ಕೆಆರ್‌ಎಸ್‌ ಸುರಕ್ಷತೆ ಕುರಿತ ಪ್ರಕರಣ: ಜಲಾಶಯ ಸುರಕ್ಷತಾ ಸಮಿತಿಯನ್ನು ಪಕ್ಷಕಾರನಾಗಿಸಲು ಸೂಚಿಸಿದ ಹೈಕೋರ್ಟ್‌

ಜಲಾಶಯ ಸುರಕ್ಷತಾ ಕಾಯಿದೆ 2021ರ ಪ್ರಕಾರ ಎಸ್‌ಸಿಡಿಸಿಯು ವರ್ಷದಲ್ಲಿ ಎರಡು ಸಭೆ ನಡೆಸಬೇಕು. ಇದರಲ್ಲಿ ಒಂದು ಸಭೆಯನ್ನು ಮುಂಗಾರು ಆರಂಭವಾಗುವುದಕ್ಕೂ ಮುನ್ನ ನಡೆಸಬೇಕು ಎಂದಿರುವ ಅಮಿಕಸ್‌.
Stone crushers and Karnataka HC
Stone crushers and Karnataka HC

ಗಣಿಕಾರಿಕೆಯಿಂದ ಕೃಷ್ಣರಾಜ ಸಾಗರ (ಕೆಆರ್‌ಎಸ್‌) ಜಲಾಶಯಕ್ಕೆ ಉಂಟಾಗಬಹುದಾದ ಸಂಭಾವ್ಯ ಹಾನಿಯನ್ನು ತಪ್ಪಿಸಲು ಕೋರಿದ್ದ ಪ್ರಕರಣದಲ್ಲಿ ರಾಜ್ಯ ಜಲಾಶಯ ಸುರಕ್ಷತಾ ಸಮಿತಿಯನ್ನು (ಎಸ್‌ಸಿಡಿಎಸ್‌) ಪಕ್ಷಕಾರನಾಗಿಸಲು ಕರ್ನಾಟಕ ಹೈಕೋರ್ಟ್‌ ಈಚೆಗೆ ಅರ್ಜಿದಾರರಿಗೆ ಆದೇಶಿಸಿದೆ.

ಗಣಿಗಾರಿಕೆಗೆ ಪರವಾನಗಿ ನೀಡುವುದಕ್ಕೆ ಭೂಪರಿವರ್ತನೆಗೂ ಮುನ್ನ ಪರೀಕ್ಷಾರ್ಥ ಸ್ಫೋಟ ನಡೆಸಿದ ಹಾನಿಯ ಸಾಧ್ಯತೆಯನ್ನು ಪರಿಗಣಿಸಬೇಕು ಎಂದು ಜಿಲ್ಲಾಧಿಕಾರಿ ಷರತ್ತು ವಿಧಿಸಿರುವುದನ್ನು ಪ್ರಶ್ನಿಸಿ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಸಿ ಜಿ ಕುಮಾರ್‌ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.‌ ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

“ಅಮಿಕಸ್‌ ಕ್ಯೂರಿಯಾಗಿರುವ ಹಿರಿಯ ವಕೀಲ ಆದಿತ್ಯ ಸೋಂಧಿ ಅವರ ಸಲಹೆ ಆಧರಿಸಿ ಎಸ್‌ಸಿಡಿಎಸ್‌ಯನ್ನು ಪಕ್ಷಕಾರರನ್ನಾಗಿಸಬೇಕು. ಜಲಾಶಯ ಸುರಕ್ಷತಾ ಕಾಯಿದೆ 2021ರ ಪ್ರಕಾರ ಎಸ್‌ಸಿಡಿಸಿಯು ವರ್ಷದಲ್ಲಿ ಎರಡು ಸಭೆ ನಡೆಸಬೇಕು. ಇದರಲ್ಲಿ ಒಂದು ಸಭೆಯನ್ನು ಮುಂಗಾರು ಆರಂಭವಾಗುವುದಕ್ಕೂ ಮುನ್ನ ನಡೆಸಬೇಕು. ಸಮಿತಿಯ ಸಭೆಯ ವರದಿಯನ್ನು ಈವರೆಗೆ ಸಾರ್ವಜನಿಕಗೊಳಿಸಿಲ್ಲ ಎಂದು ಅಮಿಕಸ್‌ ತಿಳಿಸಿದ್ದಾರೆ” ಎಂದು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿದೆ.

