್‌ ಕ್ರಷರ್‌ ಪರವಾನಗಿ ಮತ್ತು ನಿಯಂತ್ರಣ ಪ್ರಾಧಿಕಾರವು 2024ರ ಜನವರಿ 20ರಂದು ನೋಟಿಸ್‌ ನೀಡಿದೆ. ಅದಂತೆ ಘಟಕದ ಚಟುವಟಿಕೆ ಸ್ಥಗಿತಗೊಳಿಸಲಾಗಿದೆ ಎಂದು ಅರ್ಜಿದಾರರು ಅರ್ಜಿಯಲ್ಲಿ ವಿವರಿಸಿದ್ದಾರೆ.

ಕೆಆರ್‌ಎಸ್‌ ಅಣೆಕಟ್ಟಿನ 20 ಕಿಮೀ ಸುತ್ತಲಿನ ವ್ಯಾಪ್ತಿ ಪ್ರದೇಶದಿಂದ ತಮ್ಮ ಘಟಕ ಹೊರಗಿದೆ. ಸರ್ಕಾರವು ತಮ್ಮ ಘಟಕದ ಕಾನೂನುಬದ್ಧ ಚಟುವಟಿಕೆಗಳಿಗೆ ಅಡ್ಡಿ ಉಂಟು ಮಾಡಿದೆ. ಆದ್ದರಿಂದ, ಘಟಕದ ಚಟುವಟಿಕೆ ಪುನರಾರಂಭಕ್ಕೆ ಅನುಮತಿ ನೀಡಲು ಸರ್ಕಾರಕ್ಕೆ ಆದೇಶಿಸುವಂತೆ ಅರ್ಜಿದಾರರು ನ್ಯಾಯಾಲಯವನ್ನು ಕೋರಿದ್ದರು.

Kannada Bar & Bench
kannada.barandbench.com