“ಅಮಿಕಸ್‌ ಕ್ಯೂರಿ ಪ್ರಾಥಮಿಕ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಅದರಲ್ಲಿ ರಾಷ್ಟ್ರೀಯ ಜಲಾಶಯ ಸುರಕ್ಷತಾ ಪ್ರಾಧಿಕಾರ ಮತ್ತು ಎಸ್‌ಸಿಡಿಎಸ್‌ ಕಾರ್ಯ ಚಟುವಟಿಕೆ ಉಲ್ಲೇಖಿಸಿದ್ದಾರೆ. ಹೀಗಾಗಿ, ಅವುಗಳನ್ನು ಪಕ್ಷಕಾರರನ್ನಾಗಿ ಮಾಡಬೇಕು ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಅರ್ಜಿಗೆ ತಿದ್ದುಪಡಿ ಸಮಿತಿಯನ್ನು ಪಕ್ಷಕಾರರನ್ನಾಗಿ ಮಾಡುವಂತೆ ಅರ್ಜಿದಾರರಿಗೆ ನಿರ್ದೇಶಿಸಲಾಗಿದೆ” ಎಂದು ನ್ಯಾಯಾಲಯ ಹೇಳಿದೆ.

“ಸಭೆ ನಡೆಸಿರುವುದಕ್ಕೆ ಸಂಬಂಧಿಸಿದ ದಾಖಲೆ ಮತ್ತು ಅದರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆಯೇ ಮತ್ತು ಅದರ ಸಂಬಂಧ ಯಾವುದಾದರೂ ಕ್ರಮಕೈಗೊಳ್ಳಲಾಗಿದೆಯೇ ಎಂಬುದರ ಮಾಹಿತಿ ನೀಡಬೇಕು” ಎಂದು ಎಸ್‌ಸಿಡಿಎಸ್‌ಗೆ ನ್ಯಾಯಾಲಯ ನಿರ್ದೇಶಿಸಿದೆ.

ಅಲ್ಲದೇ, “2018ರಲ್ಲಿ ಸ್ಥಾಪಿಸಲ್ಪಟ್ಟ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರವು (ಕೆಎಸ್‌ಎನ್‌ಡಿಎಂಸಿ) ಜಿಲ್ಲಾಧಿಕಾರಿಗೆ ಯಾವುದಾದರೂ ವರದಿ ಸಲ್ಲಿಸಿದೆಯೇ, ಒಂದೊಮ್ಮೆ ವರದಿ ನೀಡಿದ್ದರೆ ಅದನ್ನು ಏಕೆ ಸಾರ್ವಜನಿಕಗೊಳಿಸಲಾಗಿಲ್ಲ. ಇದು ಸಾರ್ವಜನಿಕಗೊಡಿದ್ದರೆ ಯಾವ ರೀತಿಯಲ್ಲಿ ಅದನ್ನು ಜನರಿಗೆ ಲಭ್ಯವಾಗಿಸಲಾಗಿದೆ. ಸುರಕ್ಷತೆ ನಿರ್ವಹಣೆ, ಭದ್ರತೆ ಅಥವಾ ಗೌಪ್ಯತೆ ಬಗ್ಗೆ ಏನಾದರೂ ಸಮಸ್ಯೆಗಳಿದ್ದರೆ ಅದನ್ನೂ ಎಸ್‌ಸಿಡಿಎಸ್‌ ವಿವರಿಸಬೇಕು” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ. ವಿಚಾರಣೆಯನ್ನು ಡಿಸೆಂಬರ್‌ 12ಕ್ಕೆ ಮುಂದೂಡಲಾಗಿದೆ.

Also Read
[ಕೆಆರ್‌ಎಸ್‌ ಸಮೀಪ ಕಲ್ಲು ಗಣಿಗಾರಿಕೆ] ಗಣಿ ಮಾಲೀಕರ ಮನವಿ ಪರಿಗಣಿಸಿ ಕ್ರಮವಹಿಸಲು ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

ಅಕ್ಟೋಬರ್‌ 10ರ ಆದೇಶದಲ್ಲಿ ನ್ಯಾಯಾಲಯವು “ಕೆಆರ್‌ಎಸ್‌ ಜಲಾಶಯದ ಸುರಕ್ಷತೆಯು ಗಂಭೀರ ವಿಷಯವಾಗಿದ್ದು, ಅದನ್ನು ನಿರ್ಲಕ್ಷಿಸಲಾಗದು. “ಕ್ವಾರಿ ಚಟುವಟಿಕೆಯ ಭಾಗವಾಗಿ ನಡೆಸುವ ಸ್ಫೋಟವು ಕೆಆರ್‌ಎಸ್‌ ಜಲಾಶಯಕ್ಕೆ ಹಾನಿ ಮಾಡುತ್ತವೆಯೇ ಎಂಬುದನ್ನು ಪರಿಶೀಲಿಸಬೇಕಿದೆ. ಸಕ್ಷಮ ಪ್ರಾಧಿಕಾರ ಯಾರೇ ಆಗಿದ್ದರೂ ಆದೇಶ ಮಾಡಬೇಕಾಗುತ್ತದೆ. ಒಂದು ಸಣ್ಣ ಲೋಪವೂ ದೊಡ್ಡ ಅಪಾಯಕ್ಕೆ ಕಾರಣವಾಗಬಹುದು. 2021ರ ಕಾಯಿದೆಯ ಹಿನ್ನೆಲೆಯಲ್ಲಿ ಜಲಾಶಯದ ಸುರಕ್ಷತೆಗೆ ಸಂಬಂಧಿಸಿದ ವಿಚಾರವು ಗಂಭೀರವಾದದ್ದು” ಎಂದಿದೆ.

ಪ್ರಕರಣದ ಹಿನ್ನೆಲೆ: ಪಾಂಡವಪುರ ತಾಲ್ಲೂಕಿನ ಹೊಂಗನಹಳ್ಳಿ ವ್ಯಾಪ್ತಿಯಲ್ಲಿನ 120 ಎಕರೆ ಭೂ ಪರಿವರ್ತನೆಗೆ ಜಿಲ್ಲಾಧಿಕಾರಿ ಷರತ್ತು ವಿಧಿಸಿರುವುದನ್ನು ಮಂಡ್ಯದ ಚಿನಕುರಳಿ ಗ್ರಾಮದ ಸಿ ಜಿ ಕುಮಾರ್‌ ಅವರು ಪ್ರಶ್ನಿಸಿದ್ದಾರೆ. ಕಾವೇರಿ ನೀರಾವರಿ ನಿಗಮ ಲಿಮಿಟೆಡ್‌ ಪರೀಕ್ಷಾರ್ಥ ಸ್ಫೋಟ ನಡೆಸಿದ ಬಳಿಕ ಭೂಪರಿವರ್ತನಾ ಆದೇಶ ಚಾಲ್ತಿಗೆ ಬರಲಿದೆ ಎಂದು 2023ರ ಮೇ 15ರಂದು ಗಣಿ ಪರವಾನಗಿ ನೀಡುವಾಗ ಜಿಲ್ಲಾಧಿಕಾರಿ ಷರತ್ತು ವಿಧಿಸಿದ್ದರು.

Related Stories

No stories found.
Kannada Bar & Bench
kannada.barandbench.com